ಪ್ರಮುಖ ವರದಿಗಳು

ಸೇನಾ ಹೆಲಿಕಾಪ್ಟರ್ ಪತನ: ರಕ್ಷಣಾ ಪಡೆ ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ನಿ ಸೇರಿ 13 ಮಂದಿ ಸಾವು

Pinterest LinkedIn Tumblr
ಚೆನ್ನೈ: ರಕ್ಷಣಾ ಪಡೆಗಳ ಮುಖ್ಯಸ್ಥ(ಸಿಡಿಎಸ್) ಜನರಲ್ ಬಿಪಿನ್ ರಾವತ್ ಹಾಗೂ ಹಿರಿಯ ರಕ್ಷಣಾ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಬುಧವಾರ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರು ಬಳಿ ಪತನಗೊಂಡಿದೆ. ಈ ಘಟನೆಯಲ್ಲಿ ಬಿಪಿನ್ ರಾವತ್ ಹಾಗೂ ಅವರ ಮಧುಲಿಕಾ ರಾವತ್ ಅವರು ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಹೆಲಿಕಾಪ್ಟರ್ ದುರಂತದಲ್ಲಿ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಹಾಗೂ 11 ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಭಾರತೀಯ ವಾಯುಪಡೆ ಟ್ವೀಟ್ ಮಾಡಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಿಪಿನ್ ರಾವತ್ ಅವರನ್ನು ವೆಲ್ಲಿಂಗ್ಟನ್ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ವೆಲ್ಲಿಂಗ್ಟನ್ ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜಿನಲ್ಲಿ ಉಪನ್ಯಾಸ ನೀಡಲು ಬಿಪಿನ್ ರಾವತ್ ತೆರಳುತ್ತಿದ್ದರು. ಆದರೆ ಹೆಲಿಕಾಪ್ಟರ್ ಸೂಲೂರು ವಾಯುನೆಲೆಯಿಂದ ವೆಲ್ಲಿಂಗ್ಟನ್‌ಗೆ ತೆರಳುವಾಗ, ಮಧ್ಯಾಹ್ನ 12.20ಕ್ಕೆ ಪತನಗೊಂಡಿದೆ. ಲ್ಯಾಂಡಿಂಗ್ ಸ್ಥಳದಿಂದ ಕೇವಲ 10 ಕಿಮೀ ದೂರದಲ್ಲಿ ಅಪಘಾತ ಸಂಭವಿಸಿದೆ ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸೇನಾ ಹೆಲಿಕಾಪ್ಟರ್ ನಲ್ಲಿ ಜನರಲ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್ಎಸ್ ಲಿಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ನಾಯಕ್ ಗುರ್ಸೇವಕ್ ಸಿಂಗ್, ನಾಯಕ್ ಜಿತೇಂದ್ರ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್, ಲ್ಯಾನ್ಸ್ ನಾಯಕ್ ಬಿ ಸಾಯಿ ತೇಜಾ ಮತ್ತು ಹವಾಲ್ದಾರ್ ಸತ್ಪಾಲ್ ಸೇರಿದಂತೆ 14 ಮಂದಿ ಪ್ರಯಾಣಿಸುತ್ತಿದ್ದರು ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ.

ತಮಿಳು ನಾಡಿನ ಕೂನೂರು ಬಳಿ ಎಂಐ-17ವಿ5 ಹೆಲಿಕಾಪ್ಟರ್ ಪತನಕ್ಕೀಡಾಗಿರುವ ಘಟನೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಭಾರತೀಯ ವಾಯುಪಡೆ ”ರಕ್ಷಣಾ ಪಡೆ ಮುಖ್ಯಸ್ಥ ಬಿಪಿನ್ ರಾವತ್, ಅವರ ಕುಟುಂಬ ಮತ್ತು ಇತರ ಉನ್ನತ ಮಟ್ಟದ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ದುರಂತಕ್ಕೀಡಾಗಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ” ಎಂದು ಹೇಳಿದೆ.

Comments are closed.