(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ತಾಲೂಕಿನ ಕೋಟೇಶ್ವರ ಸಮೀಪದ ಕಾಳಾವರ-ಅಸೋಡು ಎಂಬಲ್ಲಿನ ಡ್ರೀಮ್ ಫೈನಾನ್ಸ್ ಸಂಸ್ಥೆಯ ಪಾಲುದಾರ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅದೇ ಫೈನಾನ್ಸ್ ಸಂಸ್ಥೆಯ ಇನ್ನೋರ್ವ ಪಾಲುದಾರ ಅನೂಪ್ ಶೆಟ್ಟಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದು ಸೋಮವಾರ ಮಧ್ಯಾಹ್ನದ ಸುಮಾರಿಗೆ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ಪೊಲೀಸ್ ಅಭಿರಕ್ಷೆಗೆ (ಪೊಲೀಸ್ ಕಸ್ಟಡಿ) ನೀಡಬೇಕೆಂಬ ಅಭಿಯೋಜನೆ ಪರ ವಾದ ಆಲಿಸಿದ 1ನೇ ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ನಾಗರತ್ನಮ್ಮ ಆರೋಪಿಯನ್ನು ಆ.9 ಸೋಮವಾರ ತನಕ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದ್ದು ಅಭಿಯೋಜನೆ ಪರ ಸಹಾಯಕ ಸರಕಾರಿ ಅಭಿಯೋಜಕಿ ವರ್ಷಾಶ್ರೀ ವಾದಿಸಿದ್ದರು.
(ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು)
ಆರೋಪಿ ಹೆಚ್ಚಿನ ತನಿಖೆಗೆ ಗೋವಾಕ್ಕೆ….
ಕೊಲೆ ಕೃತ್ಯ ನಡೆಸುವ ಮುಂಚೆಯೇ ಫ್ಲಾನ್ ರೂಪಿಸಿದ್ದ ಆರೋಪಿ ಅನುಪ್ ಶೆಟ್ಟಿ ಗೋವಾದ ಹೊಟೇಲ್ ಒಂದರಲ್ಲಿ ಕೊಲೆಯ ಮೂರು ದಿನಗಳ ಹಿಂದೆಯೇ ರೂಮ್ ಕಾಯ್ದಿರಿಸಿದ್ದ ಹಾಗೂ ಕಾರಿನಲ್ಲಿ ಜಿ.ಪಿಎಸ್ ಇದ್ದು ಈ ಮೂಲಕ ಪೊಲೀಸರು ಆರೋಪಿ ಜಾಡು ಹಿಡಿದಿದ್ದರು ಎನ್ನುವ ಊಹಾಪೋಹಗಳು ಇತ್ತಾದರೂ ಅದು ಸುಳ್ಳು ಎಂದು ಪೊಲೀಸರು ಹೇಳಿದ್ದಾರೆ. ಕೊಲೆ ಮಾಡಿದ ಬಳಿಕ ಅಜೇಂದ್ರ ಶೆಟ್ಟಿಯ ಚಿನ್ನದ ಚೈನ್ ಹಾಗೂ ಹೊಸ ಹೋಂಡಾ ಸಿಟಿ ಕಾರು ಸುಲಿಗೆ ಮಾಡಿ ಫೈನಾನ್ಸ್ ಎದುರೇ ತನ್ನ ಬುಲ್ಲೇಟ್ ಬಿಟ್ಟು ಕಾರಿನಲ್ಲಿ ಅನೂಪ್ ಪರಾರಿಯಾಗಿದ್ದ. ಈ ಹಿಂದೆ ಮೋಜುಮಸ್ತಿಗೆ ಗೋವಾಕ್ಕೆ ಹೋಗಿಬರುತ್ತಿದ್ದ ಅನೂಪ್ ಚಲನವಲನ ಖಾತ್ರಿಪಡಿಸಿಕೊಂಡ ಪೊಲೀಸರ ವಿಶೇಷ ತಂಡ ಹಲವು ಕಡೆಗಳಲ್ಲಿ ಸಿಸಿ ಟಿವಿ ದಾಖಲೆಗಳನ್ನು ಪರಿಶೀಲಿಸಿದಾಗ ಹೋಂಡಾ ಸಿಟಿಕಾರು ಗೋವಾದತ್ತ ತೆರಳಿದ್ದು ತಿಳಿದಿದೆ. ಅಲ್ಲಿನ ಕೆಲ ಬಾತ್ಮೀದಾರರ ಮೂಲಕ ಇನ್ನಷ್ಟು ಖಚಿತಪಡಿಸಿಕೊಂಡ ಬಳಿಕ ಬೈಂದೂರು ಸಿಪಿಐ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ತಂಡ ಆರೋಪಿಯನ್ನು ಗೋವಾದಲ್ಲಿ ಬಂಧಿಸಲು ಯಶಸ್ವಿಯಾಗಿದೆ. ಗೋವಾದಲ್ಲಿ ಆರೋಪಿ ಸೆರೆಸಿಕ್ಕಿದ್ದು ಇನ್ನೂ ಹೆಚ್ಚಿನ ತನಿಖೆ ಅಗತ್ಯವಿರುವ ಕಾರಣ ಆತನನ್ನು ಇಂದೇ ಪೊಲೀಸರ ತಂಡ ಗೋವಾಕ್ಕೆ ಕರೆದೊಯ್ಯಲಿದೆ. ಆರೋಪಿ ಚಿನ್ನದ ಚೈನ್ ಮಾರಾಟ ಮಾಡಿದ ಬಗ್ಗೆಯೂ ಮಾಹಿತಿಯಿದ್ದು ಅದರ ಬಗ್ಗೆ ತನಿಖೆ ಹಾಗೂ ಕೃತ್ಯಕ್ಕೆ ಬಳಸಿದ ಆಯುಧ ವಶಪಡಿಸಿಕೊಳ್ಳುವ ಪ್ರಕ್ರಿಯೆ ಸೇರಿಹಲವು ಆಯಾಮದಲ್ಲಿ ತನಿಖೆಗಳು ಮುಂದಿನ ದಿನದಲ್ಲಿ ನಡೆಯಲಿದೆ.
