ಹೈದರಾಬಾದ್: 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ಯುವಕ ಇಂದು ರೈಲ್ವೇ ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದಾನೆ.
ತೆಲಂಗಾಣ ಮತ್ತು ಆಂಧ್ರ ಪ್ರದೇಶವನ್ನೇ ಬಚ್ಚಿಬೀಳಿಸಿದ ಘಟನೆ ಇದಾಗಿತ್ತು. ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಪಲ್ಲಂಕೊಂಡ ರಾಜು ಎಂಬಾತ ಮೃತ ಸ್ಥಿತಿಯಲ್ಲಿ ರೈಲು ಹಳಿ ಮೇಲೆ ಪತ್ತೆಯಾಗಿದ್ದಾನೆ.
ಸೈದಾಬಾದ್ನಲ್ಲಿ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪ ಹೊತ್ತಿದ್ದ ಆರೋಪಿ ಪಲ್ಲಂಕೊಂಡ ರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಉನ್ನತ ಮೂಲಗಳು ಮಾಹಿತಿ ನೀಡಿದ್ದು, ರೈಲಿಗೆ ತಲೆಕೊಟ್ಟು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಆತನ ಕೈ ಮೇಲಿನ ಹಚ್ಚೆಯ ಆಧಾರದ ಮೇಲೆ ರಾಜುವನ್ನು ಗುರುತಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 9ರಂದು ಹೈದರಾಬಾದ್‌ನ ಸೈದಾಬಾದ್ನಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಆಕೆಯನ್ನು ಭೀಕರವಾಗಿ ಹತ್ಯೆ ಮಾಡಿದ್ದ ಪ್ರಕರಣ ನಡೆದಿತ್ತು. ಹೈದರಾಬಾದ್ ನ ಸಿಂಗರೇನಿ ಕಾಲೋನಿಯ ನಿವಾಸಿ ಆರು ವರ್ಷದ ಹೆಣ್ಣು ಮಗು ನಾಪತ್ತೆಯಾಗಿತ್ತು. ತನಿಖೆ ಕೈಗೊಂಡ ಪೊಲೀಸರಿಗೆ ರಾಜು ಮನೆಯಲ್ಲಿ ಬೆಡ್ ಶೀಟ್ ನಲ್ಲಿ ಸುತ್ತಿಟ್ಟಿದ್ದ ಮಗುವಿನ ಶವ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿರುವುದು ದೃಢಪಟ್ಟಿತ್ತು.
ಬಾಲಕಿಯ ಅತ್ಯಾಚಾರ ಹಾಗೂ ಆಕೆಯನ್ನು ಕೊಲೆಗೈದು ಆರೋಪಿ ಪರಾರಿಯಾಗಿದ್ದ. ಪೊಲೀಸರು ಆತನಿಗಾಗಿ ಸಾಕಷ್ಟು ಕಡೆಗಳಲ್ಲಿ ಶೋಧ ಕಾರ್ಯ ನಡೆಸಿದ್ದು, ಆತನ ಪತ್ತೆ ಸಾಧ್ಯವಾಗಿರಲಿಲ್ಲ.
ಪೊಲೀಸರು ಈತನ ಸುಳಿವು ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನವನ್ನೂ ಘೋಷಿಸಿದ್ದರು. ತೆಲಂಗಾಣ ಗೃಹ ಸಚಿವರು ಆರೋಪಿಯನ್ನು ಎನ್ಕೌಂಟರ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು.
ಉಪ್ಪಲ್ ಪ್ರದೇಶದಲ್ಲಿ ನಿನ್ನೆ ಸುತ್ತಾಡಿದ್ದನು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಆದರೆ ಪೊಲೀಸರ ಕೈವಶವಾಗುವಷ್ಟರಲ್ಲಿಯೇ ಆತ ರೈಲು ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
Comments are closed.