ಮಂಗಳೂರು: “ಅಂತ”, “ಬಂಧನ” ಖ್ಯಾತಿಯ ಕನ್ನಡದ ಹಿರಿಯ ನಿರ್ದೇಶಕ ಎಸ್.ವಿ.ಬಾಬು ರಾಜೇಂದ್ರ ಸಿಂಗ್ ತುಳುನಾಡಿನ ಸಂಸ್ಕೃತಿಯನ್ನು ಆಧರಿಸಿದ ”ಬಿರ್ದ್ದ ಕಂಬುಲ’ (ವೀರ ಕಂಬಳ) ಸಿನಿಮಾ ನಿರ್ಮಿಸಲು ಹೊರಟ್ಟಿದ್ದು ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಆರಂಭಗೊಳ್ಳಲ್ಲಿದೆ.
ಪ್ರಥಮ ಬಾರಿಗೆ ತುಳು ಚಿತ್ರದಲ್ಲಿ ನಟಿಸಲು ಬಾಲಿವುಡ್ ನ ಖ್ಯಾತ ನಟ ಸುನಿಲ್ ಶೆಟ್ಟಿ ಹಾಗೂ ಬಹುಭಾಷ ನಟ ಪ್ರಕಾಶ್ ( ರೈ ) ರಾಜ್ ಅವರನ್ನು ಕರೆತರುವ ಬಗ್ಗೆ ಪ್ರಯತ್ನ ನಡೆಯುತ್ತಿದೆ.
ಚಿತ್ರದ ಕುರಿತು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್.ವಿ.ಬಾಬು ರಾಜೇಂದ್ರ ಸಿಂಗ್ ಅವರು, ಅಂತರರಾಷ್ಟ್ರೀಯ ಗುಣಮಟ್ಟದ ಚಲನಚಿತ್ರವನ್ನು ತುಳುನಾಡಿನ ಕಂಬಳದ ಬಗ್ಗೆ ನಿರ್ಮಿಸುವ ಗುರಿ ಹೊಂದಿದ್ದೇನೆ. ಈ ಚಲನಚಿತ್ರವನ್ನು ಕನ್ನಡ, ತಮಿಳು, ತೆಲುಗು, ಹಿಂದಿಗೂ ಡಬ್ಬಿಂಗ್ ಮಾಡುವ ಉದ್ದೇಶ ಇದೆ. ಬಳಿಕ ಇಂಗ್ಲಿಷ್ನಲ್ಲೂ ಬಿಡುಗಡೆ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.
‘ಮಂಗಳೂರು ನಗರ ‘ಫಿಲ್ಮ್ ಸಿಟಿ’ ಮಾಡುವುದಕ್ಕೆ ಸೂಕ್ತವಾದ ಪ್ರದೇಶ. ಈ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ತಿಳಿಸಿದ ಅವರು, ಕರಾವಳಿಯ ಕಂಬಳವು ರಾಷ್ಟ್ರೀಯ ಮನ್ನಣೆ ಪಡೆಯಬೇಕಾದರೆ ಸಿನಿಮಾ ಮಾಧ್ಯಮದ ಮೂಲಕವೂ ಈ ರೀತಿಯ ಒಂದು ಪ್ರಯತ್ನ ನಡೆಯಬೇಕಾಗಿದೆ’ ಚಿತ್ರದ ‘ಶೀರ್ಷಿಕೆಯನ್ನು ಈಗಾಗಲೇ ಸಚಿವ ಅಂಗಾರ ಅವರು ಸುಬ್ರಹ್ಮಣ್ಯದಲ್ಲಿ ಬಿಡುಗಡೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ಚಿತ್ರದ ಸಂಭಾಷಣೆಗಾರ, ತುಳು ರಂಗಭೂಮಿ ಹಾಗೂ ಚಲನ ಚಿತ್ರದ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲಬೈಲ್ ಅವರು ಮಾತನಾಡಿ, ವಿವಿಧ ಭಾಷೆಗಳಲ್ಲಿ ಸುಮಾರು 97ಕ್ಕೂ ಹೆಚ್ಚು ಚಲನಚಿತ್ರ ಮಾಡಿರುವ ಬಾಬು ರಾಜೇಂದ್ರ ಸಿಂಗ್ ತುಳುವಿನಲ್ಲಿ ಪ್ರಥಮ ಬಾರಿಗೆ ಚಲನಚಿತ್ರ ಮಾಡುತ್ತಿದ್ದಾರೆ. ಕಂಬಳದ ಬಗ್ಗೆ ಅವರು ಈಗಾಗಲೇ ತಜ್ಞರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಇದರಲ್ಲಿ ಹಿಂಸೆ ಇರುವುದಿಲ್ಲ. ಇಲ್ಲಿನ ಸಾಂಸ್ಕೃತಿಕ ಮಹತ್ವಗಳು ಇರುತ್ತವೆ’ ಎಂದು ಹೇಳಿದರು.
