ಉಡುಪಿ: ಮೂರು ವರ್ಷಗಳ ಹಿಂದೆ ಕಾರ್ಕಳ ಪೊಲೀಸ್ ವೃತ್ತ ವ್ಯಾಪ್ತಿಯಲ್ಲಿ 13 ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ಆಕೆ ಗರ್ಭವತಿಯಾಗಲು ಕಾರಣನಾದ ಆರೋಪಗಳು ಸಾಕ್ಷ್ಯಾಧಾರಗಳಿಂದ ರುಜುವಾತಾಗಿದ್ದು ಆರೋಪಿತ ವ್ಯಕ್ತಿ ಅಪರಾಧಿಯೆಂದು ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎರ್ಮಾಳು ಕಲ್ಪನಾ ಅವರು ಮಹತ್ವದ ತೀರ್ಪು ಪ್ರಕಟಿಸಿದ್ದಾರೆ.
ಅಪರಾಧಿಗೆ ಜೀವಾವಧಿ ಶಿಕ್ಷೆ, ದಂಡ ಮತ್ತು ಸಂತ್ರಸ್ತೆಗೆ ಪರಿಹಾರ..
ಕೂಲಿ ಕೆಲಸ ಮಾಡುತ್ತಿದ್ದ 30 ವರ್ಷ ಪ್ರಾಯದ ಶಂಕರ್ ಎನ್ನುವಾತ ಅಪರಾಧಿಯಾಗಿದ್ದು ಆತ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ್ದಕ್ಕೆ ಪೋಕ್ಸೋ ಕಾಯ್ದೆಯಡಿ ಜೀವಾವಧಿ ಶಿಕ್ಷೆ, 15 ಸಾವಿರ ದಂಡ ವಿಧಿಸಿದ್ದು ದಂಡ ಪಾವತಿಸದಿದ್ದಲ್ಲಿ 1 ವರ್ಷ ಸಾದಾ ಶಿಕ್ಷೆ, ಕೊಲೆ ಬೆದರಿಕೆ ಹಾಕಿದ್ದಕ್ಕೆ 3 ವರ್ಷ ಜೈಲು, 5 ಸಾವಿರ ದಂಡ ವಿಧಿಸಿದ್ದು ದಂಡ ತೆರದಿದ್ದರೆ 6 ತಿಂಗಳು ಸಾದಾ ಸಜೆಗೆ ಆದೇಶಿಸಲಾಗಿದೆ. ನೊಂದ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರದಿಂದ 5 ಲಕ್ಷ ಪರಿಹಾರ ನೀಡಲು ಮತ್ತು ದಂಡದ ಹಣದಲ್ಲಿ ಸಂತ್ರಸ್ತೆಗೆ 15 ಸಾವಿರ ಹಾಗೂ 5 ಸಾವಿರ ಸರಕಾರಕ್ಕೆ ನೀಡಲು ಉಡುಪಿ ಫೋಕ್ಸೋ ಕೋರ್ಟ್ ತೀರ್ಪಿತ್ತಿದೆ.
ಘಟನೆ ಹಿನ್ನೆಲೆ:
ಕಾರ್ಕಳ ಪೊಲೀಸ್ ವೃತ್ತ ವ್ಯಾಪ್ತಿಯಲ್ಲಿ ಈ ಘಟನೆ 2018ರಲ್ಲಿ ನಡೆದಿತ್ತು. ಸಂತ್ರಸ್ತ ಬಾಲಕಿ ಮನೆಗೆ ಬಂದ ಶಂಕರ್ ಅತ್ಯಾಚಾರವೆಸಗಿದ್ದು ಆಕೆ ಗರ್ಭವತಿಯಾಗಿದ್ದಳು. ವಿಚಾರ ತಿಳಿದಾಗ ಆಕೆ ಪೋಷಕರು ಸಂಬಂದಪಟ್ಟ ಠಾಣೆಯಲ್ಲಿ ದೂರು ದಾಖಲಿಸಿದ್ದು ಆರೋಪಿಯನ್ನು ಬಂಧಿಸಲಾಗಿತ್ತು. ಅಂದಿನ ಕಾರ್ಕಳ ವೃತ್ತನಿರೀಕ್ಷಕ ಜಾಯ್ ಅಂತೋನಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ 21 ಸಾಕ್ಷಿಗಳ ಪೈಕಿ 11 ಸಾಕ್ಷಿಗಳನ್ನು ವಿಚಾರಣೆ ನಡೆಸಿದ್ದು ಡಿ.ಎನ್.ಎ ವರದಿ ಹಾಗೂ ಸಂತ್ರಸ್ತ ಬಾಲಕಿ ಸಹಿತ ವಿವಿಧ ಸಾಕ್ಷ್ಯಗಳು ಅಭಿಯೋಜನೆಗೆ ಪೂರಕವಾಗಿದ್ದರಿಂದ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದೆ.
ಉಡುಪಿಯ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ಅವರು ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.