ಉಡುಪಿ: ಇತ್ತೀಚೆಗೆ ಯುವಕನೋರ್ವನಿಂದ ಕೊಲೆಯಾದ ಸೌಮ್ಯಶ್ರೀ ಬಗ್ಗೆ ಕಪೋಕಲ್ಪಿತ ಸುಳ್ಳುಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮನೆ ಮಗಳನ್ನು ಕಳೆದುಕೊಂಡು ನೋವಿನಲ್ಲಿರುವ ನಮಗೆ ಇಂತಹ ಸುದ್ದಿಗಳಿಂದ ಮತ್ತಷ್ಟು ನೋವಾಗಿದೆ. ಒಬ್ಬ ಹೆಣ್ಣು ಮಗಳ ಬಗ್ಗೆ ಇಲ್ಲಸಲ್ಲದ ಕತೆಗಳನ್ನು ಸೃಷ್ಠಿಸಿ ಕುಟುಂಬದ ಮಾನ ಹರಾಜು ಹಾಕುವುದನ್ನು ನಿಲ್ಲಿಸಬೇಕು ಎಂದು ಸೌಮ್ಯಶ್ರೀ ಕುಟುಂಬಿಕರು ಮನವಿ ಮಾಡಿದರು.
ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಸೌಮ್ಯಶ್ರೀ ಅವರ ಅಣ್ಣನ ಹೆಂಡತಿ ದೀಕ್ಷೀತಾ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಸಂದೇಶ್ ಕುಲಾಲ್ ಮತ್ತು ಸೌಮ್ಯಶ್ರೀ ನಡುವೆ ಎಂಟು ವರ್ಷಗಳಿಂದ ಪ್ರೀತಿ ಇತ್ತು ಎಂದು ಹೇಳಲಾಗುತ್ತಿದೆ. ಇದು ಸುಳ್ಳಾಗಿದ್ದು ಇವರಿಬ್ಬರ ನಡುವೆ ಕಳೆದ ಮೂರುವರೆ ವರ್ಷದ ಹಿಂದೆ ಪ್ರೀತಿಸುತ್ತಿದ್ದರು. ಈ ವಿಚಾರ ಮನೆಯಲ್ಲಿ ಗೊತ್ತಾದ ಬಳಿಕ ಸೌಮ್ಯಶ್ರೀ ಮನೆಯವರು ಒಪ್ಪಿದ್ದರೂ ಸಂದೇಶ್ ಮನೆಯವರು ಒಪ್ಪಿರಲಿಲ್ಲ. ಸಂದೇಶ್ ಅವರಿಗೆ ಮದುವೆಯಾಗಲು ಹಲವು ಬಾರಿ ಮನವಿ ಮಾಡಿದ್ದು ಮೊದಲು ಅಣ್ಣನ ಮದುವೆ ಆಗಲಿ ಬಳಿಕ ನೋಡೋಣ ಎಂದು ಕಾರಣ ನೀಡಿ ಮದುವೆ ಮುಂದೆ ಹಾಕುತ್ತಿದ್ದ. ಮಾತ್ರವಲ್ಲ ಸೌಮ್ಯಶ್ರೀ ಅವರಿಗೆ ಸಂದೇಶ್ ಕುಲಾಲ್ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದ. ಬಳಿಕ ಸೌಮ್ಯಶ್ರಿ ತಂದೆಯ ಜೊತೆ ಹೋಗಿ ಮಾತನಾಡಿ ಸಂದೇಶ್ ಗೆ ಮದುವೆಯಾಗುವಂತೆ ಕೂಡ ಒತ್ತಾಯ ಮಾಡಿದ್ದರೂ ಸಹ ಸ್ಪಂದಿಸಿರಲಿಲ್ಲ. ರಿಜಿಸ್ಟರ್ ಮದುವೆಯಾಗುವಂತೆ ಸೌಮ್ಯಶ್ರೀ ಮನೆಯವರು ಸಂದೇಶ್ ಗೆ ಕೇಳಿದರೂ ಕೂಡ ಅದಕ್ಕೂ ಒಪ್ಪದೆ ಇರುವಾಗ ಸೌಮ್ಯಶ್ರೀ ಬೇಸರದಿಂದ ತನಗೆ ಈ ಹುಡುಗ ಬೇಡ ಎಂದು ಹೇಳಿದ್ದಳು.
