ಕರ್ನಾಟಕ

ಡ್ರಗ್ಸ್ ಕೇಸಿನಲ್ಲಿ ರಾಗಿಣಿ, ಸಂಜನಾಗೆ ಸಂಕಷ್ಟ: ಪೊಲೀಸರ ಕೈ ಸೇರಿದ FSL ವರದಿ; ಡ್ರಗ್ಸ್ ಸೇವನೆ ದೃಢ

Pinterest LinkedIn Tumblr

ಬೆಂಗಳೂರು: ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಡ್ರಗ್ಸ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು ನಟಿಯರು ಮಾದಕ ವಸ್ತು ತೆಗೆದುಕೊಂಡಿರುವುದು ಎಫ್.ಎಸ್.ಎಲ್ ವರದಿಯಿಂದ ಸಾಬೀತಾಗಿದೆ ಎನ್ನಲಾಗಿದೆ.

ನಟಿಯರಾದ ಸಂಜನಾ, ರಾಗಿಣಿ ಡ್ರಗ್ಸ್​ ಸೇವಿಸಿರುವುದು ಹೈದರಬಾದ್ ಎಫ್​ಎಸ್​ಎಲ್ ಲ್ಯಾಬ್ ನಲ್ಲಿ ನಡೆಸಲಾದ ಪರೀಕ್ಷೆಯಲ್ಲಿ ದೃಢಪಟ್ಟಿದ್ದು, ಬರೊಬ್ಬರಿ 10 ತಿಂಗಳ ಬಳಿಕ ಈ ವರದಿ ಸಿಸಿಬಿ ಪೊಲೀಸ್ ಕೈ ಸೇರಿದೆ. ಈ ವರದಿಯಲ್ಲಿ ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ, ಅವರ ಸಹಚರರಾದ ವಿರೇನ್ ಖನ್ನಾ, ರವಿಶಂಕರ್, ಲೂಮ್ ಪೆಪ್ಪರ್, ರಾಹುಲ್ ತೋನ್ಸೆ ಡ್ರಗ್ಸ್ ಸೇವಿಸಿರುವುದು ದೃಡಪಟ್ಟಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ತಲೆ ಕೂದಲನ್ನು 2020ರ ಅಕ್ಟೋಬರ್​​ನಲ್ಲಿ ಹೈದರಾಬಾದ್​ನ ಲ್ಯಾಬಿಗೆ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರ ವರದಿ ಈಗ ಸಿಸಿಬಿ ಪೊಲೀಸರ ಕೈಸೇರಿದೆ. ಸದರಿ ರಿಪೋರ್ಟ್​ನಲ್ಲಿ ಇಬ್ಬರೂ ನಟಿಯರು ಡ್ರಗ್ಸ್ ಸೇವಿಸಿದ್ದರು ಎನ್ನುವುದು ದೃಢಪಟ್ಟಿದ್ದು, ಜತೆಗೆ ವಿರೇನ್​ ಖನ್ನಾ ಕೂಡ ಡ್ರಗ್ಸ್​ ಸೇವಿಸಿರುವುದು ಖಚಿತವಾಗಿದೆ ಎನ್ನಲಾಗಿದೆ.

ಈ ಕುರಿತು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿಕೆ ನೀಡಿದ್ದು, ಸಾಮಾನ್ಯವಾಗಿ ಡ್ರಗ್ಸ್ ಪ್ರಕರಣದಲ್ಲಿ ರಕ್ತ ಮತ್ತು ಮೂತ್ರವನ್ನು ಪರೀಕ್ಷೆಗೆ ಕಳುಹಿಸಲಾಗುತ್ತದೆ. ಆದರೆ ಸಾಕಷ್ಟು ಪ್ರಕರಣಗಳಲ್ಲಿ ಆರೋಪಿಗಳ ಬಂಧನ ತಡವಾಗಿ ಆಗುತ್ತದೆ. ಆಗ ವರದಿ ನೆಗೆಟಿವ್ ಬಂದು ಅವರು ತಪ್ಪಿಸಿಕೊಳ್ಳುತ್ತಾರೆ. ಆದ್ದರಿಂದ ಆರೋಪಿಗಳ ಕೂದಲನ್ನು ಕಳೆದ ವರ್ಷ ಹೈದರಾಬಾದ್ ಪ್ರಯೋಗಾಲಯಕ್ಕೆ ಟೆಸ್ಟ್​ಗೆ ಕಳುಹಿಸಲಾಗಿತ್ತು. ಈಗ ಅದರಲ್ಲಿ ಪಾಸಿಟಿವ್ ರಿಪೋರ್ಟ್ ಬಂದಿದೆ ಎಂದು ಹೇಳಿದ್ದಾರೆ.

ಪ್ರಕರಣದ ಹಿನ್ನೆಲೆ…..
2020ರ ಸೆಪ್ಟೆಂಬರ್ 14ರಂದು ನಟಿ ರಾಗಿಣಿ ದ್ವಿವೇದಿ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದರು. 140 ದಿನಗಳ ಕಾಲ ಕಸ್ಟಡಿಯಲ್ಲಿದ್ದ ಅವರಿಗೆ, 2021ರ ಜನವರಿ 21ರಂದು ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು. ಜನವರಿ 25ರಂದು ಅವರು ಜೈಲಿಂದ ಬಿಡುಗಡೆಯಾಗಿದ್ದರು. 2020ರ ಸೆಪ್ಟೆಂಬರ್ 16ರಂದು ಜೈಲು ಸೇರಿದ್ದ ಸಂಜನಾ ಗಲ್ರಾನಿ ಡಿಸೆಂಬರ್ 11 2020ರಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದರು. 56 ದಿನಗಳ ಕಾಲ ಜೈಲಿನಲ್ಲಿ ಇದ್ದ ಸಂಜನಾ ಗಲ್ರಾನಿ, ಗಂಭೀರ ಅನಾರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ಷರತ್ತುಬದ್ದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

Comments are closed.