ಕಂಬಳ ಅಕಾಡೆಮಿಯ ಅಧ್ಯಕ್ಷ ಗುಣಪಾಲ ಕಡಂಬ ಅವರು ಮಾತನಾಡಿ, ಕಂಬಳದ ಬಗ್ಗೆ ಸಮಗ್ರ ಮಾಹಿತಿ ಮಹತ್ವವನ್ನು ತಿಳಿಯಪಡಿಸುವ ಕೊರತೆ ಇದೆ. ಆ ದೃಷ್ಟಿಯಿಂದ ‘ಬಿರ್ದ್ದ ಕಂಬುಲ’ ಒಂದು ಮಹತ್ವದ ಹೆಜ್ಜೆಯಾಗಿದೆ’ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ‘ಬಿರ್ದ್ ದ ಕಂಬುಲ’ ಚಲನಚಿತ್ರದ ನಿರ್ಮಾಪಕ ಅರುಣ್ ರೈ ತೋಡಾರು ಪೂರಕ ಮಾಹಿತಿ ನೀಡಿದರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ “ಬಿರ್ದ್ದ ಕಂಬುಲ” ಚಲನ ಚಿತ್ರದ ಹೆಸರು ಅನಾವರಣ
ಮಂಗಳೂರು / ಸುಬ್ರಹ್ಮಣ್ಯ : ಕನ್ನಡದ ಹಿರಿಯ ನಿರ್ದೇಶಕ ಎಸ್.ವಿ.ಬಾಬು ರಾಜೇಂದ್ರ ಸಿಂಗ್ ಅವರು ತುಳುನಾಡಿನ ಸಂಸ್ಕೃತಿಯನ್ನು ಆಧರಿಸಿದ ‘ಬಿರ್ದ್ದ ಕಂಬುಲ’ (ವೀರ ಕಂಬಳ) ಸಿನಿಮಾ ನಿರ್ಮಿಸಲು ಹೊರಟ್ಟಿದ್ದು, ಶೀಘ್ರದಲ್ಲೇ ತೆರೆಗೆ ಬರಲಿರುವ ‘ಬಿರ್ದ್ದ ಕಂಬುಲ’ ಚಲನ ಚಿತ್ರದ ಹೆಸರನ್ನು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಗಸ್ಟ್ 10ರಂದು ಅನಾವರಣಗೊಳಿಸಿದ್ದರು.
‘ದೇವರ ಆರಾಧನೆಯಿಂದ ಬದುಕು ಬಂಗಾರವಾಗುತ್ತದೆ. ಬದುಕಿನಲ್ಲಿ ನೆಮ್ಮದಿಯನ್ನು ನಾವೇ ಗಳಿಸಿಕೊಳ್ಳಬೇಕು. ಉತ್ತಮ ಮನಃಸ್ಥಿತಿಯನ್ನು ಹೊಂದುವ ಮೂಲಕ ಜೀವನದಲ್ಲಿ ಸುಖ-ಶಾಂತಿ ದೊರಕುತ್ತದೆ. ಕಲಾಕ್ಷೇತ್ರವು ಬದುಕಿಗೆ ನೆಮ್ಮದಿ ನೀಡುವ ತಾಣ ಎಂದು ಎಸ್.ಅಂಗಾರ ಅವರು ಹೇಳಿದ್ದರು.
‘ನಮ್ಮ ಸಂಸ್ಕೃತಿ, ಕಲೆ, ಧಾರ್ಮಿಕತೆಯನ್ನು ಎಲ್ಲೆಡೆ ತಲುಪಿಸುವಲ್ಲಿ ಕಲಾರಂಗದ ಪಾತ್ರ ಅನನ್ಯ. ಸಿನಿಮಾ ಕ್ಷೇತ್ರ ರಾಷ್ಟ್ರದ ಸಂಸ್ಕೃತಿಯನ್ನು ಜಗದಗಲಕ್ಕೆ ತಲುಪಿಸಿದೆ. ತುಳುನಾಡು ಶ್ರೀಮಂತವಾದ ಪರಂಪರೆಯನ್ನು ಒಳಗೊಂಡಿದೆ. ತುಳುನಾಡಿನ ಸಂಸ್ಕೃತಿಯ ಕೊಡುಗೆಯಾದ ಕಂಬಳವು ಸಹಸ್ರಾರು ವರ್ಷ ಇತಿಹಾಸವನ್ನು ಹೊಂದಿದೆ.
ಇಂತಹ ಸಾಂಸ್ಕೃತಿಕ ಕ್ರೀಡೆ ಕಂಬಳದ ಬಗ್ಗೆ ಸಿನಿಮಾ ನಿರ್ಮಿಸುವ ಮೂಲಕ ತುಳು ಸಂಸ್ಕೃತಿಯನ್ನು ಜಗತ್ತಿಗೆ ತಿಳಿಸಲು ಹೊರಟಿರುವುದು ಶ್ಲಾಘನೀಯ’ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಚಿತ್ರದ ನಿರ್ಮಾಪಕ ಅರುಣ್ ರೈ, ಚಿತ್ರಕ್ಕೆ ಸಂಭಾಷನೆ ಬರೆದಿರುವ ಹಿರಿಯ ಚಿತ್ರ ನಿರ್ದೇಶಕ, ಸಾಹಿತಿ ವಿಜಯ ಕುಮಾರ್ ಕೊಡಿಯಾಲ ಬೈಲ್, ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯ ನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಎಇಒ ಪುಷ್ಪಲತಾ ರಾವ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ.ವಿ.ಭಟ್, ಶ್ರೀವತ್ಸ, ಶೋಭಾ ಗಿರಿಧರ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಚಂದ್ರಶೇಖರ್ ಮರ್ದಾಳ, ಮನೋಜ್ ಸುಬ್ರಹ್ಮಣ್ಯ,, ಕಲಾವಿದ ಸುಂದರ ರೈ ಮಂದಾರ, ಪ್ರಮುಖರಾದ ಜಗದೀಶ್ ಅಧಿಕಾರಿ, ಗುಣಪಾಲ ಕಡಂಬ, ರಾಜೇಶ್ ಎನ್.ಎಸ್, ಪ್ರಶಾಂತ್ ಸುವರ್ಣ, ದಿನೇಶ್ ಸಂಪ್ಯಾಡಿ, ಚಿದಾನಂದ ಕಂದಡ್ಕ, ಅಶೋಕ್ ಆಚಾರ್ಯ, ಗಿರಿಧರ ಸ್ಕಂಧ, ರವಿ ಕಕ್ಕೆ ಪದವು ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Comments are closed.