(ವರದಿ- ಯೋಗೀಶ್ ಕುಂಭಾಸಿ
ಕುಂದಾಪುರ: ಪಕ್ಷದ ಸಂಘಟನೆಯನ್ನು ಯಾರು ಬೇಕಾದರೂ ಮಾಡಬಹುದು. ಬಿ.ಎಸ್. ಯಡಿಯೂರಪ್ಪ ರಾಜ್ಯದ ಸರ್ವ ಶ್ರೇಷ್ಠ ನಾಯಕರು. ಅವರು ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ ಮಾಡುವುದು ಸ್ವಾಗತಾರ್ಹ. ಸರಕಾರಕ್ಕೆ ಮತ್ತು ಪಕ್ಷಕ್ಕೆ ಅವರ ಸಲಹೆ ಅತ್ಯಗತ್ಯ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ಸುನಿಲ್ ಕುಮಾರ್ ಹೇಳಿದರು.
ಸೋಮವಾರ ಕುಂದಾಪುರ ತಾಲೂಕಿನ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.
ಆಚರಣೆ ಜೊತೆಗೆ ಸ್ವಯಂ ನಿಯಂತ್ರಣ ಅಗತ್ಯ…
ಕೊರೋನಾ ಸೋಂಕು ಹರಡುವಿಕೆ ತಡೆಗಟ್ಟಲು ಕೇಂದ್ರ ಸರಕಾರವು ರಾಜ್ಯ ಸರಕಾರಕ್ಕೆ ಒಂದಷ್ಟು ಮಾರ್ಗಸೂಚಿಗಳ ಸುತ್ತೋಲೆ ಕಳಿಸಿದೆ. ಧಾರ್ಮಿಕ
ಆಚರಣೆಯನ್ನು ನಡೆಸುವ ಬಗ್ಗೆ ಸರಕಾರಕ್ಕೆ ಭಿನ್ನಾಭಿಪ್ರಾಯವಿಲ್ಲ. ಆದರೆ ಆಚರಣೆಯ ಜೊತೆಗೆ ನಮ್ಮೆಲ್ಲರ ಆರೋಗ್ಯ ಕಾಪಾಡಿಕೊಳ್ಳುವ ಅನಿವಾರ್ಯತೆಯಿದೆ. ಈ ನಿಟ್ಟಿನಲ್ಲಿ ಆಚರಣೆಗಳು ಎಷ್ಟು ವೈಭವವಾಗಿ ನಡೆಯಬೇಕು ಎನ್ನುವುದನ್ನು ಅರಿತು ಪ್ರಧಾನಿಯವರು ತಿಳಿಸಿದಂತೆ ಸ್ವಯಂ ನಿಯಂತ್ರಣ ಮಾಡಿಕೊಳ್ಳಬೇಕು. ಸರಕಾರದ ಸುತ್ತೋಲೆಯಂತೆ ಧಾರ್ಮಿಕ ಆಚರಣೆಗೆ ಚ್ಯುತಿಯಾಗದಂತೆ ಕಾರ್ಯ ಮಾಡಬೇಕು. ವೈಭವದ ದಿನಗಳು ಮುಂದೆ ಬರಲಿದೆ ಎಂದರು.
ಕಳೆದ ಬಾರಿ ಕೋವಿಡ್ ಸಂದರ್ಭ 20 ಸಾವಿರ ಯಕ್ಷಗಾನ ಕಲಾವಿದರಿಗೆ ಗೌರವಧನ ನೀಡಲಾಗಿತ್ತು. ಈ ಬಾರಿಯೂ ಸರಕಾರದ ಮುಂದೆ ಚಿಂತನೆಯಿದ್ದು ಬೆಂಗಳೂರಿಗೆ ತೆರಳಿದ ಬಳಿಕ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಲಾಗುತ್ತದೆ. ಯಕ್ಷಗಾನ ಮಾತ್ರವಲ್ಲ ಎಲ್ಲಾ ಅಕಾಡೆಮಿ ಗಳಿಗೆ ಹೊಸತನ ತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ. ದ.ಕ ಹಾಗೂ ಉಡುಪಿ ಜಿಲ್ಲೆಯ ಬಹುತೇಕ ಎಲ್ಲಾ ದೇವಸ್ಥಾನಗಳಿಗೆ ಭೇಟಿ ನೀಡಲಾಗುತ್ತಿದ್ದು ಇಂದು ಕೊಲ್ಲೂರು ಹಾಗೂ ಹಟ್ಟಿಯಂಗಡಿ ದೇವಸ್ಥಾನಕ್ಕೆ ಆಗಮಿಸಿರುವೆ ಎಂದರು.
ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಧರ್ಮದರ್ಶಿ ಬಾಲಚಂದ್ರ ಭಟ್ ಸಚಿವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭ ತಾ.ಪಂ ಮಾಜಿ ಸದಸ್ಯ ಕರಣ ಪೂಜಾರಿ, ಹಟ್ಟಿಯಂಗಡಿ ಗ್ರಾ.ಪಂ ಅಧ್ಯಕ್ಷೆ ಅಮೃತಾ ಶೆಟ್ಟಿ, ಸದಸ್ಯ ಚಂದ್ರ ಮೊಗವೀರ, ಬಿಜೆಪಿ ಮುಖಂಡರಾದ ಪ್ರಭಾಕರ ಶೆಟ್ಟಿ, ಗುರುರಾಜ್ ಮೊದಲಾದವರಿದ್ದರು.
Comments are closed.