ಪ್ರಮುಖ ವರದಿಗಳು

ತಮಿಳುನಾಡಿನಲ್ಲಿ ಹೆಲಿಕಾಪ್ಟರ್ ದುರಂತ: ಸೇನಾ ಮುಖ್ಯಸ್ಥ ರಾವತ್ ಸ್ಥಿತಿ ಗಂಭೀರ; ರಾವತ್ ಪತ್ನಿ ಸೇರಿ 11 ಮಂದಿ ಶವ ಪತ್ತೆ

Pinterest LinkedIn Tumblr

ಚೆನ್ನೈ: ದೇಶದ ಮೂರು ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ನಿ ಹಾಗೂ ಇತರ 12 ಮಂದಿ ಸೇನಾ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಭಾರತೀಯ ವಾಯುಸೇನೆಯ ಅತ್ಯಾಧುನಿಕ MI-17 V5 ಹೆಲಿಕಾಪ್ಟರ್ ತಮಿಳುನಾಡಿನ ಕೂನುರು ಸಮೀಪ ಪತನಕ್ಕೀಡಾದ ಭೀಕರ ದುರಂತ ಬುಧವಾರ (ಡಿ.8) ನಡೆದಿದೆ.

ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್ ಸೇರಿದಂತೆ ಮೂವರನ್ನು ರಕ್ಷಿಸಲಾಗಿದೆ. ಇನ್ನುಳಿದ ಹನ್ನೊಂದು ಮಂದಿಯ ಶವವನ್ನು ಹೊರಕ್ಕೆ ತೆಗೆಯಲಾಗಿದೆ. ಇಂದು ಮುಂಜಾನೆ ದೆಹಲಿಯಿಂದ ತಮಿಳುನಾಡಿಗೆ ವಿಮಾನದಲ್ಲಿ ಆಗಮಿಸಿದ್ದ ರಾವತ್ ಮತ್ತು ಅಧಿಕಾರಿಗಳು. ನಂತರ ಎಂಐ-17ವಿ 5 ಹೆಲಿಕಾಪ್ಟರ್ ನಲ್ಲಿ ಸೂಳೂರಿನತ್ತ ಪ್ರಯಾಣಿಸಿದ್ದರು.

ಆದರೆ ಹವಾಮಾನ ವೈಪರೀತ್ಯದಿಂದಾಗಿ ಎಂಐ-17ವಿ 5 ಹೆಲಿಕಾಪ್ಟರ್ ಲ್ಯಾಂಡಿಂಗ್ ಆಗಲು ಕೇವಲ ಐದು ನಿಮಿಷಗಳು ಬಾಕಿ ಇರುವಾಗಲೇ ದುರಂತ ಸಂಭವಿಸಿತ್ತು. ಘಟನೆಯಲ್ಲಿ ಬಿಪಿನ್ ರಾವತ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ವೆಲ್ಲಿಂಗ್ಟ್ ನಲ್ಲಿರುವ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಪಿನ್ ರಾವತ್ ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ ಹನ್ನೊಂದು ಮಂದಿ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.

ಘಟನೆಗೆ ನಿಖರ ಕಾರಣ ಏನೆಂಬ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಭಾರತೀಯ ವಾಯುಸೇನೆ ಟ್ವೀಟ್ ಮೂಲಕ ತಿಳಿಸಿದೆ. ಹೆಲಿಕಾಪ್ಟರ್ ಮರಕ್ಕೆ ಡಿಕ್ಕಿಹೊಡೆದು ಕೆಳಕ್ಕೆ ಬಿದ್ದಿದ್ದು, ನಂತರ ಬೆಂಕಿಹೊತ್ತಿಕೊಂಡಿರುವುದಾಗಿ ವರದಿ ತಿಳಿಸಿದೆ. ಘಟನೆ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.

 

Comments are closed.