ಉಡುಪಿ/ಕುಂದಾಪುರ: ಕೊರೋನಾ ಪ್ರಸರಣ ತಡೆಯುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ವಾರಾಂತ್ಯ ಕರ್ಫ್ಯೂ ಆದೇಶ ನೀಡಿದ್ದು ಈ ಹಿನ್ನೆಲೆಯಲ್ಲಿ ಶನಿವಾರ ಉಡುಪಿ ಜಿಲ್ಲೆಯಾದ್ಯಂತ ವಾಹನ ಹಾಗೂ ಜನ ಸಂಚಾರ ಸಾಕಷ್ಟು ವಿರಳವಾಗಿ ಕಂಡು ಬಂದಿತ್ತು. ಬಹಳಷ್ಟು ಜನ ವಿರೋಧದ ನಡುವೆ ನಡೆಯುತ್ತಿರುವ ವೀಕೆಂಡ್ ಕರ್ಫ್ಯೂ ಈ ಬಾರಿಯೂ ಜನಸಾಮಾನ್ಯರ ಬದುಕು ಕಿತ್ತುಕೊಳ್ಳುವ ಆತಂಕ ಸೃಷ್ಟಿಯಾಗಿದೆ.
ಖಾಸಗಿ ಸರ್ವಿಸ್, ಸಿಟಿ ಹಾಗೂ ಕೆಎಸ್‌ಆರ್‌ಟಿಸಿ ಮತ್ತು ನರ್ಮ್ ಬಸ್‌ಗಳು ಎಲ್ಲ ಮಾರ್ಗಗಳಲ್ಲಿಯೂ ಸಂಚರಿಸುತ್ತಿದ್ದವು. ರಿಕ್ಷಾ, ಟ್ಯಾಕ್ಸಿಗಳು ಎಂದಿನಂತೆ ನಿಲ್ದಾಣಗಳಲ್ಲಿ ಕಂಡುಬಂದವು. ನಗರದಲ್ಲಿ ಖಾಸಗಿ ವಾಹನ ಹಾಗೂ ಜನ ಸಂಚಾರ ವಿರಳ ಬಿಟ್ಟರೆ ಉಳಿದವು ಸಾಮಾನ್ಯದಂತೆಯೇ ಕಂಡುಬಂದವು.
ಉಡುಪಿ ನಗರದ ಕಲ್ಸಂಕ ಸೇರಿದಂತೆ ಜಿಲ್ಲೆಯ ಕೆಲವೆಡೆ ಪೊಲೀಸರು, ವಾಹನಗಳ ತಪಾಸಣಾ ಕಾರ್ಯವನ್ನು ನಡೆಸಿದರು. ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಗರದ ಕಲ್ಸಂಕ ಸೇರಿದಂತೆ ಜಿಲ್ಲೆಯ ಕೆಲವೆಡೆ ಪೊಲೀಸರು, ವಾಹನಗಳ ತಪಾಸಣಾ ಕಾರ್ಯವನ್ನು ನಡೆಸಿದರು. ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಬ್ರಹ್ಮಾವರ, ಕುಂದಾಪುರ ಕೆಲವು ಅಂಗಡಿಗಳು ಅರ್ಧ ತೆರೆದು ವ್ಯಾಪಾರ ನಡೆಸುತ್ತಿರುವುದು ಕಂಡುಬಂದವು. ಗ್ರಾಮಾಂತರ ಪ್ರದೇಶದಲ್ಲಿ ಬಹುತೇಕ ಅಂಗಡಿಗಳು ತೆರೆದಿದ್ದವು..
ಜನ ಸಂಚಾರ ಇಲ್ಲದೆ ಬಸ್‌ಗಳಲ್ಲಿಯೂ ಕಡಿಮೆ ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರಯಾಣಿಸುತ್ತಿರುವುದು ಕಂಡುಬಂತು. ಅದೇರೀತಿ ಕೆಲವು ಅಂಗಡಿಗಳು ವ್ಯಾಪಾರ ಇಲ್ಲದೆ ಮಧ್ಯಾಹ್ನದ ವೇಳೆ ಬಂದ್ ಮಾಡಿತು. ಪೂರ್ವ ನಿಗದಿ ಯಾಗಿದ್ದ ಕಾರ್ಯಕ್ರಮಗಳು ಸರಾಗವಾಗಿ ನಡೆದವು.
