ಕರಾವಳಿ

ಬಿಐಎಸ್ ಹಾಲ್‌ಮಾರ್ಕ್‌ನಿಂದ ಕಿರು ಸ್ವ್ರರ್ಣೊದ್ಯಮಿಗಳಿಗೆ ಸಂಕಷ್ಟ : ಮಂಗಳೂರಿನಲ್ಲಿ ಕೇಂದ್ರ ಸಚಿವರಿಗೆ ಮನವಿ

Pinterest LinkedIn Tumblr

ಮಂಗಳೂರು : ಬಿಐಎಸ್ ಹಾಲ್‌ಮಾರ್ಕ್ (BIS HALLMARK) ಕಡ್ಡಾಯದ ನಂತರದ ನಿಯಮಗಳಿಂದ ಚಿನ್ನದ ಕುಶಲಕರ್ಮಿಗಳು ಹಾಗೂ ಸಣ್ಣ ವ್ಯಾಪಾರಿಗಳ ಜೀವನದಲ್ಲಿ ಉಂಟಾದ ಸಂಕಷ್ಟವನ್ನು ಮಂಗಳೂರಿನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಸರಕಾರದ ಸಚಿವರಾಗಿರುವ ಶ್ರೀ ರಾಜೀವ ಚಂದ್ರಶೇಖರ ಅವರಲ್ಲಿ ದ.ಕ. ಚಿನ್ನದ ಕೆಲಸಗಾರರ ಸಂಘ ಹಾಗೂ ದೈವಜ್ಞ ಬ್ರಾಹ್ಮಣರ ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಮುಖೇನ ಮನವಿಯನ್ನು ಸಲ್ಲಿಸಲಾಯಿತು.

ಸಭೆಯಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರು ಹಾಗೂ ಚಿನ್ನಾಭರಣ ಉದ್ಯಮಿಯೂ ಆಗಿರುವ ಶ್ರೀ ಅರುಣ್ ಜಿ. ಶೇಟ್ ಅವರು ಈ ವಿಚಾರವಾಗಿ ವಿವರವಾದ ಮಾಹಿತಿಯನ್ನು ನೀಡಿದರು.

ಸಣ್ಣ ವ್ಯಾಪಾರಿಗಳು ಹಾಗೂ ಚಿನ್ನದ ಕೆಲಸ ಮಾಡುವ ವೃತ್ತಿಯಲ್ಲಿ ಇರುವವರಿಗೆ ಈ BIS ಹಾಲ್ಮಾರ್ಕ್ ನ ಹೊಸ ನಿಯಮ ಬರಸಿಡಿಲಿನಂತೆ ಬಡಿದದ್ದು ವಿಷಾದದ ಸಂಗತಿಯಾಗಿದೆ. ಈಗಾಗಲೆ ಚಿನ್ನದ ಕೆಲಸಗಾರರು ತಾವು ಗ್ರಾಹಕರಿಂದ ಒಂದೆರಡು ಆಭರಣಗಳನ್ನು ತಯಾರಿಸುವ ಆರ್ಡರ್ ಪಡೆದು BIS ಶುದ್ದತೆಯ ಮಾನದಂಡಗಳನ್ನೇ ಬಳಸಿ ಚಿನ್ನಾಭರಣಗಳನ್ನು ತಯಾರಿಸಿದ್ದರೂ ಅದನ್ನು BIS ಹಾಲಮಾರ್ಕ್ ಸೆಂಟರ್ ಗೆ BIS ಮುದ್ರೆಯೊತ್ತಲು ಒಯ್ದಾಗ ಅಲ್ಲಿ ಇವರು ಕೊಟ್ಟ ಈ ಸುಂದರವಾದ ಆಭರಣಗಳನ್ನು ತುಂಡು ಮಾಡಿ ಅದನ್ನು ಆಸಿಡ್ ಪರೀಕ್ಷೆಗೆ (ಮ್ಯಾನ್ಯುಯಲ್) ಒಳಪಡಿಸುತ್ತಾರೆ.

