ಕುಂದಾಪುರ: ಒಬ್ಬ ಹರ್ಷನನ್ನು ಹತ್ಯೆಗೈದರೆ ಇಡೀ ಹಿಂದೂ ಸಮಾಜ ದೃತಿಗೆಡುತ್ತದೆ ಎಂಬ ನಂಬಿಕೆ ಜಿಹಾದಿ ಮನಸ್ಥಿತಿಯವರಿಗಿದ್ದರೆ ಅದನ್ನು ಬಿಟ್ಟು ಬಿಡಬೇಕು. ಪ್ರತೀ ಗ್ರಾಮದಲ್ಲೂ ಹರ್ಷ ಹುಟ್ಟಿಕೊಳ್ಳುತ್ತಾರೆ. ಪ್ರತೀ ಗ್ರಾಮದಲ್ಲೂ ಹಿಂದೂ ಕಾರ್ಯಕರ್ತರು ಹುಟ್ಟಿಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ಹಿಂದೂ ಸಮಾಜದ ಚಟುವಟಿಕೆಗಳನ್ನು ದ್ವಿಗುಣಗೊಳಿಸುತ್ತೇವೆ. ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರ ಮೈಮುಟ್ಟಿದರೆ ಇನ್ನು ಮುಂದೆ ಸುಮ್ಮನಿರುವ ಪ್ರಶ್ನೆಯೇ ಇಲ್ಲ ಎಂದು ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಉಪಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ಕುಂದಾಪುರ ಬಿಜೆಪಿ ನೇತೃತ್ವದಲ್ಲಿ ಇಲ್ಲಿನ ಶಾಸ್ತ್ರೀ ಪ್ರತಿಮೆ ಬಳಿ ನಡೆದ ಶಿವಮೊಗ್ಗ ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷ ಕೊಲೆ ಖಂಡಿಸಿ ಗುರುವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಶಿವಮೊಗ್ಗದಲ್ಲಿ ನಡೆದ ಹಿಂದೂ ಸಂಘಟನೆಯ ಕಾರ್ಯಕರ್ತ ಹರ್ಷ ಅವರ ಅಮಾನವೀಯ ಹತ್ಯೆ ಇಡೀ ರಾಜ್ಯದ ಒಟ್ಟು ಸಮಾಜಕ್ಕೆ ದಿಗ್ಬ್ರಮೆಯಾಗಿದೆ. ನಮ್ಮ ದೇಶದ ಸಂವಿಧಾನ ಇಡೀ ಜಗತ್ತಿನಲ್ಲೇ ಅತ್ಯಂತ ದೊಡ್ಡ ಸಂವಿಧಾನವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂತೆಯೇ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅತ್ಯಂತ ವ್ಯಾಪಕವಾದ ಮತ್ತು ವಿಸ್ತಾರವಾದ ಸ್ವಾತಂತ್ರ್ಯವಿರುವ ದೇಶ ನಮ್ಮದು. ಆದರೆ ಶಿವಮೊಗ್ಗದ ಮೊನ್ನೆಯ ಘಟನೆ ಗಮನಿಸಿದಾಗ ನಮ್ಮ ಸಂವಿಧಾನ, ಪ್ರಜಾಪ್ರಭುತ್ವ ಇಂತಹ ಘಟನೆಗೆ ಅವಕಾಶ ಮಾಡಿಕೊಡುತ್ತದೆ ಎನ್ನುವುದು ಖೇದಕರ ಎಂದು ಸುಪ್ರಸಾದ್ ಶೆಟ್ಟಿ ವಿಷಾದ ವ್ಯಕ್ತಪಡಿಸಿದರು.
ಇದು ಪ್ರತಿಭಟನೆಯ ಸಭೆ ಎಂದು ನಾವು ಭಾವಿಸುವುದಿಲ್ಲ. ಇದು ಭಾಜಪ ಅಥವಾ ಹಿಂದೂ ಸಂಘಟನೆಗಳ ಮನಸ್ಸಿಗಾದ ನೋವಲ್ಲ. ಈ ರೀತಿಯ ಘಟನೆ ಎನ್ನುವಂತದ್ದು ಇಡೀ ಸಮಾಜಕ್ಕೆ ದಿಗ್ಬ್ರಮೆಯಾಗಿದೆ. ಸಮಾಜದಲ್ಲಿ ಜಾಗೃತಿ ಮೂಡಿಸುವಂತಹ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಸಷ್ಟಪಡಿಸಿದರು.
ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಿದಲ್ಲಿದ್ದು ಸರ್ಕಾರ ವಿರುದ್ಧ ನಮ್ಮ ಪ್ರತಭಟನೆಯಲ್ಲ. ಬದಲಾಗಿ ಕೊಲೆಯಾದ ಹರ್ಷನ ತ್ಯಾಗಕ್ಕೆ ನ್ಯಾಯ ಸಿಗಬೇಕು. ಹೀಗೆ ಹಿಂದೂ ಮುಂಖಡರ ಕೊಲೆ ನಡೆಯುತ್ತಿದ್ದರೆ ಹಿಂದೂ ಸಮಾಜ ಕೈಕಟ್ಟಿ ಕೂರುವುದಿಲ್ಲ. ಹಿಂದೂ ಸಮಾಜ ಹಾಗೂ ಸಾರ್ವಜನಿಕ ಕೆಲಸ ಮಾಡುವ ಹಿಂದೂ ಯುವ ಮುಖಂಡರನ್ನು ಮತಾಂಧರು ಹುಡುಕಿ ಕೊಲ್ಲುತ್ತಿದ್ದಾರೆ. ಹಿಂದೂ ಸಾಮಾಜ ಮುಖಂಡರ ಕೊಲೆ ನೋಡಿ ಸುಮ್ಮನಿರಲು ಸಾಧ್ಯವಿಲ್ಲ. ಪದೇ ಪದೇ ಕಾಲು ಕೆರೆದು ಜಗಳಕ್ಕೆ ಬಂದರೆ ಕೈಕಟ್ಟಿ ಕೂರುವುದಿಲ್ಲ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಯುವ ಮೋಚಾ ಅಧ್ಯಕ್ಷ ಅವಿನಾಶ ಉಳ್ತೂರು ಮಾತನಾಡಿದರು.
ಕುಂದಾಪುರ ಪುರಸಭೆ ಉಪಾಧ್ಯಕ್ಷ ಸಂದೀಪ ಖಾರ್ವಿ, ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿಜಯ ಎಸ್.ಪೂಜಾರಿ, ಸದಸ್ಯರಾದ ಸಂತೋಷ್ ಕುಮಾರ್ ಶೆಟ್ಟಿ, ಅಶ್ವಿನಿ ಪ್ರದೀಪ್, ಮಹಿಳಾ ಮೋರ್ಚಾದ ಸೌರಭಿ ಪೈ, ಮುಖಂಡರಾದ ಸುನೀಲ್ ಹೇರಿಕುದ್ರು, ಗೋಪಾಲ ಕಳಿಂಜೆ, ಮೀನುಗಾರಿಕಾ ಪ್ರಕೋಷ್ಠ ಅಧ್ಯಕ್ಷ ಸದಾನಂದ ಬಳ್ಕೂರು ಮೊದಲಾದವರು ಇದ್ದರು.
Comments are closed.