ಕುಂದಾಪುರ ವರದಿ…
ವಾರಾಂತ್ಯ ಕರ್ಫ್ಯೂ ಆದೇಶ ನೀಡಿದ್ದು ಈ ಹಿನ್ನೆಲೆಯಲ್ಲಿ ಶನಿವಾರ ಕುಂದಾಪುರ ತಾಲೂಕಿನಾದ್ಯಂತ ವಾಹನ ಹಾಗೂ ಜನ ಸಂಚಾರ ಸಾಕಷ್ಟು ವಿರಳವಾಗಿ ಕಂಡು ಬಂದಿತ್ತು.
ಶನಿವಾರ ಮುಂಜಾನೆಯಿಂದಲೇ ವಿರಳ ಸಂಖ್ಯೆಯಲ್ಲಿ ಜನರ ಓಡಾಟವಿತ್ತು. ನಿತ್ಯ ಕೆಲಸಕ್ಕೆ ತೆರಳುವ ಕಾರ್ಮಿಕರು ಕೂಡ ಕ್ಷೀಣ ಸಂಖ್ಯೆಯಲ್ಲಿ ಕಂಡುಬಂದರು. ಸುಮಾರು 9 ಗಂಟೆ ಬಳಿಕ ನಗರ ಸಹಿತ ಗ್ರಾಮೀಣ ಪ್ರದೇಶದಲ್ಲಿ ಭಾಗಶಃ ಬಂದ್ ವಾತಾವರ ಕಂಡುಬಂದಿತ್ತು. ನಗರದಲ್ಲಿ ಖಾಸಗಿ ವಾಹನ ಹಾಗೂ ಜನ ಸಂಚಾರ ವಿರಳವಾಗಿತ್ತು. ದಿನಸಿ, ತರಕಾರಿ, ಹೂ-ಹಣ್ಣು, ಮೀನು ಮಾರಾಟದಂಗಡಿ ತೆರೆದಿತ್ತು. ಹಾಲು, ಮೆಡಿಕಲ್ ಮೊದಲಾದ ಯಾವುದೇ ತುರ್ತು ಸೇವೆಗಳು ವ್ಯತ್ಯಯವಿಲ್ಲದೆ ಕಾರ್ಯಚರಿಸಿತ್ತು. ಬಹುತೇಕ ಎಲ್ಲಾ ಹೋಟೆಲುಗಳಲ್ಲಿ ಪಾರ್ಸೆಲ್ ನೀಡುವ ವ್ಯವಸ್ಥೆ ಮಾತ್ರವಿತ್ತು.
ಬಸ್ ಇದ್ದರೂ ಪ್ರಯಾಣಿಕರಿಲ್ಲ…
ಬೆಳಿಗ್ಗೆನಿಂದ ಕುಂದಾಪುರ ನಗರವನ್ನು ಕೇಂದ್ರೀಕರಿಸಿಕೊಂಡು ಉಡುಪಿ, ಮಂಗಳೂರು, ಬೈಂದೂರು ಸಹಿತ ಗ್ರಾಮೀಣ ಭಾಗಗಳು ಹಾಗೂ ಹೊರ ಜಿಲ್ಲೆಗಳಿಗೆ ತೆರಳುವ ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿದ್ದವು. ಆದರೆ ಪ್ರಯಾಣಿಕರ ಸಂಖ್ಯೆಯಲ್ಲಿ ಬಾರೀ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿತ್ತು. ಕೆಲ ಬಸ್ಸಿನಲ್ಲಿ ಬೆರಳೆಣಿಕೆ ಮಂದಿ ಮಾತ್ರವೇ ಪ್ರಯಾಣಿಸುತ್ತಿದ್ದರು. ಇನ್ನು ರಿಕ್ಷಾ, ಟ್ಯಾಕ್ಸಿಗಳು ಎಂದಿನಂತೆ ನಿಲ್ದಾಣಗಳಲ್ಲಿ ಕಂಡುಬಂದವು.
