ಮಂಗಳೂರು : ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ವಾರಾಂತ್ಯದಲ್ಲಿ ಹೇರಿರುವ ಲಾಕ್ ಡೌನ್ ಹಾಗೂ ಇನ್ನಿತರ ದಿನಗಳಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪೂರ್ವ ನಿಗದಿತ ಮದುವೆ ಕಾರ್ಯಕ್ರಮದಲ್ಲಿ 50 ಜನರಿಗೆ ಭಾಗವಹಿಸಲು ಅನುಮತಿ ನೀಡಲಾಗಿದೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಶಾಸಕ ಕಾಮತ್, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪೂರ್ವ ನಿಗದಿಯಾಗಿರುವ ಮದುವೆ ಕಾರ್ಯಕ್ರಮಗಳಿಗೆ 50 ಜನರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ಮದುವೆ ಕಾರ್ಯಕ್ರಮದಲ್ಲಿ ವಧು ವರರ ಕಡೆಯವರನ್ನು ಹಾಗೂ ಫೋಟೋಗ್ರಾಫರ್, ಬ್ಯೂಟಿಷನ್, ಅರ್ಚಕರು ಸೇರಿದಂತೆ 50 ಜನರಿಗೆ ಭಾಗವಹಿಸಬಹುದು.
ಇದಕ್ಕಾಗಿ ಕಾರ್ಯಕ್ರಮದ ಆಯೋಜಕರು ಮಂಗಳೂರು ಮಹಾನಗರ ಪಾಲಿಕೆಯಲ್ಲಿರುವ ನನ್ನ ಕಚೇರಿಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಬಂದರೆ ಅನುಮತಿ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಿ ಅನುಮತಿ ಒದಗಿಸಲಾಗುವುದು ಎಂದು ಶಾಸಕ ಕಾಮತ್ ಹೇಳಿದರು.
ಸಭಾಂಗಣಗಳಲ್ಲಿ ಕೋವಿಡ್ ನಿಯಂತ್ರಣ ಮಾರ್ಗ ಸೂಚಿಗಳನ್ನು ಪಾಲಿಸಿಕೊಂಡು ಮದುವೆ ಕಾರ್ಯಕ್ರಮ ನಡೆಸಬಹುದು. ಅದಕ್ಕಾಗಿ ಆಯೋಜಕರು ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿಗೆ ಮನವಿ ಪತ್ರ, ಭಾಗವಹಿಸುವ 50 ಜನರ ಹೆಸರು, ದೂರವಾಣಿ ಸಂಖ್ಯೆ ಹಾಗೂ ಮದುವೆ ಆಮಂತ್ರಣ ಪತ್ರಿಕೆಯೊಂದಿಗೆ ನನ್ನ ಕಚೇರಿಗೆ ತಲುಪಿಸಿದರೆ ಅನುಮತಿ ನೀಡುವ ನಿಟ್ಟಿನಲ್ಲಿ ನನ್ನ ಕಚೇರಿ ಕಾರ್ಯಾಚರಿಸಲಿದೆ ಎಂದರು.
ಅನುಮತಿ ಪತ್ರ ದೊರೆತವರು ಸಮಾರಂಭಗಳಿಗೆ ತೆರಳುವ ಸಂದರ್ಭದಲ್ಲಿ ತಮ್ಮ ಹೆಸರು ಇರುವ ಅನುಮತಿ ಪತ್ರ, ಆಧಾರ್ ಕಾರ್ಡ್ ಹಾಗೂ ಮದುವೆ ಆಮಂತ್ರಣ ಪತ್ರಿಕೆಯ ಪ್ರತಿ ತೋರಿಸಬಹುದು.ಅಥವ ತಮ್ಮ ಮೊಬೈಲ್ ನಲ್ಲಿ ತೋರಿಸಿದರೂ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ ಎಂದು ಶಾಸಕ ಕಾಮತ್ ಹೇಳಿದ್ದಾರೆ.
Comments are closed.