ಕಾರವಾರ: ಮುಂಬೈನಿಂದ ಮಂಗಳೂರಿಗೆ ತೆರಳುತ್ತಿದ್ದ ‘ಮೆರ್ಸಿ ಟ್ರಾವೆಲ್ಸ್’ನ ಹೆಸರಿನ ಖಾಸಗಿ ಬಸ್ ಯಲ್ಲಾಪುರ ಪಟ್ಟಣದ ಜೋಡುಕೆರೆ ಮಾರುತಿ ದೇವಸ್ಥಾನದ ಎದುರು ಬೆಂಕಿಗೆ ಆಹುತಿಯಾಗಿದೆ. ಅದೃಷ್ಟವಶಾತ್ ಬಸ್ನಲ್ಲಿದ್ದ ಯಾರಿಗೂ ಅಪಾಯವಾಗಿಲ್ಲ.
ಗುರುವಾರ ರಾಷ್ಟ್ರೀಯ ಹೆದ್ದಾರಿ 63ರ ಮೇಲೆ ಈ ಅವಘಡ ಸಂಭವಿಸಿದೆ.
ಬಸ್ (KA 51-AD 5836) ಮುಂಬೈಯಿಂದ 28 ಪ್ರಯಾಣಿಕರೊಂದಿಗೆ ಮಂಗಳೂರಿಗೆ ತೆರಳುತ್ತಿತ್ತು. ಸ್ಲೀಪಿಂಗ್ ಕೋಚ್ ಆಗಿರುವ ಈ ಬಸ್, ಪಟ್ಟಣದ ಮಾರುತಿ ದೇವಸ್ಥಾನದ ಎದುರಿನ ಘಟ್ಟದ ರಸ್ತೆ ಹತ್ತುತ್ತಿದ್ದಂತೆ, ಹಿಂಬದಿಯ ಟೈರ್ ಸ್ಫೋಟವಾಯಿತು. ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ತಗುಲಿರಬಹುದೆಂದು ಅಂದಾಜಿಸಲಾಗಿದೆ.
ಟೈರ್ ಸ್ಫೋಟವಾದ ಬಳಿಕ ಬಸ್ ಸ್ವಲ್ಪ ದೂರ ಚಲಿಸಿದೆ. ಆಗ ಬೆಂಕಿ ಇಡೀ ಬಸ್ಗೆ ಆವರಿಸಿದೆ. ಕೂಡಲೇ ಪ್ರಯಾಣಿಕರನ್ನು ಬಸ್ನಿಂದ ಕೆಳಗೆ ಇಳಿಸಲಾಯಿತು.
ಸ್ಲೀಪಿಂಗ್ ಕೋಚ್ ಬಸ್ನಲ್ಲಿ ಬಹಳಷ್ಟು ಪ್ರಯಾಣಿಕರು ಗಾಢನಿದ್ದೆಯಲ್ಲಿದ್ದು ಬಸ್ನಲ್ಲಿದ್ದ ಪ್ರಯಾಣಿಕರೊಬ್ಬರು ಅವಘಡವನ್ನು ಗಮನಿಸಿ ಬಸ್ನ ಸಿಬ್ಬಂದಿಯನ್ನು ಎಚ್ಚರಿಸಿದರು. ಕೂಡಲೇ ಎಲ್ಲರನ್ನೂ ಕೆಳಗಿಳಿಸುವಲ್ಲಿ ಯಶಸ್ವಿಯಾದರು. ಸ್ವಲ್ಪ ತಡವಾಗಿದ್ದರೂ ಭಾರಿ ಅನಾಹುತವಾಗುವ ಸಾಧ್ಯತೆಯಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸುವ ಪ್ರಯತ್ನ ಮಾಡಿದರು. ಆದರೆ, ಅದಾಗಲೇ ಬಸ್ ಸಂಪೂರ್ಣ ಸುಟ್ಟು ಕರಕಲಾಗಿತ್ತು.
Comments are closed.