ಬೆಂಗಳೂರು: ರಾಜ್ಯದ ವಿವಿದೆಡೆ ಕಾಲೇಜುಗಳಲ್ಲಿ ತಾರಕ್ಕೇರಿರುವ ಹಿಜಾಬ್ ವಿವಾದ ಬಗ್ಗೆ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಇಂದು ಫೆ.8 ಮಂಗಳವಾರ ಕೈಗೆತ್ತಿಕೊಂಡಿತು. ಸುದೀರ್ಘ ವಾದ- ಪ್ರತಿವಾದ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು ಬುಧವಾರ ಮಧ್ಯಾಹ್ನ 2.30 ಕ್ಕೆ ಮುಂದೂಡಿಕೆ ಮಾಡಿದ್ದಾರೆ.
ಸುದೀರ್ಘ ವಾದವನ್ನು ಆಲಿಸಿದ ಬಳಿಕ ಶಾಂತಿ ಮತ್ತು ಸಹನೆ ಕಾಪಾಡಿಕೊಳ್ಳುವಂತೆ ವಿದ್ಯಾರ್ಥಿ ಸಮುದಾಯ ಹಾಗೂ ಸಾರ್ವಜನಿಕರಲ್ಲಿ ಹೈಕೋರ್ಟ್ ಮನವಿ ಮಾಡಿತು.
ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಹಿಜಾಬ್ (ಶಿರವಸ್ತ್ರ) ಧರಿಸುವುದಕ್ಕೆ ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಸಲ್ಲಿಸಿರುವ ಎರಡು ಪತ್ಯೇಕ ತಕರಾರು ಅರ್ಜಿಗಳ ವಿಚಾರಣೆಯು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕಸದಸ್ಯ ನ್ಯಾಯಪೀಠ ನಡೆಸಿತು. ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ವಸ್ತ್ರ ಸಂಹಿತೆ ಕುರಿತು ರಾಜ್ಯ ಸರ್ಕಾರ ಫೆ.5ರಂದು ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಹೊಸದಾಗಿ ಎರಡು ಅರ್ಜಿಗಳನ್ನು ಸಲ್ಲಿಸಲಾಗಿತ್ತು.
ಅರ್ಜಿದಾರರ ಪರ ವಕೀಲ ದೇವದತ್ತ ಕಾಮತ್ ವಾದ ಮಂಡನೆ ಮಾಡಿದರೆ, ಸರ್ಕಾರದ ಪರ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಹೆಚ್ಷುವರಿ ಅಡ್ವೋಕೇಟ್ ಜನರಲ್ ಅರುಣ್ ಶ್ಯಾಮ್ ವಾದ ಮಂಡಿಸಿದರು.
ಅರ್ಜಿದಾರರ ಪರ ವಕೀಲ ದೇವದತ್ ಕಾಮತ್, ಹಿಜಾಬ್ ಇಸ್ಲಾಂನ ಅಗತ್ಯ ಆಚರಣೆ ಎಂದು ಕುರಾನ್ ನಲ್ಲಿ ಉಲ್ಲೇಖವಿದೆ. ಆದರೆ ಸರ್ಕಾರ ವಿದ್ಯಾರ್ಥಿಗಳ ಹಕ್ಕು ಉಲ್ಲಂಘಿಸಿದೆ. ಸಂವಿಧಾನದ 19(1)A ಹಾಗೂ 21ನೇ ವಿಧಿ ಅಡಿಯಲ್ಲಿ ಇಚ್ಛೆಯ ಬಟ್ಟೆ ಧರಿಸುವ ಹಕ್ಕಿದೆ ಎಂದರು. ಹೈಕೋರ್ಟ್ ಲೈಬ್ರರಿಯಿಂದ ಕುರಾನ್ ಪ್ರತಿ ತರಿಸಲು ಸೂಚಿಸಿದರು.
