ಉಡುಪಿ: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪಿನಕೋಟೆ ಎಂಬಲ್ಲಿರುವ ಫ್ಲ್ಯಾಟ್ ನಲ್ಲಿ ಮಹಿಳೆಯೊಬ್ಬರನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಸೋಮವಾರ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಗಂಗೊಳ್ಳಿ ಮೂಲದ ಪ್ರಸ್ತುತ ಉಪ್ಪಿನಕೋಟೆ ಕುಮ್ರಗೋಡು ಎಂಬಲ್ಲಿನ ಫ್ಲ್ಯಾಟ್ ನಲ್ಲಿ ವಾಸವಾಗಿದ್ದ ವಿಶಾಲ ಗಾಣಿಗ(36) ಎಂದು ಗುರುತಿಸಲಾಗಿದೆ.
ಗಂಡ ರಾಮಕೃಷ್ಣ ಗಾಣಿಗನೊಂದಿಗೆ ವಿದೇಶದಲ್ಲಿ ವಾಸವಾಗಿದ್ದ ವಿಶಾಲ ಗಾಣಿಗ ತನ್ನ 7ವರ್ಷದ ಮಗಳೊಂದಿಗೆ ಜೂನ್ 30ರಂದು ಊರಿಗೆ ಆಗಮಿಸಿದ್ದರು. ತಂದೆ ಹಾಗೂ ಮಗಳ ಜೊತೆ ಸೋಮವಾರ ಗಂಗೊಳ್ಳಿಯ ಮನೆಗೆ ಹೋಗಿದ್ದು ತನಗೆ ಬ್ಯಾಂಕ್ ನಲ್ಲಿ ಕೆಲಸವಿದೆ ಎಂದು ಬ್ರಹ್ಮಾವರಕ್ಕೆ ವಾಪಸಾಗಿದ್ದರು. ಮಧ್ಯಾಹ್ನ ಊಟಕ್ಕೂ ಬಾರದೆ ಇದ್ದದ್ದನ್ನು ಗಮನಿಸಿ ಮಗಳಿಗೆ ತಂದೆ ಫೋನ್ ಮಾಡಿದ್ದು ಕರೆ ಸ್ವೀಕರಿಸಿರಲಿಲ್ಲ ಎನ್ನಲಾಗಿದೆ. ಸತತ ಕರೆ ಮಾಡಿದ್ದರೂ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ ಅವರು ತನ್ನ ಇನ್ನೊಬ್ಬ ಮಗಳ ಜೊತೆ ಉಪ್ಪಿನಕೋಟೆಗೆ ಬಂದು ನೋಡಿದಾಗ ವಿಶಾಲ ಗಾಣಿಗ ಅಪಾರ್ಟ್ಮೆಂಟ್ ನ ರೂಮ್ ನಲ್ಲಿ ಕುತ್ತಿಗೆಗೆ ವಯರ್ ಬಿಗಿದ ಸ್ಥಿತಿಯಲ್ಲಿ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.
ಮೂಲಗಳ ಪ್ರಕಾರ ವಿಶಾಲ ಅವರ ಕುತ್ತಿಗೆಯಲ್ಲಿದ್ದ ಸರ ಹಾಗೂ ಕೈಯಲ್ಲಿದ್ದ ಬಳೆ ಬಿಟ್ಟರೆ ಮನೆಯಲ್ಲಿದ್ದ ಯಾವುದೇ ಚಿನ್ನಾಭರಣ ಕಳವಾಗಿಲ್ಲ ಎನ್ನಲಾಗಿದೆ. ಪೊಲೀಸರು ವಿಶಾಲ ಗಾಣಿಗ ಫೋನ್ ವಶಕ್ಕೆ ಪಡೆದಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ, ಡಿವೈಎಸ್ಪಿ ಸದಾನಂದ ನಾಯಕ್, ಬ್ರಹ್ಮಾವರ ಸಿಪಿಐ ಅನಂತಪದ್ಮನಾಭ, ಉಡುಪಿ ಇನ್ಸ್‌ಪೆಕ್ಟರ್ ಪ್ರಮೋದ್ ಕುಮಾರ್, ಮಲ್ಪೆ ಸರ್ಕಲ್ ಇನ್ಸ್‌ಪೆಕ್ಟರ್ ಶರಣಗೌಡ, ಬ್ರಹ್ಮಾವರ ಠಾಣಾಧಿಕಾರಿ ಗುರುನಾಥ್ ಹಾದಿಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಫೊರೆನ್ಸಿಕ್ ತಂಡ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
Comments are closed.