ಬೆಂಗಳೂರು: ಬೆಳಗಾವಿಯಲ್ಲಿ ಎಂಇಎಸ್ (MES) ಕಾರ್ಯಕರ್ತರೆನ್ನಲಾದ ಪುಂಡರ ವರ್ತನೆ ಕನ್ನಡಿಗರನ್ನು ಸಿಟ್ಟಿಗೇಳಿಸಿದೆ.
ಭಾನುವಾರದಂದು ಡಾಲಿ ಧನಂಜಯ್ ನಟನೆಯ ಬಡವ ರಾಸ್ಕಲ್ ಚಿತ್ರದ ಪೂರ್ವಭಾವಿ ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಜ್ ಕುಮಾರ್ ಬೆಳಗಾವಿಯಲ್ಲಿ ನಡೆಯುತ್ತಿರುವ ಗದ್ದಲ, ಹೋರಾಟದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತೀಯರಾದ ನಮಗೆಲ್ಲರಿಗೂ ನಮ್ಮ-ನಮ್ಮ ಭಾಷೆಯ ಬಗ್ಗೆ ಹೆಮ್ಮೆ, ಪ್ರೀತಿ-ಶ್ರದ್ಧೆಯಿರಬೇಕು. ಆಯಾ ರಾಜ್ಯದ ಭಾಷೆ ಮತ್ತು ಸಂಸ್ಕೃತಿಗೆ ಮರ್ಯಾದೆ ಕೊಡುವುದು ನಮ್ಮ ಕರ್ತವ್ಯ. ಬೇರೆ ರಾಜ್ಯದ ಬಾವುಟವನ್ನು ಸುಡುವಂತಹ ಕೃತ್ಯ ಯಾರಿಂದಲೂ ಆಗಬಾರದು, ಅದು ನಮ್ಮ ತಾಯಿಯನ್ನು ಸುಟ್ಟಂತೆ ಅಲ್ಲವೇ ಎಂದಿದ್ದಾರೆ.
‘ನಾನು ಹುಟ್ಟಿದ್ದು ಚೆನ್ನೈನಲ್ಲಿ. ತಮಿಳನ್ನು ಮೂರನೇ ಭಾಷೆಯಾಗಿ ಕಲಿತಿದ್ದೇನೆ. ತಮಿಳು ಸ್ನೇಹಿತರ ಜತೆ ತಮಿಳಿನಲ್ಲಿ ಮಾತನಾಡುತ್ತೇನೆ. ತಮಿಳು, ತೆಲುಗು, ಮಲಯಾಳಂ, ಹಿಂದಿ, ಗುಜರಾತಿ, ಪಂಜಾಬಿ, ಮರಾಠಿ ಸೇರಿದಂತೆ ಎಲ್ಲ ಭಾಷೆಯ ಸಿನಿಮಾ ನೋಡುತ್ತೇನೆ. ಕರ್ನಾಟಕದಲ್ಲಿ ಇದ್ದಾಗ ಕನ್ನಡವನ್ನು ಪ್ರೀತಿಸಬೇಕು ಎಂದರು.
ಕನ್ನಡಿಗರು ಸುಮ್ಮನಿದ್ದೇವೆ ಎಂದರೆ ನಮಗೆ ಶಕ್ತಿ ಇಲ್ಲ ಅಂತ ಅಲ್ಲ, ನಮ್ಮನ್ನು ಕೆಣಕಲು ಬರಬೇಡಿ. ಮನುಷ್ಯ ಕೋಪ ಬಂದರೆ ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತಾನೆ. ಸರ್ಕಾರದವರು ಈ ಸಂದರ್ಭದಲ್ಲಿ ಇಚ್ಛಾಶಕ್ತಿ ತೋರಿಸಿ ಕಠಿಣ ಸಂದೇಶ ನೀಡಬೇಕು. ಇಲ್ಲಿ ರಾಜಕೀಯ ಮಾಡಬಾರದು, ವೋಟಿಂಗ್ ರಾಜಕಾರಣಕ್ಕಾಗಿ ಅವರು ಸುಮ್ಮನಾಗಬಾರದು. ಘಟನೆ ಬಗ್ಗೆ ತಿಳಿದ ತಕ್ಷಣ ನಾನು ಟ್ವೀಟ್ ಮಾಡಿದೆ. ಆದರೆ ಒಂದು ಟ್ವೀಟ್ ಗೆ ಇದು ಮುಗಿಯಬಾರದು, ಇತ್ತೀಚೆಗೆ ಟ್ವೀಟ್ ಮಾಡುವುದು ಫ್ಯಾಷನ್ ಆಗಿ ಬಿಟ್ಟಿದೆ. ಅದರಿಂದ ಏನೂ ಪ್ರಯೋಜನ ಇಲ್ಲ ಎಂದರು.
ಕನ್ನಡ ಭಾಷೆಯ ವಿಚಾರ ಬಂದಾಗ ಪ್ರಾಣ ಕೊಡೋಕೂ ಸಿದ್ಧನಿದ್ದೇನೆ. ನನಗೆ 59 ವರ್ಷ ಆಯ್ತು. 60ನೇ ವರ್ಷಕ್ಕೆ ಕಾಲಿಡುತ್ತಿದ್ದೇನೆ, ಕನ್ನಡ ಭಾಷೆಗೆ ಪ್ರಾಣ ಕೊಡಬೇಕಾದ ಪರಿಸ್ಥಿತಿ ಬಂದರೆ ಅದಕ್ಕೂ ಸಿದ್ಧನಿದ್ದೇನೆ, ಇಲ್ಲಿ ನಾನು ಪ್ರಾಕ್ಟಿಕಲ್ ಆಗಿ ಮಾತನಾಡುತ್ತಿದ್ದೇನೆ, 60 ವರ್ಷ ಕನ್ನಡಿಗರು ಪ್ರೀತಿಕೊಟ್ಟು ಬೆಳೆಸಿದ್ದಾರೆ. ಜನರು ಯಾವುದೋ ಕಾರಣಕ್ಕೆ ನಿಧನರಾಗ್ತಾರೆ. 46 ವರ್ಷಕ್ಕೆ ಒಬ್ಬ ಹೊರಟು ಹೋಗ್ತಾನೆ ಅಂತ ಯಾರೂ ಊಹಿಸಿರಲಿಲ್ಲ. ಯಾರ ಜೀವಕ್ಕೂ ಗ್ಯಾರಂಟಿ ಇಲ್ಲ. ಅಂತ ದೊಡ್ಡ ಆಸೆ ನನಗೆ ಇನ್ನೇನೂ ಉಳಿದಿಲ್ಲ.
ಹಾಗೆಂದು ಸಾಯಕ್ಕೂ ಇಷ್ಟಪಡುತ್ತೇನೆ ಎಂದಲ್ಲ, ಇನ್ನೂ 100 ವರ್ಷ ಇರಬೇಕು ಅಂತ ಆಸೆಪಡುತ್ತೇನೆ. ಯಾಕೆಂದರೆ ಬದುಕು ಒಂದು ಉಡುಗೊರೆ. ಅನವಶ್ಯಕವಾಗಿ ಕಳೆದುಹೋಗಬಾರದು ಎಂದರು.
Comments are closed.