ವಕೀಲ ದೇವದತ್ ಕಾಮತ್, ಧಾರ್ಮಿಕ ಆಚರಣೆ, ಸರ್ಕಾರದ ನಿಯಮದ ನಡುವೆ ಗೊಂದಲವಿದ್ದಾಗ ಕೋರ್ಟ್ ಇದನ್ನು ತೀರ್ಮಾನಿಸಬೇಕು ಎಂದು ಕೇರಳ ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿದ್ದಾರೆ. ಅಲ್ಲದೇ ಲಕ್ಷ್ಮೀಂದ್ರ ತೀರ್ಥ ಸ್ವಾಮಿಯರ್ ವರ್ಸಸ್ ರಾಜ್ಯ, ಅಮೆರಿಕಾ ಸಂವಿಧಾನ, ಹಳೆಯ ತೀರ್ಪನ್ನು ಉಲ್ಲೇಖಿಸಿದರು.
ಸರ್ಕಾರ ಫೆ. 5 ರಂದು ಹೊರಡಿಸಲಾಗಿರುವ ಆದೇಶದಲ್ಲಿ ಉಲ್ಲೇಖಲಾಗಿಸಿರುವ ಕೇರಳ, ಬಾಂಬೆ ಹಾಗೂ ಮದ್ರಾಸ್ ಹೈಕೋರ್ಟ್ ತೀರ್ಪುಗಳನ್ನು ತಪ್ಪಾಗಿ ಪರಿಭಾಷಿಸಲಾಗಿದೆ. ಸಂವಿಧಾನ ಪರಿಚ್ಛೇದ 25ಕ್ಕೂ ಸರ್ಕಾರದ ಆದೇಶಕ್ಕೂ ಸಂಬಂಧವಿಲ್ಲ ಎಂದು ಅರ್ಜಿದಾರರ ಪರ ವಕೀಲ ಕಾಮತ್ ವಾದ ಮಂಡಿಸಿದರು.
ಸಾರ್ವಜನಿಕ ಸುವ್ಯವಸ್ಥೆ ನೆಪದಲ್ಲಿ ಧಾರ್ಮಿಕ ಆಚರಣೆಗೆ ಅಡ್ಡಿಯಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿ. ಅದಕ್ಕೆ ನೆಪಗಳನ್ನು ಕೊಡುವುದಲ್ಲ. ಹುಡುಗಿಯರು ಶಿರವಸ್ತ್ರ ಧರಿಸಿ ತಮ್ಮಷ್ಟಕ್ಕೆ ತಾವೇ ಕಾಲೇಜಿಗೆ ಹೋಗುವಾಗ ಸಾರ್ವಜನಿಕ ಸುವ್ಯವಸ್ಥೆ ಧಕ್ಕೆ ಹೇಗಾಗುತ್ತದೆ? ಯಾರೂ ಗೂಂಡಾ ಶಕ್ತಿಗಳು ಸಮಸ್ಯೆ ಸೃಷ್ಟಿಸಿದರೆ ಸರ್ಕಾರ ಅದನ್ನು ತಡೆಯಬೇಕು. ಅದು ಬಿಟ್ಟು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ವಕೀಲ ಕಾಮತ್ ವಾದ ಮಂಡಿಸಿದರು.
ಎರಡು ಬಗೆಯ ಜಾತ್ಯಾತೀತತೆ ಇದೆ. ಒಂದು ನಗೆಟಿವ್ ಸೆಕ್ಯೂಲರಿಸಂ, ಒಂದು ಪಾಸಿಟಿವ್ ಸೆಕ್ಯೂಲರಿಸಂ. ನಮ್ಮದು ಪಾಸಿಟಿವ್ ಸೆಕ್ಯೂಲರಿಸಂ ಎಂದು ಕಾಮತ್ ಹೇಳಿದರು.
ಹಿಜಾಬ್ ಧರಿಸಿದ ಹುಡುಗಿಯರನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಲಾಗಿದೆ ಎಂದು ವಕೀಲ ದೇವದತ್ತ್ ಕಾಮತ್ ಆರೋಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಡ್ವೋಕೇಟ್ ಜನರಲ್, ಇದು ಆಧಾರ ರಹಿತ ಆರೋಪ ಎಂದ. ರಾಜ್ಯ ಸೂಕ್ಷ್ಮ ಪರಿಸ್ಥಿತಿಯಲ್ಲಿರುವಾಗ ಇಂತಹ ಆರೋಪ ಸರಿಯಲ್ಲ. ಇದು ಎಲ್ಲೆಲ್ಲಿಗೂ ಹೋಗುತ್ತದೆ ಎಂದರು.
Comments are closed.