ಮಂಗಳೂರು, ಏಪ್ರಿಲ್.08: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್‌ರವರ ಕುಟುಂಬದ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಕೆಳಗಿನ ಕುಂಜಾಡಿ ತರವಾಡು ಮನೆಯಲ್ಲಿ ಏ.8 ಮತ್ತು ಏ.9ರಂದು ಧರ್ಮ ನೇಮೋತ್ಸವ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ.
ಏ.8 ಮತ್ತು 9ರಂದು ಉಳ್ಳಾಕುಳು, ಗ್ರಾಮ ದೈವಶ್ರೀ ಅಬ್ಬೆಜಲಾಯ, ರಕ್ತೇಶ್ವರೀ ಮತ್ತು ಧರ್ಮದೈವ ಪಿಲಿಚಾಮುಂಡಿ ಹಾಗೂ ಪರಿವಾರ ದೈವಗಳಿಗೆ ಧರ್ಮನೇಮೋತ್ಸವವು ಬಂಬಿಲಗುತ್ತು, ಮೇಗಿನ ಕುಂಜಾಡಿ, ಕೆಳಗಿನ ಕುಂಜಾಡಿ ಮಧ್ಯಸ್ಥರ ನೇತೃತ್ವದಲ್ಲಿ ನಡೆಯಲಿದೆ.
ಏ.8ರಂದು ಪೂರ್ವಾಹ್ನ 11 ಗಂಟೆಗೆ ಉಳ್ಳಾಕುಳು, ಗ್ರಾಮದೈವ, ಧರ್ಮದೈವ ಪಿಲಿಚಾಮುಂಡಿ, ರಕ್ತೇಶ್ವರಿ ಮತ್ತು ಪರಿವಾರ ದೈವಗಳ ಭಂಡಾರ ಆಗಮನವಾಗಲಿದೆ. ರಾತ್ರಿ 7.30ರಿಂದ ನೇಮೋತ್ಸವ ನಡೆಯಲಿದೆ.
ಎ.9ರಂದು ಬೆಳಗ್ಗೆ 6 ಗಂಟೆಗೆ ಅಭಯ ಪ್ರದಾನ, ಸಂಜೆ 5 ಗಂಟೆಯಿಂದ ನೇಮೋತ್ಸವ ನಡೆದು ಎ. 10ರಂದು ಬೆಳಗ್ಗೆ 6 ಗಂಟೆಗೆ ಅಭಯ ಪ್ರದಾನ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೇಂದ್ರದ ಹಾಗೂ ರಾಜ್ಯ ಸರ್ಕಾರದ ಹಲವಾರು ಸಚಿವರು, ಗಣ್ಯರು ಮಂಗಳೂರಿಗೆ ಆಗಮಿಸಿದ್ದಾರೆ. ಇನ್ನೂ ಕೆಲವರು ಆಗಮಿಸುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ನಿರ್ಧಾರವಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಅವರ ದ.ಕ.ಜಿಲ್ಲಾ ಪ್ರವಾಸವನ್ನು ರದ್ದು ಪಡಿಸಲಾಗಿದೆ.
ಕಂದಾಯ ಸಚಿವರ ಪ್ರವಾಸ ಕಾರ್ಯಕ್ರಮ:
ಕರ್ನಾಟಕ ಸರ್ಕಾರದ ಕಂದಾಯ ಸಚಿವರಾದ ಆರ್. ಅಶೋಕ್ ಅವರು ಎಪ್ರಿಲ್ 8 ಮತ್ತು 9 ರಂದು ಜಿಲ್ಲೆಯಲ್ಲಿ ಪ್ರವಾಸವನ್ನು ಕೈಗೊಳ್ಳಲಿದ್ದಾರೆ.
ಎಪ್ರಿಲ್ 8 ರಂದು ಸಂಜೆ 6.10 ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ರಾತ್ರಿ 7.45 ಕ್ಕೆ ಕಡಬ ತಾಲೂಕಿನ ಖಾಸಗಿ ಕಾರ್ಯಕ್ರಮ (ಧರ್ಮನೇಮೋತ್ಸವ)ದಲ್ಲಿ ಭಾಗವಹಿಸಲಿದ್ದಾರೆ. ನಂತರ ರಾತ್ರಿ 8.45 ಕ್ಕೆ ಧರ್ಮಸ್ಥಳಕ್ಕೆ ಪ್ರಯಾಣಿಸಿ, ವಾಸ್ತವ್ಯ ಮಾಡಲಿದ್ದಾರೆ.
