ಕರ್ನಾಟಕ

ನೀಚ ಕೃತ್ಯ ಮಾಡುವವರಿಗೆ ಪೊಲೀಸರು ಖಡಕ್ ಸಂದೇಶ ಕೊಟ್ಟಿದ್ದಾರೆ: ಗೃಹ ಸಚಿವ ಆರಗ ಜ್ಞಾನೇಂದ್ರ

Pinterest LinkedIn Tumblr

ಬೆಂಗಳೂರು: ಮೈಸೂರಿನಲ್ಲಿ ನಡೆದ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದ್ದು ಸರ್ಕಾರದ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಹಾಗೂ ಸರ್ಕಾರದಿಂದ ಈ ಕಾರ್ಯಾಚರಣೆಯಲ್ಲಿದ್ದ ಪೊಲೀಸ್ ತಂಡಕ್ಕೆ 5 ಲಕ್ಷ ಬಹುಮಾನದ ಘೋಷಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನೀಚ ಕೃತ್ಯ ಎಸಗುವವರನ್ನು ಸುಮ್ಮನೆ ಬಿಡುವುದಿಲ್ಲ, ತಕ್ಕ ಶಾಸ್ತಿಯನ್ನು ಪೊಲೀಸರು ಮಾಡುತ್ತಾರೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ರಾಜ್ಯದ ಜನತೆಗೆ ಇದರಿಂದ ಪೊಲೀಸ್ ಇಲಾಖೆ ಮೇಲೆ ವಿಶ್ವಾಸ ಹೆಚ್ಚುತ್ತದೆ ಎಂದರು.

ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಮತ್ತು ದೇಶ-ವಿದೇಶಗಳಿಂದ ಪ್ರವಾಸಿಗರು ಬರುವ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂತಹ ಅಮಾನವೀಯ ಕೃತ್ಯ ನಡೆದಾಗ ಸಹಜವಾಗಿ ಎಲ್ಲರಿಗೂ ನೋವು, ಆತಂಕ ಉಂಟಾಗಿದೆ. ಸರ್ಕಾರದಲ್ಲಿ ನಾನು ಮತ್ತು ಮುಖ್ಯಮಂತ್ರಿಗಳು ಪೊಲೀಸ್ ವರಿಷ್ಠರನ್ನು ಕರೆದು ಈ ಪ್ರಕರಣಗಳನ್ನು ಭೇದಿಸಿ, ಆರೋಪಿಗಳನ್ನು ಪತ್ತೆಹಚ್ಚಬೇಕೆಂದು ಆದೇಸಿದ್ದು ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸುವ ಮೂಲಕ ಈ ಪ್ರಕರಣಕ್ಕೆ ತಾರ್ಕಿಕವಾಗಿ ತೆರೆಬಿದ್ದಿದೆ ಎಂದರು.

ಆರೋಪಿಗಳ ಹಿನ್ನೆಲೆ ಬಗ್ಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮಾಹಿತಿ ನೀಡಿದ್ದಾರೆ. ಹಾಗಾಗಿ ನಾನು ಹೆಚ್ಚು ಹೇಳುವುದಿಲ್ಲ. ಐವರನ್ನು ಬಂಧಿಸಿಯಾಗಿದೆ, ಮುಂದೆ ಅವರಿಗೆ ನ್ಯಾಯಾಲಯದ ಮೂಲಕ ಶಿಕ್ಷೆ ನೀಡುವುದು ಮುಖ್ಯ. ಅದಕ್ಕಾಗಿ ಸೂಕ್ತ ತನಿಖೆಗಳು ನಡೆಯುತ್ತಿದೆ ಎಂದು ಗೃಹ ಸಚಿವರು ಹೇಳಿದರು.

Comments are closed.