(ಕೊಲೆಯಾದ ಅಜೇಂದ್ರ ಶೆಟ್ಟಿ)
ಚೀಟಿ ವ್ಯವಹಾರದ ಪಾಲಿನ ವಿಚಾರದಲ್ಲಿ ಮನಸ್ತಾಪ..
ಅಜೇಂದ್ರ ಅವರ ಇತ್ತೀಚಿನ ಬೆಳವಣಿಗೆಯನ್ನು ಸಹಿಸಲಾಗದೆ ಆರೋಪಿ ಅನೂಪ್ ಈ ಕೃತ್ಯ ಎಸಗಿದ್ದ. ಇತ್ತೀಚೆಗಷ್ಟೇ ತಮ್ಮ ಕಾರು ಅಪಘಾತಕ್ಕೀಡಾದ ಬಳಿಕ ಹೊಸ ಕಾರನ್ನು ಖರೀದಿಸಿದ್ದು ಮಾತ್ರವಲ್ಲದೇ ಬ್ಯಾಂಕ್ ಸಾಲದ ನೆರವಿನಿಂದ ತಮ್ಮ ಸಹೋದರನಿಗೆ ಟಿಪ್ಪರ್ ಖರೀದಿಸಿ ಕೊಟ್ಟಿದ್ದರು. ಇದೆಲ್ಲವೂ ಅನೂಪ್ ಕಣ್ಣುಕುಕ್ಕಿತ್ತು. ಅಜೇಂದ್ರ ಫೈನಾನ್ಸ್ ಜೊತೆ ಹೊಸ ಚೀಟಿ ವ್ಯವಹಾರವೊಂದನ್ನು ಪ್ರಾರಂಭಿಸಿದ್ದು, ಇದರಲ್ಲಿ ಅನೂಪ್ ತನಗೂ ಪಾಲು ಕೊಡಬೇಕೆಂದು ಕೇಳಿಕೊಂಡಿದ್ದನು. ಇದಕ್ಕೆ ಅಜೇಂದ್ರ ಪಾಲು ಕೊಡಲು ನಿರಾಕರಿಸಿದ್ದು ಮತ್ತಷ್ಟು ಕುಪಿತಗೊಂಡ ಅನೂಪ್ ಅಜೇಂದ್ರನನ್ನು ಕೊಂದು ಮುಗಿಸಿದ್ದ.
ಗಾಂಜಾ ವ್ಯಸನ?- ತೆಗದನೇ ಪ್ರಾಣ..!