ಈ ಪ್ರಕ್ರಿಯೆಯಿಂದ ಸಣ್ಣ ವ್ಯಾಪಾರಿಗಳು ಹಾಗೂ ಚಿನ್ನದ ಕೆಲಸಗಾರರು ತಾವು ತಯಾರಿಸಿದ ಒಂದೆರಡು ಆಭರಣಗಳನ್ನು ಹಾಲಮಾರ್ಕ್ ಸೆಂಟರ್ ನವರು ಕತ್ತರಿಸಿ ವಾಪಸ್ ಕೊಡುವುದರಿಂದ ಈ ಹಾನಿಗೊಳಗಾದ ಆಭರಣಗಳನ್ನು ಮಾರಲಾಗದೇ ನಷ್ಟವನ್ನು ಅನುಭವಿಸುವ ಸಂಕಷ್ಟವನ್ನು ಎದುರಿಸುತ್ತಿದ್ದಾನೆ.

ಸಾವಿರಾರು ವರುಷಗಳ ಇತಿಹಾಸ ಇರುವ ಈ ಉದ್ಯಮ ಈಗಾಗಲೆ ಹಲವು ತಾಪತ್ರಯವನ್ನು ಎದುರಿಸುತ್ತಿದ್ದ ಈ ಕ್ಷೇತ್ರದವರು ಸಂಪೂರ್ಣವಾಗಿ ಈ ಚಿನ್ನಾಭರಣ ಕ್ಷೇತ್ರವನ್ನೇ ತೊರೆಯುವ ಪರಿಸ್ಥಿತಿಗೆ ಬಂದು ತಲುಪಿರುವುದು ಅತ್ಯಂತ ದುಃಖದಾಯಕ ಸಂಗತಿ.

ದೊಡ್ಡ-ದೊಡ್ಡ ಕಾರ್ಪೋರೇಟ್ ಉದ್ಯಮದವರಿಗಾದರೆ ಕಲ್ಪನೆಗೂ ಅತೀತವಾದ ಬಂಡವಾಳ ಇರುತ್ತದೆ. ಒಮ್ಮೆ ಹಾಲ್ಮಾರ್ಕ್ ಸೆಂಟರಿಗೆ ತಮ್ಮ ಆಭರಣಗಳನ್ನು ಕಳುಹಿಸುವಾಗ ಕಿಲೋಗಟ್ಟಲೆ ನೂರಾರು ಆಭರಣಗಳನ್ನು ಕಳುಹಿಸುತ್ತಾರೆ. ಆ ದೊಡ್ಡ ಲಾಟ್ ನಲ್ಲಿ ಒಂದೆರಡು ಆಭರಣಗಳನ್ನು ಅಷ್ಟೇ ಸ್ವೇಚ್ಚೇಯಾಗಿ ಆಯ್ಕೆ ಮಾಡಿ ಈ ರೀತಿ ಪರೀಕ್ಷೆಗೆ ಒಳಪಡಿಸಿ ಉಳಿದ ಎಲ್ಲಾ ಆಭರಣಗಳಿಗೆ BIS ಹಾಲ್ಮಾರ್ಕ್ ಮುದ್ರೆ ಹಾಕುತ್ತಾರೆ.

ಆದರೆ ದೇಶದಾದ್ಯಂತ ಅಗಾಧ ಸಂಖ್ಯೆಯಲ್ಲಿ ಇರುವ ಸಣ್ಣ ಪ್ರಮಾಣದ ವ್ಯಾಪಾರಿಗಳಿಗೆ ಹಾಗೂ ಚಿನ್ನದ ಕೆಲಸದವರು ತಯಾರು ಮಾಡೋದೆ ಒಂದೆರಡು ಆಭರಣಗಳು ಅದು ಮಾರಾಟವಾದ ಮೇಲೆ ವಾಪಸು ಬಂದ ಮೂಲ ಬಂಡವಾಳದಿಂದ ಮುಂದಿನ ಆಭರಣಗಳನ್ನು ತಯಾರಿಸುವವರಿಗೆ ಇದು ಸಹಿಸಲಾಗದ ಹಿಂಸೆ ಆಗಿದೆ.

