ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಹೋಟೆಲ್ ಅಸೋಸಿಯೇಷನ್ (ರಿ) ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ನಗರದ ದೀಪಾ ಕಂಫರ್ಟ್ಸ್ ಸಭಾಂಗಣದಲ್ಲಿ ಉಚಿತ ಕೋವಿಡ್ ಲಸಿಕೆ ಶಿಬಿರ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ಮ.ನ.ಪಾ. ಮುಖ್ಯ ಸಚೇತಕರು ಹಾಗೂ ಸ್ಥಳೀಯ ಕಾರ್ಪೊರೇಟರ್ ಸುಧೀರ್ ಶೆಟ್ಟಿ ಕಣ್ಣೂರು ಉದ್ಘಾಟಿಸಿ ಪ್ರಶಂಸೆ ವ್ಯಕ್ತಪಡಿಸಿ ಶುಭ ಕೋರಿದರು.
ಹೋಟೆಲ್ ಅಸೋಸಿಯೇಷನ್ ಮಂಗಳೂರಿನ ಗೌರವಾಧ್ಯಕ್ಷರಾದ ರಾಜ್ ಗೋಪಾಲ್ ರೈ ಅವರು ಮಾತನಾಡಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಕೆಲವರು ಇನ್ನೂ ಭಯ ಪಡುತ್ತಾರೆ, ಆದರೆ ಆತಂಕಗೊಳ್ಳುವ ಅಗತ್ಯವಿಲ್ಲ. ಪ್ರತಿಯೊಬ್ಬರೂ ವ್ಯಾಕ್ಸಿನ್ ಹಾಕಿಸಿಕೊಳ್ಳವ ಮೂಲಕ ಆರೋಗ್ಯವಂತರಾಗಿ ಕೋವಿಡ್ ಸೋಂಕಿನಿಂದ ದೂರವಿರಲು ಸಾಧ್ಯವಾಗುತ್ತದೆ. ಹೋಟೆಲ್ ನ ಎಲ್ಲಾ ಕಾರ್ಮಿಕರಿಗೆ ಲಸಿಕೆ ಹಾಕಿಸುವ ಮೂಲಕ ಗ್ರಾಹಕರಿಗೆ ಆಗಮಿಸಲು ಮತ್ತಷ್ಟು ಧೈರ್ಯ ತುಂಬುತ್ತದೆ ಎಂದರು.
ಕೊವಿಡ್ ನ ಸಂಕಷ್ಟದ ಸಂಧರ್ಭದಲ್ಲಿ ಕಾರ್ಮಿಕರ ಆರೋಗ್ಯ ಹಾಗೂ ಹಿತಾಸಕ್ತಿ ಕಾಪಾಡಿಕೊಳ್ಳುವಲ್ಲಿ ಹೋಟೆಲ್ ಅಸೋಸಿಯೇಷನ್ ನ ಪದಾಧಿಕಾರಿಗಳು ಹೋಟೆಲ್ ಮಾಲಿಕರ ಜೊತೆ ನಿರಂತರ ಸಂಪರ್ಕವನ್ನು ಇಟ್ಟುಕೊಂಡಿದ್ದು ಸದಾ ಸ್ಪಂದಿಸುತ್ತಿದ್ದಾರೆ. ಇದೀಗ ಏರಡನೆ ಬಾರಿಗೆ ಕಾರ್ಮಿಕರಿಗೆ ಲಸಿಕೆ ನೀಡುವ ವ್ಯವಸ್ಥೆಯನ್ನು ಮಾಡಲಾಗಿದ್ದು ಇದರ ಸದುಪಯೋಗವನ್ನು ಪಡೆದು ಕೊಳ್ಳುವಂತೆ ಕೋರಿದರು.
ಶಿಬಿರಕ್ಕೆ ಆಗಮಿಸಿದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ರವರು ಹೋಟೆಲ್ ಅಸೋಸಿಯೇಷನ್ ಹಮ್ಮಿಕೊಂಡ ಲಸಿಕೆ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಅಗತ್ಯವಿದ್ದಲ್ಲಿ ಇನ್ನೂ ಒಂದು ಶಿಬಿರವನ್ನು ಏರ್ಪಡಿಸುವ ಮೂಲಕ ಮನೆ ಮನೆಗೆ ಆಹಾರವನ್ನು ಸರಬರಾಜು ಮಾಡುವ ಡೆಲಿವರಿ ಹುಡುಗರಿಗೂ ಕೊಡಿಸುವಂತೆ ಹೋಟೆಲ್ ಅಸೋಸಿಯೇಷನ್ ನ ಪದಾಧಿಕಾರಿಗಳಿಗೆ ಸೂಚಿಸಿ ಇದಕ್ಕೆ ಪೂರಕ ಸಹಕಾರವನ್ನು ನೀಡುವ ಭರವಸೆ ಕೊಟ್ಟರು. ತನ್ನ ಕ್ಷೇತ್ರದಲ್ಲಿ ಶೇ. 100 ರ ರಷ್ಟು ಲಸಿಕೆ ನೀಡುವುದಾಗಿ ಭರವಸೆ ನೀಡುವ ಉದ್ದೇಶವಿದೆ ಎಂದು ತಿಳಿಸಿದರು.
ಹೋಟೆಲ್ ಅಸೋಸಿಯೇಷನ್ ನ ಅಧ್ಯಕ್ಷರಾದ ಚಂದ್ರಹಾಸ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವೈದ್ಯೆ ಡಾಕ್ಟರ್ ಧನಶ್ರೀ, ಕೋಶಾಧಿಕಾರಿ ಅಬ್ರಾರ್ ಅಹಮದ್, ಜೊತೆ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಹಾಗೂ ದೀಪಾ ಕಂಫರ್ಟ್ಸ್ , ಡಿಜಿಟಲ್ ಪ್ಲಾನೆಟ್ ನ ಮಾಲೀಕರಾದ ಸ್ವೀಕೃತ್ ಮತ್ತು ಅಸೋಸಿಯೇಷನ್ ನ ಪದಾಧಿಕಾರಿಗಳು ಉಪಸ್ಥಿತರಿದ್ದು ಶಿಬಿರದಲ್ಲಿ ಸಹಕರಿಸಿದರು.
ಅಸೋಸಿಯೇಷನ್ ನ ಕಾರ್ಯದರ್ಶಿ ನಿಶಾಂಕ್ ಸುವರ್ಣ ಅವರು ಧನ್ಯವಾದ ಸಮರ್ಪಿಸಿದರು
Comments are closed.