ಎಪ್ರಿಲ್ 9 ರಂದು ಮಧ್ಯಾಹ್ನ 3.45 ಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ನಂತರ ಸಂಜೆ 4.40 ಕ್ಕೆ ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
ಸಹಕಾರ ಸಚಿವರ ಪ್ರವಾಸ ಕಾರ್ಯಕ್ರಮ:
ಕರ್ನಾಟಕ ಸರ್ಕಾರದ ಸಹಕಾರ ಸಚಿವರಾದ ಎಸ್. ಟಿ. ಸೋಮಶೇಖರ್ ಅವರು ಎಪ್ರಿಲ್ 8 ಮತ್ತು 9 ರಂದು ಜಿಲ್ಲೆಯಲ್ಲಿ ಪ್ರವಾಸವನ್ನು ಕೈಗೊಳ್ಳಲಿದ್ದಾರೆ.
ಎಪ್ರಿಲ್ 8 ರಂದು ಸಂಜೆ 4.10 ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಸಂಜೆ 5 ಗಂಟೆಗೆ ಸಹಕಾರ ಇಲಾಖೆಗಳೊಂದಿಗೆ ಸಭೆ ನಡೆಸಲಿದ್ದಾರೆ. 6.30 ಗಂಟೆಗೆ ಕಡಬ ತಾಲೂಕಿನ ಖಾಸಗಿ ಕಾರ್ಯಕ್ರಮ (ಧರ್ಮನೇಮೋತ್ಸವ)ದಲ್ಲಿ ಭಾಗವಹಿಸಿ, ವಾಸ್ತವ್ಯ ಮಾಡಲಿದ್ದಾರೆ.
ಎಪ್ರಿಲ್ 9 ರಂದು ಬೆಳಿಗ್ಗೆ 8.25 ಕ್ಕೆ ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಸಚಿವರ ಪ್ರವಾಸ:
ಕರ್ನಾಟಕ ಸರ್ಕಾರದ ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಮುರುಗೇಶ ಆರ್. ನಿರಾಣಿ ಅವರು ಎಪ್ರಿಲ್ 8 ಮತ್ತು 9 ರಂದು ಜಿಲ್ಲೆಯಲ್ಲಿ ಪ್ರವಾಸವನ್ನು ಕೈಗೊಳ್ಳಲಿದ್ದಾರೆ.
ಎಪ್ರಿಲ್ 8 ರಂದು ಸಂಜೆ 4.15 ಕ್ಕೆ ಮಂಗಳೂರಿಗೆ ಆಗಮಿಸಿ, ಸಂಜೆ 4.30 ಕ್ಕೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಗಣಿ ಮತ್ತು ಭೂವಿಜ್ಞಾನ, ಅರಣ್ಯ, ಕಂದಾಯ, ಪೊಲೀಸ್ ಪರಿಸರ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ನಂತರ ಸಂಜೆ 6.30 ಕ್ಕೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ರಾತ್ರಿ 9 ಗಂಟೆಗೆ ಕಡಬ ತಾಲೂಕಿನ ಖಾಸಗಿ ಕಾರ್ಯಕ್ರಮ (ಧರ್ಮನೇಮೋತ್ಸವ)ದಲ್ಲಿ ಭಾಗವಹಿಸಲಿದ್ದಾರೆ. ನಂತರ ಮಂಗಳೂರಿಗೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ.
ಎಪ್ರಿಲ್ 9 ರಂದು ಬೆಳಿಗ್ಗೆ 11.30 ಕ್ಕೆ ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
ಪಶುಸಂಗೋಪನೆ ಸಚಿವರ ಪ್ರವಾಸ ಕಾರ್ಯಕ್ರಮ:
ಕರ್ನಾಟಕ ಸರ್ಕಾರದ ಪಶುಸಂಗೋಪನೆ ಸಚಿವರಾದ ಪ್ರಭು. ಬಿ. ಚೌವ್ಹಾಣ್ ಅವರು ಎಪ್ರಿಲ್ 8 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಅಂದು ಬೆಳಿಗ್ಗೆ 9 ಗಂಟೆಗೆ ಮೀನುಗಾರಿಕಾ ಮಹಾವಿದ್ಯಾಲಯಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಮಂಗಳೂರು ಕುಲಶೇಕರದ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟ ನಿಯಮಿತದ ಘಟಕಕ್ಕೆ ಭೇಟಿ ನೀಡಲಿದ್ದಾರೆ. ನಂತರ ರಾತ್ರಿ 9.05 ಕ್ಕೆ ಮಂಗಳೂರಿನಿಂದ ಹೈದರಾಬಾದ್‍ಗೆ ಪ್ರಯಾಣ ಬೆಳೆಸಲಿದ್ದಾರೆ.