ಈ ಕ್ಷೇತ್ರದಲ್ಲಿ ಅನಕ್ಷರಸ್ಥರೇ ಹೆಚ್ಚು ಜನರಾಗಿದ್ದಾರೆ ಅವರಿಗೆ ಇವೆಲ್ಲಾ ಕಂಪ್ಯೂಟರ್ ಮುಖೇನ ಅಪಲೋಡ್ ಡೌನ್ಲೋಡ್ ಮಾಡುವುದು/ ಇ-ಮೇಲ್ ಮಾಡುವ ಕ್ರಮಗಳು ಈ ಕ್ಷಣದಲ್ಲಿ ಅಸಾಧ್ಯವಾದ ಮಾತಾಗಿದೆ. ಅಷ್ಟೇ ಅಲ್ಲದೆ ಇನ್ನೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಹಾಗೂ ಈ ವೃತ್ತಿಯನ್ನೇ ನಂಬಿರುವ ಈ ಕ್ಷೇತ್ರದ ಬಡ ಜನರಿಗಂತು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರದಂತೆ ಅನಿಸತೊಡಗಿದೆ. ಮುಂದೇನು ಮಾಡುವುದು ತಮ್ಮ ಈ ತೊಳಲನ್ನು ಯಾರಲ್ಲಿ ಹೇಳುವುದು ಎಂದು ದಾರಿಕಾಣದಾಗಿದೆ.

ಈಗ ಈ ಪರಿಸ್ಥಿತಿಯನ್ನು ಸರಕಾರ ಗಮನವಹಿಸಿ ಪರಿಸ್ಥಿತಿಯನ್ನು ಬದಲಾಯಿಸದಿದ್ದರೆ ಈಗಾಗಲೇ ಕೊರೋನಾಘಾತದಿಂದ ಬಸವಳಿದ ಬಡ ಜನರಿಗೆ ಈ ಕ್ಷೇತ್ರವನ್ನು ತ್ಯಾಗಮಾಡಿ ಬೇರೆ ಕಡೆ ಗುಳೆ ಹೋಗಬೇಕು ಇಲ್ಲಾ ಆತ್ಮಹತ್ಯೆಗೆ ಶರಣಾಗಬೇಕು.‌ ಈ ಪರಿಸ್ಥಿತಿ ಬರುವವರೆಗೆ ನಮ್ಮ ಜನರನ್ನು ತಳ್ಳಬೇಡಿ ಎಂದು ಸರಕಾರವನ್ನು ಉದ್ದೇಶಿಸಿ ಮನವಿ ಮಾಡಿಕೊಂಡರು.

ಶಾಸಕರು, ಸಂಸದರು ಹಾಗೂ ಸರಕಾರದ ಮಂತ್ರಿಗಳ ಮುಖೇನ ಸರಕಾರಕ್ಕೆ ನಮ್ಮ ಈ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಡವ ಮನವಿಯನ್ನು ನೀಡಲಾಯಿತು.

ಕಾರ್ಯಕ್ರದಲ್ಲಿ ದ.ಕ ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಅಧ್ಯಕ್ಷರು ಶ್ರೀ ಕೆ.ಎಲ್. ಹರೀಶ್, ಕಾರ್ಯದರ್ಶಿ ಪ್ರಕಾಶ ಆಚಾರ್ಯ ಹಲೇಜಿ, ಉಪಾಧ್ಯಕ್ಷ ಗುರುರಾಜ್ ಕೆ.ಜೆ., ದೈವಜ್ಞ ಬ್ರಾಹ್ಮಣ ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷರಾದ ಶ್ರೀ ಶ್ರೀಪಾದ ಬಿ. ರಾಯ್ಕರ್, ಕಾರ್ಯದರ್ಶಿ ರವಿ ಗೋಕರ್ಣಕರ್, ದೈವಜ್ಞ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಅಶೋಕ ಶೇಟ್ ಮತ್ತಿತರರು ಉಪಸ್ಥಿತರಿದ್ದರು.

Comments are closed.