ಕರ್ನಾಟಕ

ಅಮ್ಮನ ನೆನಪುಗಳಿದ್ದ ಮೊಬೈಲ್ 3 ತಿಂಗಳ ಬಳಿಕ ಮಗಳ ಕೈ ಸೇರಿತು..!

Pinterest LinkedIn Tumblr

ಮಡಿಕೇರಿ: ‘ಕೊವಿಡ್ ಸೋಂಕಿನಿಂದಾಗಿ ಅಮ್ಮ ತೀರಿಹೋದಳು, ಅವಳ ಜತೆಗಿನ ನೆನಪುಗಳ ಚಿತ್ರಗಳಿದ್ದ ಮೊಬೈಲ್ ಸಹ ಅವಳ ಜತೆಗೇ ಕಾಣೆಯಾಗಿದೆ, ದಯವಿಟ್ಟು ಮೊಬೈಲ್ ಹುಡುಕಿಕೊಡಿ’ ಎಂದು ಭಾವನಾತ್ಮಕವಾಗಿ ನೊಂದು ಬರೆದುಕೊಂಡಿದ್ದ ಬಾಲಕಿಗೆ ಇದೀಗ ಆಕೆಯ ಮೊಬೈಲ್ ದೊರೆತಿದೆ.

ಬಾಲಕಿಯು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದ ಬಾಲಕಿಗೆ ಬರೋಬ್ಬರಿ 3 ತಿಂಗಳ ನಂತರ ಆ ಮೊಬೈಲ್ ದೊರೆತಿದೆ. ಈ ಕುರಿತಂತೆ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಮಾಹಿತಿ ನೀಡಿದ್ದು, ಬಾಲಕಿಯ ಮೊಬೈಲ್ ಪತ್ತೆಯಾಗಿದ್ದು, ಸಂಜೆ ಮೊಬೈಲ್ ಹಸ್ತಾಂತರಿಸಿದ್ದಾರೆ. ಕೋವಿಡ್ ಆಸ್ಪತ್ರೆ ಉಗ್ರಾಣದಲ್ಲಿ ಮೊಬೈಲ್ ಪತ್ತೆಯಾಗಿದೆ.

ಕೊಡಗು ಜಿಲ್ಲೆಯ ಗುಮ್ಮನಕೊಲ್ಲಿ ಗ್ರಾಮದ ಹೃತಿಕ್ಷ ಹೆಸರಿನ ಪುಟ್ಟ ಕಂದಮ್ಮ ಕೊವಿಡ್ 2ನೇ ಅಲೆಯಲ್ಲಿ ತನ್ನ ತಾಯಿಯನ್ನು ಕಳೆದುಕೊಂಡಿದ್ದಳು. ತಾಯಿ ಜೊತೆಗೆ ಮಾತನಾಡಲು ಬಳಸುತ್ತಿದ್ದ ಫೋನ್ ಕಾಣೆಯಾಗಿದೆ. ಹೀಗಾಗಿ ಜಿಲ್ಲಾಧಿಕಾರಿಗಳಿಗೆ, ಶಾಸಕರಿಗೆ ಮತ್ತು ಜಿಲ್ಲಾ ಕೊವಿಡ್ ಆಸ್ಪತ್ರೆ ಸಿಬ್ಬಂದಿಗೆ ಪತ್ರ ಬರೆದು ತನ್ನ ತಾಯಿಯೊಂದಿಗೆ ಇದ್ದ ಮೊಬೈಲ್ ಹುಡುಕಿಕೊಡುವಂತೆ ಮನವಿ ಮಾಡಿದ್ದಳು. ನಮ್ಮ ಮನೆಯಲ್ಲಿ ಕೊರೊನಾ ಕಾಣಿಸಿಕೊಂಡಿತ್ತು. ನನಗೆ, ನನ್ನ ತಂದೆ ಮತ್ತು ತಾಯಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ತಂದೆ ಮತ್ತು ನಾನು ಹೋಂ ಐಸೋಲೇಷನ್​ನಲ್ಲಿ ಇದ್ದೆವು. ತಾಯಿಗೆ ಕೊರೊನಾ ತೀವ್ರವಾಗಿದ್ದರಿಂದ ಮೇ 6ರಂದು ಜಿಲ್ಲಾ ಕೊವಿಡ್ ಆಸ್ಪತ್ರೆಗೆ ದಾಖಲಿಸಿದ್ದೆವು. ಆದರೆ ತಾಯಿ ಚಿಕಿತ್ಸೆ ಫಲಕಾರಿಯಾದೆ ಮೇ 16ರಂದು ಬೆಳಿಗ್ಗೆ 6 ಗಂಟೆಗೆ ಮೃತಪಟ್ಟಿದ್ದಾರೆ ಎಂದು ನೊಂದ ಬಾಲಕಿ ಹೃತಿಕ್ಷಾ ಅಳಲು ತೋಡಿಕೊಂಡಿದ್ದಳು.

ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಕುಶಾಲನಗರದ ಪ್ರಭಾ ಎಂಬುವವರು ಆಸ್ಪತ್ರೆಯಲ್ಲಿ ಮೃತರಾದ ನಂತರ ಅವರ ಮೊಬೈಲ್ ಪೋನ್ ಕಳೆದುಹೋಗಿದ್ದು,ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕಳೆದುಹೋಗಿದ್ದ ಮೊಬೈಲ್ ಫೋನ್ ಕೋವಿಡ್ ಆಸ್ಪತ್ರೆಯ ಉಗ್ರಾಣದಲ್ಲಿ ಪತ್ತೆಯಾಗಿರುವ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳು ಹಾಜರುಪಡಿಸಿದ್ದು, ಮೊಬೈಲ್ ಫೋನನ್ನು ಪ್ರಭಾ ಅವರ ಮಗಳಾದ ಹೃತೀಕ್ಷಾ ರವರಿಗೆ ಹಿಂತಿರುಗಿಸಲಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ತನ್ನ ತಾಯಿಯ ಮೊಬೈಲ್ ಫೋನನ್ನು ಪತ್ತೆಮಾಡಿಕೊಡಬೇಕೆಂದು ರವಾನಿಸಿದ ಸಂದೇಶ ಸುದ್ದಿಯಾಗಿತ್ತು.
– ಕ್ಷಮಾ‌ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ

Comments are closed.