ಉಡುಪಿ: ಬ್ರಹ್ಮಾವರ ಬಾರ್ಕೂರು ಮೂಲದ ರೆ| ಫಾ| ಗುರು ಆಲ್ಫ್ರೆಡ್ ರೋಚ್ ಅವರ ಸಾತ್ವಿಕ ಜೀವನ ಹಾಗೂ ಜನರ ಬೇಡಿಕೆಯನ್ನು ಪರಿಗಣಿಸಿ ವ್ಯಾಟಿಕನ್‌ನ “ಸಂತರು ಮತ್ತು ಪುನೀತರನ್ನಾಗಿ ಘೋಷಿಸುವ ವಿಭಾಗ’ ವು ಅವರನ್ನು ಪುನೀತ ಪದವಿಗೆ ಏರಿಸುವ ಪ್ರಕ್ರಿಯೆಯನ್ನು ಆರಂಭಿಸಲು ಅನುಮತಿ ನೀಡಿದೆ. ಈ ಪ್ರಕ್ರಿಯೆಗೆ ಡಿ. 27ರಂದು ಚಾಲನೆ ಸಿಗಲಿದೆ.
ಸಂತ ಪದವಿಗೇರುವುದು ಬಹುದೊಡ್ಡ ಸಾಧನೆ ಹಾಗೂ ಗೌರವ. ಇದು ಸುದೀರ್ಘ ಅವಧಿಯ ಪ್ರಕ್ರಿಯೆಯಾಗಿದ್ದು, ಹಲವು ರೀತಿಯ ಅಧ್ಯಯನ ನಡೆಸಿದ ಬಳಿಕ ಸಂತ ಪದವಿ ಪ್ರಾಪ್ತಿಯಾಗುತ್ತದೆ.
ಆಲ್ಫ್ರೆಡ್ ರೋಚ್ ಬಗ್ಗೆ ಕಪುಚಿನ್ ಸಭೆಯ ಧರ್ಮಗುರು ವಂ| ಗುರು ಆಲ್ಫ್ರೆಡ್ ರೋಚ್ 1924ರಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರ್ಕೂರಿನಲ್ಲಿ ಹುಟ್ಟಿ ಬೆಳೆದು ಕ್ರೈಸ್ತ ಧರ್ಮಗುರುವಾಗಿ ಕರ್ನಾಟಕದಾದ್ಯಂತ ಸೇವೆ ಸಲ್ಲಿಸಿದ್ದರು. ಬ್ರಹ್ಮಾವರದಲ್ಲೇ ಹದಿನಾರು ವರ್ಷಗಳ ಕಾಲ ಜನಸೇವೆಯಲ್ಲಿ ತೊಡಗಿ 1996ರಲ್ಲಿ ದೈವಾಧೀನರಾದರು. ಅವರ ಸಾತ್ವಿಕ ಜೀವನ, ಜನರಿಗೆ ಅವರು ಸಲ್ಲಿಸಿದ ನಿಸ್ವಾರ್ಥ ಸೇವೆ, ಬಡಜನರ ಅಭಿವೃದ್ಧಿಗಾಗಿ ಅವರು ಮಾಡಿದ ಸಹಾಯ, ಇನ್ನಿತರ ದಯಾ ಕಾರ್ಯಗಳಿಂದ ಅವರನ್ನು ಆಧ್ಯಾತ್ಮಿಕತೆ ಹಾಗೂ ಜನಸೇವೆಯ ಮಾದರಿಯಾಗಿ ಪರಿಗಣಿಸಿ ಜಾತಿ-ಮತ ಬೇಧವಿಲ್ಲದೆ ಜನರು ಗೌರವಿಸಿದರು. ಅವರು ನಿಧನರಾಗಿ ಇಪ್ಪತ್ತೈದು ವರ್ಷ ಕಳೆದರೂ, ಅವರನ್ನು ಪುನೀತ ಪದವಿಗೆ ಏರಿಸಬೇಕೆಂಬ ಜನರ ಬೇಡಿಕೆಯು ದಿನೇ ದಿನೇ ಹೆಚ್ಚಳವಾಗ ತೊಡಗಿತು. ಈ ಎಲ್ಲ ಅಂಶಗಳನ್ನು ಗಮನಿಸಿ ಕೊಂಡು ಅವರನ್ನು ಪುನೀತ ಪದವಿಗೆ ಏರಿಸುವ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಸೂಚಿಸಲಾಗಿದೆ.
ಇದೊಂದು ಅತೀ ಸಂಕೀರ್ಣ ಹಾಗೂ ಬಹಳ ಕಾಲ ತಗಲುವ ಪ್ರಕ್ರಿಯೆಯಾಗಿದ್ದು, ಕೆಥೋಲಿಕ್ ಧರ್ಮಸಭೆಯ ನೀತಿ-ನಿಯಮಗಳ ಪ್ರಕಾರ ನಡೆಯಲಿದೆ. ಈ ಪ್ರಕ್ರಿಯೆಯ ಅಂತ್ಯದಲ್ಲಿ, ಮೊದಲು ಪುನೀತ, ಅನಂತರ ಕೊನೆಯದಾಗಿ ಸಂತ ಪದವಿಯನ್ನು ಪೋಪ್ ಜಗದ್ಗುರುಗಳು ದಯಪಾಲಿಸಲಿದ್ದಾರೆ. ಈ ಸಂಕೀರ್ಣ ಪ್ರಕ್ರಿಯೆಯ ಪ್ರಥಮ ಹಂತವನ್ನು ವ್ಯಕ್ತಿಯು ಜೀವಿಸಿದ ಪರಿಸರದಲ್ಲಿ ನಡೆಸಲಾಗುತ್ತದೆ.
ಪುನೀತ ಪದವಿಗೆ ಏರಿಸುವ ಪ್ರಕ್ರಿಯೆ ಆರಂಭಗೊಂಡ ಬಳಿಕ ಉಡುಪಿ ಬಿಷಪ್, ವ್ಯಾಟಿಕನ್‌ನಿಂದ ನೇಮಕಗೊಳ್ಳುವ ವೈಸ್ ಪೊಸ್ಟುಲೇಟರ್, ಧರ್ಮಶಾಸ್ತ್ರ ಅಧ್ಯಯನ ಮಾಡಿದವರು, ನೋಟರಿ, ನೈತಿಕ ಶಾಸ್ತ್ರ ಪರಿಣತರನ್ನೊಳಗೊಂಡ 8ರಿಂದ 10 ಮಂದಿಯ ಸಮಿತಿಯನ್ನು ರಚಿಸ ಲಾಗುತ್ತದೆ. ಇವರು ವಂ| ಗುರು ಆಲ್ಫ್ರೆಡ್ ರೋಚ್ ಅವರ ವಿಚಾರಗಳು, ಸೇವಾ ಮನೋಭಾವ, ಧಾರ್ಮಿಕ, ಸಾಮಾಜಿಕ ಸೇವೆ, ಆಚಾರ-ವಿಚಾರಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಕಾಲಕಾಲಕ್ಕೆ ವರದಿ ನೀಡಲಿದ್ದಾರೆ. ಅವರ ಆರಾಧನೆಯಿಂದ ನಡೆದ ಪವಾಡ, ಜನರ ಅನಿಸಿಕೆಗಳನ್ನು ಸಂಗ್ರಹಿಸುವ ಕೆಲಸವನ್ನು ಈ ಸಮಿತಿ ಮಾಡಲಿದೆ.
Comments are closed.