ಬೆಂಗಳೂರು: ಹಿಜಾಬ್ ಮತ್ತು ಕೇಸರಿ ಶಾಲು ವಿವಾದಕ್ಕೆ ಕರ್ನಾಟಕ ಸರ್ಕಾರ ತೆರೆ ಎಳೆದಿದೆ. ಇದೀಗ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಸಮವಸ್ತ್ರವೇ ಕಡ್ಡಾಯ ಎಂದು ಆದೇಶ ಹೊರಡಿಸಿದೆ.
ಶಿರವಸ್ತ್ರ ಅಥವಾ ಹಿಜಾಬ್ ಹಾಕಿಕೊಂಡು ಅಥವಾ ತಲೆಯನ್ನು ಮುಚ್ಚಿಕೊಂಡು ಶಾಲೆಗೆ ಬರದಂತೆ ತಡೆಯುವುದು ಸಂವಿಧಾನದ ಉಲ್ಲಂಘನೆ ಅಲ್ಲವೆಂದು ಸುಪ್ರೀಂ ಕೋರ್ಟ್ ಮತ್ತು ವಿವಿಧ ರಾಜ್ಯಗಳ ಹೈಕೋರ್ಟ್‌ಗಳು ಈಗಾಗಲೇ ತೀರ್ಪು ನೀಡಿವೆ. ಹೀಗಾಗಿ, ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಸರ್ಕಾರ ನಿಗದಿಪಡಿಸಿರುವ ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಶಾಲಾ ಆಡಳಿತ ಮಂಡಳಿಗಳು ನಿರ್ಧರಿಸುವ ಸಮವಸ್ತ್ರವನ್ನೇ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಧರಿಸಬೇಕು ಎಂದೂ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದ್ದು, ಪದವಿಪೂರ್ವ ಶಿಕ್ಷಣ ಇಲಾಖೆಯ ವ್ಯಾಪ್ತಿಯ ಎಲ್ಲ ಕಾಲೇಜುಗಳಲ್ಲಿ ಆಯಾ ಕಾಲೇಜುಗಳ ಕಾಲೇಜು ಅಭಿವೃದ್ಧಿ ಸಮಿತಿ ಅಥವಾ ಆಡಳಿತ ಮಂಡಳಿಗಳ ಮೇಲ್ವಿಚಾರಣಾ ಸಮಿತಿಯು ನಿರ್ಧರಿಸುವ ಸಮವಸ್ತ್ರ ಧರಿಸಬೇಕು. ಆಡಳಿತ ಮಂಡಳಿಗಳು ಸಮವಸ್ತ್ರಗಳನ್ನು ನಿಗದಿಪಡಿಸದೇ ಇದ್ದರೆ ಸಮಾನತೆ ಮತ್ತು ಏಕತೆಯನ್ನು ಕಾಪಾಡಿಕೊಂಡು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಉಡುಪು ಧರಿಸಬೇಕು ಎಂದೂ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
Comments are closed.