ಉಡುಪಿ: ಕಿಡಿಗೇಡಿಗಳು ಫೇಸ್‌ಬುಕ್ ನಕಲಿ ಖಾತೆ ತೆರೆದು ಸೌದಿ ಅರೇಬಿಯಾದ ದೊರೆ ಹಾಗೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಆರೋಪದಲ್ಲಿ ಸೌದಿ ಪೊಲೀಸರಿಂದ ಬಂಧಿತರಾಗಿದ್ದ ಕುಂದಾಪುರದ ಬೀಜಾಡಿಯ ಹರೀಶ್ ಬಂಗೇರ ಅವರು ಆಗಸ್ಟ್ 18 ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಹರೀಶ್ ಬಂಗೇರ ತಾಯ್ನಾಡಿಗೆ ಮರಳಲು ಬೇಕಾಗಿರುವ ವಿಧಿ- ವಿಧಾನಗಳೆಲ್ಲವೂ ಪೂರ್ಣಗೊಂಡಿದ್ದು ಆಗಸ್ಟ್ 17ರಂದು ಸೌದಿ ಅರೇಬಿಯಾದ ದಮಾಮ್ ವಿಮಾನ ನಿಲ್ದಾಣದಿಂದ ದೋಹಾಗೆ ತೆರಳಿ ದೋಹಾ ಮೂಲಕ ಆಗಸ್ಟ್ 18 ರಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಲಿದ್ದಾರೆ ಎಂದು ಸೌದಿ ಅರೇಬಿಯಾದ ರಿಯಾದ್’ನಲ್ಲಿರುವ ಭಾರತೀಯ ದೂತವಾಸದಿಂದ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಅಧಿಕೃತ ಮಾಹಿತಿ ಬಂದಿದೆ ಎಂದು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ…
ಹರೀಶ್ ಬಂಗೇರ ಅವರ ಹೆಸರಲ್ಲಿ ನಕಲಿ ಖಾತೆ ತೆರೆದ ಪ್ರಕರಣ ಸಂಬಂಧ ಉಡುಪಿ ಸೆನ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ತನಿಖೆ ನಡೆಸಿದ ಉಡುಪಿ ಪೊಲೀಸರು ಆರೋಪಿಗಳಾದ ಮೂಡುಬಿದಿರೆಯ ಅಬ್ದುಲ್ ಹುಯೇಸ್ ಹಾಗೂ ತುವೇಸ್ ಎನ್ನುವರನ್ನು ಬಂಧಿಸಿದ್ದರು. ಈ ಸಹೋದರರಿಬ್ಬರು ಹರೀಶ್ ಹೆಸರಲ್ಲಿ ನಕಲಿ ಖಾತೆ ತೆರೆದು ಸೌದಿ ದೊರೆ ಹಾಗೂ ಮೆಕ್ಕಾದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದು, ಅನಂತರ ಅದರ ಸ್ಕ್ರೀನ್ ಶಾಟ್ ತೆಗೆದು ಖಾತೆಯನ್ನು ಡಿಲೀಟ್ ಮಾಡಿದ್ದರು. ಇದು ಹರೀಶ್ ಅವರೇ ಹಾಕಿದ ಪೋಸ್ಟ್ ಎಂದು ಬಿಂಬಿತವಾಗಿತ್ತು. ಈ ವಿಚಾರ ವೈರಲ್ ಆಗುತ್ತಲೆ ಸೌದಿ ಪೊಲೀಸರು 2019ರ ಡಿಸೆಂಬರ್‌ನಲ್ಲಿ ಹರೀಶ್ ಅವರನ್ನು ಬಂಧಿಸಿದ್ದರು.
ಹರೀಶ್ ಅವರ ಬಿಡುಗಡೆಗೆ ಅವರ ಕುಟುಂಬಿಕರ ಬೆನ್ನೆಲುಬಾಗಿ ಹಲವು ಸಾಮಾಜಿಕ ಹೋರಾಟಗಾರರು, ಸಂಘಟನೆಗಳು ಹಾಗೂ ಜನಪ್ರತಿನಿಧಿಗಳು ಮುತುವರ್ಜಿ ವಹಿಸಿದ್ದು ಅವರ ಪರಿಶ್ರಮಕ್ಕೆ ಫಲ ಸಿಗುವ ಶುಭಕಾಲ ಸನ್ನಿಹಿತವಾಗಿದ್ದು ಮನೆಮಂದಿ ಹರೀಶ್ ಆಗಮನದ ನಿರೀಕ್ಷೆಯಲ್ಲಿದ್ದಾರೆ.
Comments are closed.