ತರವಾಡು ಮನೆಯಲ್ಲಿ 60 ವರ್ಷಗಳ ಬಳಿಕ ನೇಮೋತ್ಸವ:
ಕುಂಜಾಡಿ ಕುಟುಂಬದ ಸಂಕಲ್ಪದಂತೆ ಈ ಸೇವೆಯನ್ನು ಮಾಡಲಾಗುತ್ತಿದೆ. ಕುಟುಂಬದ ದೈವದ ಜೊತೆಗೆ ಗ್ರಾಮದ ದೈವಗಳಿಗೂ ಧರ್ಮನೇಮವನ್ನು ನೀಡಲಾಗುತ್ತದೆ. ಸಾಂಪ್ರದಾಯಿಕವಾಗಿ 12 ವರ್ಷಗಳಿಗೊಮ್ಮೆ ಧರ್ಮ ನೇಮೋತ್ಸವ ನಡೆಸಲಾಗುತ್ತದೆ. ಆದರೆ ಕುಂಜಾಡಿ ತರವಾಡು ಮನೆಯಲ್ಲಿ 60 ವರ್ಷಗಳ ಬಳಿಕ ಈ ನೇಮೋತ್ಸವ ನಡೆಸಲಾಗುತ್ತಿದೆ.
150 ಎಕರೆ ಪ್ರದೇಶದಲ್ಲಿ ವ್ಯವಸ್ಥೆ:
ಕೋವಿಡ್ ಹಿನ್ನೆಲೆಯಲ್ಲಿ ಸುರಕ್ಷಿತ ಅಂತರ, ಮಾಸ್ಕ್ ಧಾರಣೆ ಹೀಗೆ ಕೋವಿಡ್ ಕುರಿತ ಸರ್ಕಾರದ ನಿಯಮ ಪಾಲನೆಯೊಂದಿಗೆ ಈ ನೇಮೋತ್ಸವ ನಡೆಯಲಿದೆ. 150 ಎಕರೆ ಪ್ರದೇಶದಲ್ಲಿ ನೇಮೋತ್ಸವಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅನ್ನ ಸಂತರ್ಪಣೆ ವೇಳೆ ತಲಾ 500 ಮಂದಿಯಂತೆ ಹಲವು ಕಡೆಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ
ಬರುವ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ,ಕೋವಿಡ್ ತಪಾಸಣಾ ವ್ಯವಸ್ಥೆ, ಕೋವಿಡ್ ವ್ಯಾಕ್ಸಿನ್ ಪಡೆದುಕೊಳ್ಳುವವರಿಗೆ ವ್ಯಾಕ್ಸಿನ್ ವ್ಯವಸ್ಥೆ, ಆಂಬ್ಯುಲೆನ್ಸ್, ವೈದ್ಯಕೀಯ ವ್ಯವಸ್ಥೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಇರಲಿವೆ. ಮಾಸ್ಕ್‌ಧರಿಸದೇ ಬಂದರೆ ಮಾಸ್ಕ್ ನೀಡಿಯೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು.
ಅಲ್ಲಲ್ಲಿ ಸ್ಯಾನಿಟೈಸರ್ ವ್ಯವಸ್ಥೆಯನ್ನೂ ಮಾಡಲಾಗುವುದು. ಕೋವಿಡ್ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡುವುದರೊಂದಿಗೆ ಕಾರ್ಯಕ್ರಮಗಳು ನಡೆಯಲಿವೆ. ಕೋವಿಡ್ ಹಿನ್ನೆಲೆಯಲ್ಲಿ ನಿಗದಿತ ಯಕ್ಷಗಾನ ಬಯಲಾಟ ಹಾಗೂ ಯಕ್ಷಗಾನ ತಾಳಮದ್ದಳೆಯನ್ನು ಹೊರತುಪಡಿಸಿ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
Comments are closed.