(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ದೇಶಾದ್ಯಂತ ಎಳೆ ವಯಸ್ಸಿನ ಮಕ್ಕಳಿಂದ ಹಿಡಿದು ಇಳಿವಯಸ್ಸಿನವರ ಮೇಲೆ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ನಡೆಯುತ್ತಿದ್ದು ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವ ಕಾನೂನು ಜಾರಿಯಾಗಬೇಕೆಂದು ವಿದ್ಯಾರ್ಥಿನಿ ಪ್ರಮುಖ್ ನಿರಕ್ಷಿತಾ ಹೇಳಿದರು.
ದೇಶಾದ್ಯಂತ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕುಂದಾಪುರದ ವತಿಯಿಂದ ಕುಂದಾಪುರ ಮಿನಿವಿಧಾನಸೌಧದ ಎದುರು ಬುಧವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿನ ಹೆಣ್ಮಗಳಿಗೆ ಗೌರವ ನೀಡಿ ಅವಳಿಗೆ ಬೆನ್ನೆಲುಬಾಗಿ ನಿಲ್ಲುವ ಕಾರ್ಯವನ್ನು ಯುವಕರು ಮಾಡಬೇಕೆ ಹೊರತು ಮಹಿಳೆಯರ ಮಾನ ಕಳೆಯುವ ಕಾರ್ಯ ಮಾಡಬಾರದು. ದೇಶದಲ್ಲಿ ಅರ್ಧ ಗಂಟೆಗೊಂದು ಅತ್ಯಾಚಾರದಂತಹ ಪ್ರಕರಣ ನಡೆಯುತ್ತಿದ್ದು ಹಾಗಾದರೆ ಕಾನೂನಿಗೆ ಬೆಲೆ ಇಲ್ಲವೇ? ಎಂದು ಪ್ರಶ್ನಿಸಿದರು.
ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಮಣಿಕಂಠ ಕಳಸ ಮಾತನಾಡಿ, ದೇಶದಲ್ಲಿ ನಡೆಯುತ್ತಿರುವ ವಿಲಕ್ಷಣ ಘಟನೆಗಳು ತಲ್ಲಣ ಮೂಡಿಸುತ್ತಿದೆ. ಹೆಣ್ಣನ್ನು ಪೂಜಿಸಿ, ಗೌರವಿಸಬೇಕು ಎಂಬುದು ಭಾರತ ದೇಶದ ಪರಂಪರೆಯಾಗಿದೆ. ಆದರೆ ಇಂದು ವಾಸ್ತವ ಬದಲಾಗಿದ್ದು ಅಂತಹ ದುಷ್ಕೃತ್ಯಗಳು ನಿಲ್ಲಬೇಕು. ಗಾಂಧೀಜಿ ಕಂಡ ರಾಮರಾಜ್ಯದ ಕನಸು ಸಾಕಾರವಾಗಬೇಕು. ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವ ಕಾನೂನು ಜಾರಿಯಾಗಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ಕುಂದಾಪುರ ತಾಲೂಕು ಸಂಚಾಲಕ ಪ್ರಜ್ವಲ್, ಪ್ರಮುಖರಾದ ಪ್ರಸನ್ನ, ಆಶೀಶ್ ಬೋಳಾ, ವಿಜೇತಾ, ಯಶಸ್ವಿನಿ ಬೀಜಾಡಿ, ರಶ್ಮಿತಾ ಕೋಟೇಶ್ವರ, ದೀಪಕ್, ರಶ್ಮಿತಾ, ರಾಹುಲ್, ಪಲ್ಲವಿ, ಮೇಘಾ, ಸಂಜಯ್ ಇದ್ದರು. ತಾಲ್ಲೂಕಿನ ಭಂಡಾರ್ಕರ್ಸ್ ಕಾಲೇಜು, ಬಿ.ಬಿ. ಹೆಗ್ಡೆ ಕಾಲೇಜು, ಕೋಟೇಶ್ವರ ವರದರಾಜ ಎಂ ಶೆಟ್ಟಿ ಸರಕಾರಿ ಪದವಿ ಕಾಲೇಜು, ಶಾರದಾ ಕಾಲೇಜು ಬಸ್ರೂರು ಸಹಿತ ಐದು ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕುಂದಾಪುರ ತಹಶಿಲ್ದಾರ್ ಕಿರಣ್ ಗೌರಯ್ಯ ಅವರಿಗೆ ಮನವಿ ನೀಡಲಾಯಿತು.
Comments are closed.