ವಾರದ ಸಂತೆಯಿಲ್ಲ…
ಹೊಸ ಮಾರ್ಗ ಸೂಚಿ ಪ್ರಕಾರ ಎಪಿಎಂಸಿ ಪ್ರಾಂಗಣದಲ್ಲಿ ನಡೆಯುವ ಕುಂದಾಪುರದ ಶನಿವಾರ ಸಂತೆ ಇರಲಿಲ್ಲ. ಮುಂಜಾನೆ ವೇಳೆ ಒಂದಷ್ಟು ವ್ಯಾಪಾರಸ್ಥರು ಆಗಮಿಸಿದರೂ ಕೂಡ ಅದಕ್ಕೆ ಅವಕಾಶ ನೀಡಲಾಗಿಲ್ಲ. ಸಂಗಮ್ ಜಂಕ್ಷನ್, ಸಂತೆ ಮಾರುಕಟ್ಟೆ ಹಿಂಭಾಗದ ರಸ್ತೆ ಸಮೀಪ ತರಕಾರಿ, ಹಣ್ಣು ಮಾರಾಟ ನಡೆದಿದ್ದು ಗ್ರಾಹಕರು ಕೊಂಡುಕೊಳ್ಳುವ ದೃಶ್ಯ ಕಂಡುಬಂತು. ಕುಂದಾಪುರ ಹೂವಿನ ಮಾರುಕಟ್ಟೆ ತೆರೆದಿದ್ದರೂ ಕೂಡ ಗ್ರಾಹಕರು ಇರಲಿಲ್ಲ.
ಕುಂದಾಪುರ ನಗರದ ಶಾಸ್ತ್ರೀವೃತ್ತ ಸಹಿತ ಕೆಲವೆಡೆ ಪೊಲೀಸರು, ವಾಹನಗಳ ತಪಾಸಣಾ ಕಾರ್ಯವನ್ನು ನಡೆಸಿದರು. ಬೆಳಿಗ್ಗೆನ ಸಮಯ ಕುಂದಾಪುರದಲ್ಲಿ ಕೆಲವು ಅಂಗಡಿಗಳು ಅರ್ಧ ತೆರೆದು ವ್ಯಾಪಾರ ನಡೆಸುತ್ತಿರುವುದು ಕಂಡುಬಂದವು. ಗ್ರಾಮಾಂತರ ಪ್ರದೇಶದಲ್ಲಿ ಬಹುತೇಕ ಅಂಗಡಿಗಳು ತೆರೆದಿದ್ದವಾದರೂ ನಂತರದಲ್ಲಿ ಎಲ್ಲವನ್ನೂ ಬಂದ್ ಮಾಡಲಾಗಿತ್ತು.
ಕುಂದಾಪುರ ಸಹಾಯಕ ಕಮಿಷನರ್ ಕೆ. ರಾಜು, ಡಿವೈಎಸ್ಪಿ ಶ್ರೀಕಾಂತ್ ಕೆ. ನಗರದ ವಿವಿದೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಿಎಸ್ಐ ಸದಾಶಿವ ಗವರೋಜಿ , ಟ್ರಾಫಿಕ್ ಪೊಲೀಸರು ಗಸ್ತು ನಡೆಸಿದರು. ಪೊಲೀಸರು ಹಾಗೂ ಪುರಸಭೆ ವತಿಯಿಂದ ಮೈಕ್ ಮೂಲಕ ಕೋವಿಡ್ ಜಾಗೃತಿ, ನಿಯಮಾವಳಿ ಪಾಲನೆ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯಿತು.
Comments are closed.