ಬೆಂಗಳೂರು, ಜೂನ್.28 : ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರೇಖಾ ಅವರ ನಾದಿನಿ ಮತ್ತು ಆಕೆಯ ಮಗ ಸೇರಿದಂತೆ ಈತನಕ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದು, ವಿಚಾರಣೆ ವೇಳೆ ವ್ಯಕ್ತವಾಗಿದೆ.
ಕಾಟನ್‍ಪೇಟೆಯ ರೌಡಿಯೊಬ್ಬ ರೇಖಾ ಅವರ ಕೊಲೆಗೆ ಕುಮ್ಮಕ್ಕು ನೀಡಿದ್ದಾನೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಈ ನಿಟ್ಟಿನಲ್ಲಿ ಕಾಟನ್‍ಪೇಟೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಮಾಲಾ ಹಾಗೂ ಆಕೆಯ ಪುತ್ರ ಅರುಳ್, ಪೀಟರ್, ಸೂರ್ಯ ಸೇರಿದಂತೆ ಪ್ರಮುಖ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಪೊಲೀಸರಿಗೆ ಹಲವು ಮಹತ್ವದ ವಿಷಯಗಳು ತಿಳಿದು ಬಂದಿದ್ದು, ಪ್ರಕರಣದಲ್ಲಿ ಇನ್ನು ಕೆಲವರು ಭಾಗಿಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿರುವುದರಿಂದ ಅವರನ್ನು ಬಂಧಿಸಲು ಕಾಟನ್‍ಪೇಟೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.
ರಾಜಕೀಯವಾಗಿ ಬಹಳಷ್ಟು ಬೆಳೆಯುತ್ತಿದ್ದ ರೇಖಾ ಅವರು ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ಸಹ ನಡೆಸುತ್ತಿದ್ದರು. ಇದು ನಾದಿನಿ ಮಾಲಾ ಅವರಿಗೆ ಬಹಳಷ್ಟು ಕೋಪ ಬಂದಿತ್ತು. ಹೇಗಾದರೂ ಮಾಡಿ ತನ್ನ ಸಹೋದರ ಪ್ರತಿನಿಧಿಸುತ್ತಿದ್ದ ಛಲವಾದಿ ಪಾಳ್ಯ ವಾರ್ಡ್‍ನ ಹಿಡಿತ ಸಾಧಿಸಬೇಕೆಂದು ಅವರು ಪ್ರಯತ್ನಿಸುತ್ತಿದ್ದರು.
ತನ್ನ ಮನೆಯಲ್ಲಿರುವ ಮೂವರು ಮಹಿಳೆಯರಲ್ಲಿ ಯಾರಾದರೂ ಒಬ್ಬರು ಚುನಾವಣೆಯಲ್ಲಿ ಗೆದ್ದು , ಕಾಪೆರ್ರೇಟರ್ ಆಗಬೇಕೆಂಬ ಮಹದಾಸೆ ಮಾಲಾ ಅವರದಾಗಿತ್ತು. ಇದಕ್ಕೆ ಅಡ್ಡಿಯಾಗಿದ್ದವರು ರೇಖಾ. ಆಕೆಯನ್ನು ಮುಗಿಸಿದರೆ ತನ್ನ ಕಾರ್ಯ ಸುಲಭ ಎಂದು ಯೋಚಿಸುತ್ತಿದ್ದರು.
ಈ ಹಿನ್ನೆಲೆಯಲ್ಲಿ ಮಾಲಾ ಆರೋಪಿಗಳಾದ ಪೀಟರ್, ಸೂರ್ಯ ಮತ್ತು ಸ್ಟೀಫನ್ ಅವರಿಗೆ ಹಣದ ಸಹಾಯ ಮಾಡುವುದಾಗಿ ಹೇಳಿ ಕೊಲೆ ಮಾಡಿಸಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
Comments are closed.