ಈ ನಡುವೆ ಸೌಮ್ಯಶ್ರೀ ತಂದೆಗೆ ಹೃದಯಾಘಾತವಾಗಿ ವಾರಗಳ ಕಾಲ ಆಸ್ಪತ್ರೆಯಲ್ಲಿದ್ದು, ವೈದ್ಯರು ಮೂರು ತಿಂಗಳು ಬದುಕುತ್ತಾರೆ ಎಂದು ಹೇಳಿದ್ದರು. ಇದರಿಂದ ಮತ್ತೆ ಆಘಾತಗೊಂಡ ಸೌಮ್ಯಶ್ರೀ ತಂದೆಯ ಕೊನೆಯ ಆಸೆ ನಮ್ಮಿಬ್ಬರ ವಿವಾಹ ಆಗಿರುವುದರಿಂದ ಮದುವೆಯಾಗೋಣ ಎಂದು ಅಂಗಲಾಚಿದರೂ ಕ್ಯಾರೇ ಎನ್ನಲಿಲ್ಲ. ಇದರಿಂದ ನೊಂದ ಸೌಮ್ಯಶ್ರೀ ತನಗೆ ಬೇರೆ ಹುಡುಗನನ್ನು ನೋಡುವಂತೆ ಮನೆಯವರಿಗೆ ಹೇಳಿದ್ದರಿಂದ ಮನೆಯವರು ಒಳ್ಳೆಯ ಹುಡುಗನನ್ನು ನೋಡಿ ನಿಶ್ಚಿತಾರ್ಥ ಕೂಡ ನಡೆದಿತ್ತು. ಇದರಿಂದ ಕೋಪಗೊಂಡ ಸಂದೇಶ್ ಕುಲಾಲ್ ವಿಪರೀತವಾಗಿ ಸೌಮ್ಯಶ್ರೀ ಗೆ ಕಿರುಕುಳ ನೀಡುತ್ತಿದ್ದ ಇದರಿಂದ ಬೇಸರಗೊಂಡ ಸೌಮ್ಯಶ್ರೀ ಮನೆಯವರ ಜೊತೆ ತೆರಳಿ ಉಡುಪಿ ಮಹಿಳಾ ಠಾಣೆಯಲ್ಲಿ ಒಂದು ತಿಂಗಳ ಹಿಂದೆ ದೂರು ಕೂಡ ದಾಖಲಿಸಿದ್ದರು. ಪೊಲೀಸರು ಇಬ್ಬರನ್ನು ಕರೆಸಿ ಸಂದೇಶ್ ನಿಂದ ಮುಚ್ಚಳಿಕೆ ಬರೆಸಿಕೊಂಡಿದ್ದರು ಎಂದು ದೀಕ್ಷಿತಾ ಹೇಳಿದರು.
ಇದೇ ತಿಂಗಳ (ಸೆಪ್ಟೆಂಬರ್) 20ಕ್ಕೆ ಸೌಮ್ಯಶ್ರೀಗೆ ಮದುವೆ ನಿಶ್ಚಯವಾಗಿದ್ದರಿಂದ ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಬ್ಯಾಂಕ್ ಕೆಲಸ ಬಿಡಲು ನಿರ್ಧರಿಸಿದ್ದು, ಅದರಂತೆ ಅಗಸ್ಟ್ 30 ರಂದು ರಾಜೀನಾಮೆ ನೀಡಿ ಬ್ಯಾಂಕ್ ವತಿಯಿಂದ ವಿದಾಯ ಸಮಾರಂಭ ಮುಗಿಸಿ ವಾಪಾಸಾಗುತ್ತಿದ್ದ ವೇಳೆ ಸಂದೇಶ ಕುಲಾಲ್ ತನ್ನ ಬೈಕಿನಲ್ಲಿ ಬಂದು ಈ ಕೃತ್ಯವನ್ನು ಎಸಗಿದ್ದಾನೆ ಎಂದರು. ಸಂದೇಶ್ ಕುಲಾಲ್ ಗೆ ದುಶ್ಚಟಗಳಿತ್ತು ಎಂದು ಜನರು ಹೇಳುತ್ತಿದ್ದು ಘಟನೆಯ ದಿನ ಕೂಡ ಮಾದಕ ವಸ್ತು ಸೇವನೆ ಮಾಡಿರುವ ಸಂಶಯ ಇದೆ. ಆರಂಭದಿಂದ ಸಣ್ಣ ಸಣ್ಣ ವಿಷಯಗಳಿಗೆ ಕೂಡ ಸೌಮ್ಯಶ್ರೀಯಿಂದಲೇ ಹಣವನ್ನು ಖರ್ಚು ಮಾಡಿಸುತ್ತಿದ್ದ ಹೊರತು ಆಕೆಗೆ ಹಣ ನೀಡಿರಲಿಲ್ಲ ಎಂದು ಆರೋಪಿಸಿದರು.
ಇದೀಗಾ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ತಪ್ಪು ಮಾಹಿತಿಯನ್ನು ಹರಿಯ ಬಿಡುತ್ತಿದ್ದು ಇದರಿಂದ ನಮ್ಮ ಕುಟುಂಬ ತುಂಬಾ ನೊಂದಿದೆ. ಇನ್ನಾದರೂ ಸತ್ಯವನ್ನು ಅರಿತು ನಮ್ಮ ಕುಟುಂಬದ ಮಾನವನ್ನು ಹರಾಜು ಮಾಡುವ ಕೆಲಸ ನಿಲ್ಲಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸೌಮ್ಯಶ್ರೀ ತಾಯಿ ಸುಶೀಲಾ, ಸಹೋದರ ಸುನೀಲ್, ಕುಟುಂಬದ ಸದಸ್ಯರಾದ ಯತೀಶ್, ಅಶೋಕ್ ಕುಮಾರ್ ಅಲೆವೂರು, ಸೋಮಶೇಖರ್ ಉಪಸ್ಥಿತರಿದ್ದರು.
Comments are closed.