ಕರಾವಳಿ

ರೆಡ್‌ಕ್ರಾಸ್‌ನಂತಹ ಸಂಸ್ಥೆಗಳು ನೀಡುವ ನೆರವನ್ನು ಸದ್ಬಳಕೆ ಮಾಡಿ ಸ್ವಾವಲಂಬಿಗಳಾಗಿ ಬದುಕಿ : ಡಾ. ಕುಮಾರ್

Pinterest LinkedIn Tumblr

ಮಂಗಳೂರು : ರೆಡ್‌ಕ್ರಾಸ್‌ನಂತಹ ಮಾನವೀಯ ಸೇವೆ ನೀಡುವ ಸಂಸ್ಥೆಗಳು ನೀಡುವ ನೆರವನ್ನು ಪಡೆದುಕೊಂಡು ಕೊರೊನಾದ ಸವಾಲನ್ನು ಎದುರಿಸಿ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಂಡು ಮುಂದೆ ಸಾಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ದ. ಕ. ಜಿಲ್ಲಾ ರೆಡ್‌ಕ್ರಾಸ್ ಘಟಕದ ಉಪಾಧ್ಯಕ್ಷ ಡಾ. ಕುಮಾರ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಮನೆಯ ಆಧಾರಸ್ತಂಭವನ್ನೇ ಕಳೆದುಕೊಂಡ ಕುಟುಂಬಗಳ ಸ್ವಾವಲಂಬಿ ಜೀವನಕ್ಕಾಗಿ 30 ಹೊಲಿಗೆ ಯಂತ್ರ ಹಾಗೂ 100 ಆಹಾರ ಕಿಟ್‌ಗಳನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದರು.

ಕೊರೊನಾದಿಂದ ಮನೆ ಯಜಮಾನನನ್ನು ಕಳೆದುಕೊಂಡ ಬಡ ಕುಟುಂಬಕ್ಕೆ ಗ್ರಾಮ ಪಂಚಾಯಿತಿಗಳ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಿ ಹೊಲಿಗೆ ಯಂತ್ರ ನೀಡಲಾಗಿದೆ. ಅದನ್ನು ಮುಂದಿನ ಜೀವನಕ್ಕೆ ಪೂರಕವಾಗಿ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.

ದಕ್ಷಿಣ ಕನ್ನಡ ಜಿಲ್ಲಾ ರೆಡ್‌ಕ್ರಾಸ್ ಘಟಕದ ಚರ‍್ಮೆನ್ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ, ರಾಜ್ಯ ರೆಡ್‌ಕ್ರಾಸ್ ಘಟಕವು 30 ಹೊಲಿಗೆ ಯಂತ್ರ ಮತ್ತು 100 ಆಹಾರದ ಕಿಟ್‌ನ್ನು ಒದಗಿಸಿದ್ದು, ಅದನ್ನು ಅರ್ಹ ಫಲಾನುಭವಿಗಳಿಗೆ ಜಿಲ್ಲಾ ರೆಡ್‌ಕ್ರಾಸ್ ಘಟಕದ ಮೂಲಕ ವಿತರಿಸಲಾಗಿದೆ. ಮುಂದೆಯು ಮಾನವೀಯ ಸೇವೆಯಲ್ಲಿ ಸಂಸ್ಥೆ ಸದಾ ಮುಂದಿರುತ್ತದೆ ಎಂದರು.

ದ. ಕ. ಜಿಲ್ಲಾ ರೆಡ್‌ಕ್ರಾಸ್ ಘಟಕದ ಉಪಾಧ್ಯಕ್ಷ ನಿತ್ಯಾನಂದ ಶೆಟ್ಟಿ, ಸಾರ್ವಜನಿಕ ಸಂಪರ್ಕ ಮತ್ತು ಪ್ರಚಾರ ಸಮಿತಿಯ ಅಧ್ಯಕ್ಷ ಬಿ. ರವೀಂದ್ರ ಶೆಟ್ಟಿ, ರಾಜ್ಯ ಸಮಿತಿ ಸದಸ್ಯ ಯತೀಶ್ ಬೈಕಂಪಾಡಿ, ನಿಕಟಪೂರ್ವ ಗೌರವ ಕಾರ್ಯದರ್ಶಿ ಪ್ರಭಾಕರ ಶರ್ಮಾ ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಕುಸುಮಾಧರ ಸ್ವಾಗತಿಸಿದರು. ಸಂಸ್ಥೆ ಸಲಹೆಗಾರ ಸುಧಾಕರ್ ನಿರೂಪಿಸಿದರು. ಸಿಬ್ಬಂದಿಗಳಾದ ಮಲ್ಲಿಕಾ ಮತ್ತು ಪ್ರವೀಣ್ ಸಹಕರಿಸಿದರು.

Comments are closed.