ಕರಾವಳಿ

ಬ್ರಹ್ಮಾವರ ಫ್ಲ್ಯಾಟ್’ನಲ್ಲಿ ಮಹಿಳೆ ಕೊಲೆ ಪ್ರಕರಣದ ತನಿಖೆ ಚುರುಕು; ಸ್ಥಳಕ್ಕೆ ಐಜಿಪಿ‌ ದೇವಜ್ಯೋತಿ ರೇ ಭೇಟಿ

Pinterest LinkedIn Tumblr

ಉಡುಪಿ: ಕಳೆದೆರಡು ದಿನಗಳ ಹಿಂದೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪಿನಕೋಟೆ ಎಂಬಲ್ಲಿರುವ ಫ್ಲ್ಯಾಟ್ ನಲ್ಲಿ ಕೊಲೆಯಾದ ಗಂಗೊಳ್ಳಿ ಮೂಲದ ಪ್ರಸ್ತುತ ಉಪ್ಪಿನಕೋಟೆ ಕುಮ್ರಗೋಡು ಎಂಬಲ್ಲಿನ ಫ್ಲ್ಯಾಟ್‌ ವಾಸಿ ವಿಶಾಲ ಗಾಣಿಗ(36) ಅಪಾರ್ಟ್‌ಮೆಂಟ್ ಗೆ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಐಜಿಪಿ ಭೇಟಿ ಸಂದರ್ಭದಲ್ಲಿ ಮಾಧ್ಯಮದವರನ್ನು ಒಳಗೆ ಬಿಟ್ಟಿರಲಿಲ್ಲ. ತನಿಖೆ ಹಂತದಲ್ಲಿರುವುದರಿಂದ ಈಗ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಎಸ್ಪಿ ತಿಳಿಸಿದರು.

ಈ ಸಂದರ್ಭ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಷ್ಣುವರ್ಧನ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕುಮಾರಚಂದ್ರ, ಡಿವೈಎಸ್ಪಿ ಸದಾಶಿವ ನಾಯಕ್‌, ಬ್ರಹ್ಮಾವರ ಸಿಪಿಐ ಅನಂತಪದ್ಮನಾಭ, ಉಡುಪಿ ಇನ್ಸ್‌ಪೆಕ್ಟರ್ ಪ್ರಮೋದ್‌ ಕುಮಾರ್‌, ಬ್ರಹ್ಮಾವರ ಠಾಣಾಧಿಕಾರಿ ಗುರುನಾಥ್‌ ಹಾದಿಮನಿ ಇದ್ದರು.

(ಕೊಲೆಯಾದ ಮಹಿಳೆ)

ಘಟನೆ ಹಿನ್ನೆಲೆ:
ಎರಡು‌ ದಿನಗಳ ಹಿಂದೆ ಕುತ್ತಿಗೆಗೆ ವಯರ್ ನಿಂದ ಬಿಗಿದ ಸ್ಥಿತಿಯಲ್ಲಿ ವಿಶಾಲ ಗಾಣಿಗ ಮೃತದೇಹ ಅಪಾರ್ಟ್‌ಮೆಂಟ್ ಕೋಣೆಯಲ್ಲಿ ಪತ್ತೆಯಾಗಿತ್ತು. ಗಂಡ ರಾಮಕೃಷ್ಣ ಗಾಣಿಗನೊಂದಿಗೆ ವಿದೇಶದಲ್ಲಿ ವಾಸವಾಗಿದ್ದ ವಿಶಾಲ ಗಾಣಿಗ ತನ್ನ 7ವರ್ಷದ ಮಗಳೊಂದಿಗೆ ಜೂನ್‌ 30ರಂದು ಊರಿಗೆ ಆಗಮಿಸಿದ್ದರು. ತಂದೆ ಹಾಗೂ ಮಗಳ ಜೊತೆ ಸೋಮವಾರ ಗಂಗೊಳ್ಳಿಯ ಮನೆಗೆ ಹೋಗಿದ್ದು ತನಗೆ ಬ್ಯಾಂಕ್ ನಲ್ಲಿ ಕೆಲಸವಿದೆ ಎಂದು ಆಟೋ ರಿಕ್ಷಾದಲ್ಲಿ ವಾಪಾಸ್ ಬ್ರಹ್ಮಾವರಕ್ಕೆ ವಾಪಸಾಗಿದ್ದರು. ಮಧ್ಯಾಹ್ನ ಊಟಕ್ಕೂ ಬಾರದೆ ಇದ್ದದ್ದನ್ನು ಗಮನಿಸಿ ಮಗಳಿಗೆ ತಂದೆ ಫೋನ್‌ ಮಾಡಿದ್ದು ಕರೆ ಸ್ವೀಕರಿಸಿರಲಿಲ್ಲ ಎನ್ನಲಾಗಿದೆ. ಸತತ ಕರೆ ಮಾಡಿದ್ದರೂ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ ಅವರು ತನ್ನ ಇನ್ನೊಬ್ಬ ಮಗಳ ಜೊತೆ ಉಪ್ಪಿನಕೋಟೆಗೆ ಬಂದು ನೋಡಿದಾಗ ವಿಶಾಲ ಗಾಣಿಗ ಅಪಾರ್ಟ್ಮೆಂಟ್ ನ ರೂಮ್ ನಲ್ಲಿ ಕುತ್ತಿಗೆಗೆ ವಯರ್ ಬಿಗಿದ ಸ್ಥಿತಿಯಲ್ಲಿ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.

ವಿಶಾಲ ಅವರ ಕುತ್ತಿಗೆಯಲ್ಲಿದ್ದ ಸರ ಹಾಗೂ ಕೈಯಲ್ಲಿದ್ದ ಬಳೆ ಸಹಿತ 2 ಲಕ್ಷ ಮೌಲ್ಯದ ಚಿನ್ನಾಭರಣ ಕಳವಾಗಿದೆ ಎಂದು ತಂದೆ ದೂರಿನಲ್ಲಿ ತಿಳಿಸಿದ್ದರು. ಘಟನೆಗೆ ಸಂಬಂಧಿಸಿ ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಾಗಿದ್ದು ಈಗಾಗಾಲೇ ರಿಕ್ಷಾ ಚಾಲಕ ಸಹಿತ ಹಲವರನ್ನು ವಿಚಾರಣೆಗೊಳಪಡಿಸಲಾಗಿದೆ.

Comments are closed.