(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಪ್ರತಿ ಕಾರ್ಯವೂ ಕೂಡ ಜನಪರವಾಗಿರುತ್ತದೆ. ಕಳೆದ ಕೊರೋನಾ ಸಮಯದಿಂದ 2 ನೇ ಅಲೆಯ ತನಕವೂ ಬೈಂದೂರು ಕ್ಷೇತ್ರದಲ್ಲಿ ಸಾವಿರಾರು ಮಂದಿ ಹೋಟೆಲ್ ಕಾರ್ಮಿಕರು ಅತಂತ್ರರಾಗಿದ್ದಾರೆ. ಅವರ ಆರ್ಥಿಕ ಅಡಚಣೆ ವೇಳೆ ಗ್ರಾಮಾಭಿವೃದ್ಧಿ ಸಂಘ ಆಸರೆಯಾಗಿ ಬಡವನ ಮನೆಯ ದೀಪ ಬೆಳಗುವ ಮಹತ್ಕಾರ್ಯ ಮಾಡಿದೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಕುಂದಾಪುರ, ಗ್ರಾಮ ಪಂಚಾಯತ್ ಅಂಪಾರು, ಕಂಚಾರು ಕೆರೆ ಅಭಿವೃದ್ದಿ ಸಮಿತಿ ಇವರ ಸಹಭಾಗಿತ್ವದಲ್ಲಿ ”ನಮ್ಮೂರು-ನಮ್ಮ ಕೆರೆ” ಕಾರ್ಯಕ್ರಮದಡಿ ಅಭಿವೃದ್ದಿಗೊಂಡ 314ನೇ ಕಂಚಾರು ಕೆರೆಯನ್ನು ಗ್ರಾ.ಪಂ.ಗೆ ಹಸ್ತಾಂತರಿಸಿ, ಕೆರೆಯಂಗಳದಲ್ಲಿಗಿಡ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ಗ್ರಾಮಪಂಚಾಯತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ. ಈಗಾಗಲೇ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು 79 ಸಾವಿರ ಮನೆಗಳಿಗೆ ನೀರು ಒದಗಿಸಲು 480 ಕೋಟಿ ಅನುದಾನ ನೀಡಿದ್ದು ಅ.10 ರ ಬಳಿಕ ಈ ಕಾಮಗಾರಿ ಕಾರ್ಯರೂಪಕ್ಕೆ ಬರಲಿದ್ದು ಪ್ರತಿ ಮನೆಯ ಕುಡಿಯುವ ನೀರಿನ ಬವಣೆ ತಪ್ಪಲಿದೆ. ಸೌಕೂರು ಏತನೀರಾವರಿ ಯೋಜನೆ ಮೂಲಕ 8 ಗ್ರಾಮಕ್ಕೆ ನೀರು ಪೂರೈಕೆಯಾಗಲಿದೆ. ವಾರಾಹಿ ಬಲದಂಡೆ ಯೋಜನೆಯೂ ಕಾರ್ಯರೂಪಕ್ಕೆ ಬರಲಿದೆ. ಇನ್ನು ಅಂಪಾರು, ಸಿದ್ದಾಪುರ, ಶಂಕರನಾರಾಯಣ, ನಾಡಾ ಹಾಗೂ ಬಿಜೂರು ಗ್ರಾಮವನ್ನು ‘ಅಮೃತ ಯೋಜನೆ’ಯಲ್ಲಿ ಮನೆ ನೀಡುವ ಕಾರ್ಯ ನಡೆಯಲಿದೆ ಎಂದರು.
ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಕುಂದಾಪುರ ತಾಲೂಕು ಹಿರಿಯ ಯೋಜನಾಧಿಕಾರಿ ಮುರಳೀಧರ ಕೆ.ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜನರಿಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ‘ನಮ್ಮೂರು-ನಮ್ಮ ಕೆರೆ’ ಕಾರ್ಯಕ್ರಮದಡಿ ಈ ತನಕ 314 ಕೆರೆಗಳ ಅಭಿವೃದ್ದಿಗೊಳಿಸಲಾಗಿದೆ. ಅಂತರ್ಜಲ ಮಟ್ಟ ಏರಿಸಿ, ನೀರು ಇಂಗಿಸುವಿಕೆ ಪ್ರಾಮುಖ್ಯವಾಗಿದ್ದು ಜನರಿಂದಲೂ ಉತ್ತಮ ಸಹಕಾರ ಸಿಗುತ್ತಿದೆ ಎಂದರು.
ಕುಂದಾಪುರ ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಿ.ಸಿ. ಟ್ರಸ್ಟ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಎಲ್.ಎಚ್. ಮಂಜುನಾಥ್ ಕೆರೆಗೆ ಬಾಗಿನ ಸಮರ್ಪಿಸಿದರು.
ಅಂಪಾರು ಕಂಚಾರುಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಾಮರಾಜ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಜಿಲ್ಲಾ ನಿರ್ದೇಶಕ ಗಣೇಶ್ ಬಿ, ಕರಾವಳಿ ಪ್ರಾದೇಶೀಕ ಕಚೇರಿ ಉಡುಪಿ ಇದರ ಪ್ರಾದೇಶಿಕ ನಿರ್ದೇಶಕರಾದ ವಸಂತ ಸಾಲ್ಯಾನ್, ಅಂಪಾರು ಗ್ರಾ.ಪಂ ಅಧ್ಯಕ್ಷೆ ಭಾರತಿ ಶೇಟ್, ಜನಜಾಗೃತಿ ವೇದಿಕೆ ಕುಂದಾಪುರ ತಾಲೂಕು ಅಧ್ಯಕ್ಷ ನವೀನಚಂದ್ರ ಶೆಟ್ಟಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷೆ ಶೋಭಾ ಚಂದ್ರ ಇದ್ದರು.
ಉದಯಕುಮಾರ್ ಶೆಟ್ಟಿ ಪ್ರಾರ್ಥಿಸಿದರು. ಧ.ಗ್ರಾ ಯೋಜನೆ ಕುಂದಾಪುರ ತಾಲೂಕು ಕೃಷಿ ಅಧಿಕಾರಿ ಚೇತನ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಅಂಪಾರು ಗ್ರಾ.ಪಂ ಉಪಾಧ್ಯಕ್ಷ ಅಶೋಕ್ ವಂದಿಸಿದರು.
ಅಂಪಾರು ಕಂಚಾರುಕೆರೆ ಬಗ್ಗೆ….
1 ಎಕರೆ 75 ಸೆಂಟ್ಸ್ ವಿಸ್ತೀರ್ಣದ ಈ ಕಂಚಾರುಕೆರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 5 ಲಕ್ಷದ 45 ಸಾವಿರ, ಗ್ರಾಮಪಂಚಾಯತಿಯಿಂದ 50 ಸಾವಿರ, ಹೂಳು ಸಾಗಾಟದಿಂದ 1,80,900 ಸಹಿತ ಕಾಮಗಾರಿಗೆ 7 ಲಕ್ಷದ 75 ಸಾವಿರದ 900 ರೂ ಖರ್ಚಾಗಿದೆ.
Comments are closed.