ಆರೋಪಿ ಅನೂಪ್ ಕುಂದಾಪುರ ತಾಲೂಕಿನ ಮೊಳಹಳ್ಳಿ ಮೂಲದವನು. ಬಡ ಕುಟುಂಬದಲ್ಲಿ ಜನಿಸಿದ ಆತ ಶೋಕಿವಾಲನಾಗಿದ್ದ ಮಾತ್ರವಲ್ಲ ಮದ್ಯ ಹಾಗೂ ಮಾಧಕ ವಸ್ತುಗಳ ವ್ಯಸನಕ್ಕೆ ಬಿದ್ದಿದ್ದ. ಬ್ರಾಂಡೆಡ್ ಬಟ್ಟೆಗಳನ್ನು ಧರಿಸಿ ಮೋಜುಮಸ್ತಿಗೆ ಇಳಿದನೆಂದರೆ ಈತನನ್ನು ಕಂಟ್ರೋಲ್ ಮಾಡೋಕೆ ಆಗ್ತಾ ಇರಲಿಲ್ಲಾ ಎನ್ನಲಾಗಿದೆ. ಹೀಗೆ ಫೈನಾನ್ಸ್ ವ್ಯವಹಾರದ ಈತನ ಪಾಲುದಾರಿಕೆಯ ಲಾಭದ ಹಣವನ್ನೆಲ್ಲಾ ಶೋಕಿಗೆ ಖರ್ಚು ಮಾಡುತ್ತಿದ್ದ ಅನೂಪ್ ಶೆಟ್ಟಿ ತನ್ನ ಪಾರ್ಟನರ್ ಮಾತ್ರ ದಿನದಿಂದ ದಿನಕ್ಕೆ ವ್ಯವಹಾರಿಕವಾಗಿ ಪ್ರಗತಿ ಸಾಧಿಸುವುದು ಕಂಡು ರೊಚ್ಚಿಗೆದ್ದಿದ್ದ. ಕೊಲೆ ದಿನವೂ ಆತ ಮಾಧಕ ವಸ್ತು ಸೇವಿಸಿದ್ದ ಎನ್ನುವ ಮಾಹಿತಿಯಿದ್ದು ವೈದ್ಯಕೀಯ ತನಿಖೆ ಬಳಿಕ ಸತ್ಯಾಂಶ ಹೊರಬೀಳಬೇಕಿದೆ.
(ಉಡುಪಿ ಎಸ್ಪಿ ವಿಷ್ಣುವರ್ಧನ್ ಸುದ್ದಿಗೋಷ್ಠಿ)
ಕಾರ್ಯಾಚರಣೆ ತಂಡ: ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಮತ್ತು ಪೊಲೀಸ್ ಉಪಾಧೀಕ್ಷಕ ಕೆ. ಶ್ರೀಕಾಂತ್ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಮತ್ತು ಬೈಂದೂರು ವೃತ್ತ ನಿರೀಕ್ಷ ಸಂತೋಷ ಕಾಯ್ಕಿಣಿ ನೇತೃತ್ವದಲ್ಲಿ, ಕುಂದಾಪುರ ಉಪವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿಯವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡದಲ್ಲಿ ಶಂಕರನಾರಾಯಣ ಪಿಎಸ್ಐ ಶ್ರೀಧರ್ ನಾಯ್ಕ, ಗಂಗೊಳ್ಳಿ ಪಿಎಸ್ಐ ನಂಜನಾಯ್ಕ, ಕುಂದಾಪುರ ಗ್ರಾಮಾಂತರ ಠಾಣೆಯ ಪಿ.ಎಸ್.ಐ. ನಿರಂಜನ ಗೌಡರವರೊಂದಿಗೆ ಉಪವಿಭಾಗದ ಸಿಬ್ಬಂದಿಗಳಾದ ಮೋಹನ, ಚಂದ್ರಶೇಖರ, ನಾಗೇಂದ್ರ, ಶ್ರೀನಿವಾಸ, ಸಂತೋಷ್ ಕುಮಾರ್, ಸಂತೋಷ್, ರಾಘವೇಂದ್ರ, ರಾಮು, ಸೀತಾರಾಮ, ಸತೀಶ್, ಚಿದಾನಂದ, ಮಧುಸೂಧನ್ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ದಿನೇಶ್ ಸಹಕರಿಸಿದ್ದರು.
ಇದನ್ನೂ ಓದಿರಿ:
ಫೈನಾನ್ಸ್ ಹಣಕಾಸು ವಿಚಾರಕ್ಕೆ ನಡೆದಿತ್ತು ಅಜೇಂದ್ರ ಶೆಟ್ಟಿ ಕೊಲೆ; ಗೋವಾದಲ್ಲಿ ಆರೋಪಿ ಬಂಧನ- ಎಸ್ಪಿ ವಿಷ್ಣುವರ್ಧನ್
ಕತ್ತು ಸೀಳಿ ಫೈನಾನ್ಸಿಯರ್ ಕೊಲೆ: ಶಂಕಿತ ಆರೋಪಿಯಾದ ಅಜೇಂದ್ರ ಶೆಟ್ಟಿ ಬಿಸಿನೆಸ್ ಪಾರ್ಟನರ್ ಅರೆಸ್ಟ್
ಫೈನಾನ್ಸ್ ಒಳಗೆ ಕತ್ತು ಸೀಳಿ ಕೊಲೆಗೈದು ಆತನ ಕಾರಲ್ಲೇ ಎಸ್ಕೇಪ್ ಆದ ಬಿಸಿನೆಸ್ ಪಾರ್ಟನರ್..?: ತನಿಖೆ ಚುರುಕು
ಹಣಕಾಸು ವಿಚಾರಕ್ಕೆ ಕುಂದಾಪುರ ಕಾಳಾವಾರದಲ್ಲಿ ಫೈನಾನ್ಶಿಯರ್ ಬರ್ಬರ ಕೊಲೆ
Comments are closed.