ಕರಾವಳಿ

ಕೋಡಿ ಕಡಲ ಕಿನಾರೆ ಹ್ಯಾಚರಿಯಿಂದ ಮತ್ತೆ ಮೊಟ್ಟೆಯೊಡೆದು ಕಡಲು ಸೇರಿದ 72 ಕಡಲಾಮೆ ಮರಿಗಳು..!

Pinterest LinkedIn Tumblr

ಕುಂದಾಪುರ: ತಾಲೂಕಿನ ಕೋಡಿ ಸಮುದ್ರ ಕಿನಾರೆಯ ಲೈಟ್ ಹೌಸ್ ಬಳಿಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ಹ್ಯಾಚರಿಯಿಂದ ಮಂಗಳವಾರ ರಾತ್ರಿ 72 ಕಡಲಾಮೆ ಮರಿಗಳು ಹೊರಬಂದು ಅರಬ್ಬಿ ಕಡಲು ಸೇರಿದೆ.

ನಿರಂತರ ಕಾವಲು…
ಕಳೆದ ಜ. 22 ರಿಂದ ಮಾ. 3 ರವರೆಗೆ ಕೋಡಿ ಕಡಲ ತೀರದಲ್ಲಿ ಪತ್ತೆಯಾಗಿದ್ದ ಕಡಲಾಮೆ ಮೊಟ್ಟೆಗಳನ್ನು ಸ್ಥಳೀಯ ಸೇವಾ ಸಂಘಟನೆಯ ಕಾರ್ಯಕರ್ತರು ಹಾಗೂ ಸ್ಥಳೀಯರ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಸಿದ್ದ ಅರಣ್ಯ ಇಲಾಖೆ ಸಮುದ್ರ ತೀರದಲ್ಲಿ 11 ನೈಸರ್ಗಿಕ ಹ್ಯಾಚರಿಯನ್ನು ನಿರ್ಮಿಸಿ ಮೊಟ್ಟೆಗಳನ್ನು ರಕ್ಷಿಸಲು ಕ್ರಮ ಕೈಗೊಂಡಿದ್ದು ನಿರಂತರವಾಗಿ ಕಾವಲು ಕಾರ್ಯ ನಡೆಸಲಾಗುತ್ತಿತ್ತು.

370 ಅಧಿಕ ಕಡಲಾಮೆ ಮರಿಗಳು ಸಮುದ್ರಕ್ಕೆ…
ಈವರೆಗೆ ಒಟ್ಟು 7 ಹ್ಯಾಚರಿಗಳಿಂದ ಅಂದಾಜು 370 ಕ್ಕೂಅಧಿಕ ಮರಿಗಳು ಮೊಟ್ಟೆಯೊಡೆದು ಹೊರಬಂದು ಕಡಲು ಸೇರಿದೆ. ಸೋಮವಾರ ರಾತ್ರಿ ಕಡಲಾಮೆ ಮರಿಗಳನ್ನು ಕಡಲಿಗೆ ಸೇರಿಸುವ ಕಾರ್ಯಾಚರಣೆ ವೇಳೆ ರಾಜ್ಯ ಅರಣ್ಯ ಕಾರ್ಯ ಪಡೆ ಮುಖ್ಯಸ್ಥ , ಪಿಸಿಸಿಎಫ್ ಸಂಜಯಮೋಹನ್, ಅರಣ್ಯ ಉಪವಿಭಾಗದ ಡಿಎಫ್ಓ ಆಶೀಶ್ ರೆಡ್ಡಿ, ವಲಯಾರಣ್ಯಾಧಿಕಾರಿ ಪ್ರಭಾಕರ ಕುಲಾಲ್ , ಹಸ್ತಾ ಶೆಟ್ಟಿ ಇದ್ದರು.

ಮೊಟ್ಟೆ ಪತ್ತೆಯಾದ ದಿನದಿಂದ ನಿರಂತರವಾಗಿ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿರುವ
ಎಫ್.ಎಸ್.ಎಲ್ ಇಂಡಿಯಾ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್, ರೀಫ್ ವಾಚ್ ಸಂಸ್ಥೆ ಹಾಗೂ ಎಂಪ್ರಿ ಆರ್ ಝಡ್ ವರ್ಕರ್ಸ್ ಸಂಘಟನೆಯ ನಾಗರಾಜ್ ಶೆಟ್ಟಿ, ದಿನೇಶ್ ಸಾರಂಗ, ವೆಂಕಟೇಶ, ಲಕ್ಷ್ಮಣ ಪೂಜಾರಿ, ಸಚಿನ್ ಪೂಜಾರಿ, ರಾಘು ಬಂಗೇರಾ, ಭರತ್ ಖಾರ್ವಿ, ಸಂಪತ್, ಉದಯ್ ಖಾರ್ವಿ ಇದ್ದರು.

ಸಂರಕ್ಷಣಾ ಕೇಂದ್ರ ತೆರೆಯಲು ಮನವಿ..
ಕುಂದಾಪುರದ ಅರಣ್ಯ ಪ್ರವಾಸಿ ಮಂದಿರದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯಾದ ಸಂಜಯಮೋಹನ್ ಅವರನ್ನು ಭೇಟಿಯಾದ ಕಡಲಾಮೆ ರಕ್ಷಣಾ ತಂಡದ ಸದಸ್ಯರು, ಕಡಲಾಮೆ ಸಂತತಿ ಅಪರೂಪದ್ದಾಗಿರುವ ಹಾಗೂ ಅಳಿವಿನಂಚಿನಲ್ಲಿ ಇರುವ ಆಲಿವ್ ರೀಡ್ಲೆ ಪ್ರಬೇಧದ ಮೊಟ್ಟೆಗಳ ರಕ್ಷಣೆಗಾಗಿ ಕರಾವಳಿಯಲ್ಲಿ ಕಡಲಾಮೆ ಸಂರಕ್ಷಣಾ ಕೇಂದ್ರ ತೆರೆಯುವಂತೆ ಮನವಿ ಮಾಡಿದ್ದಾರೆ.

Comments are closed.