ಕರಾವಳಿ

ನೂರು ವರ್ಷಗಳ ಸಂಭ್ರಮದಲ್ಲಿ ಬಿಜೈ ಕಾಪಿಕಾಡು ಶಾಲೆ : ನಾಳೆ ಶತಮಾನೋತ್ಸವ ಸಮಾರಂಭ

Pinterest LinkedIn Tumblr

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಾಪಿಕಾಡು ಬಿಜೈ-ಇದು ಈಗ ಶತಮಾನೋತ್ಸವದ ಸಂಭ್ರಮದಲ್ಲಿದೆ.

1922 ರಲ್ಲಿ ಸ್ಥಾಪಿತವಾದ ಈ ಶಾಲೆ ಬಿಜೈ ಕಾಪಿಕಾಡು ವಲಯದ ಶೈಕ್ಷಣಿಕ ಕೇಂದ್ರವಾಗಿ ಸಾಮಾಜಿಕ ತಂಗುದಾಣವಾಗಿ, ಸಾಂಸ್ಕೃತಿಕ ಕೇಂದ್ರವಾಗಿ ಸಮುದಾಯದ ಎಲ್ಲರನ್ನೂ ಸೇರಿಸಿಕೊಂಡು ಊರನ್ನೇ ಬೆಸೆದು ಊರ ಶಾಲೆ ಎಂದೆನಿಸಿದೆ.

ಸಮಾಜ ಸುಧಾರಕ ಕುದ್ಮುಲ್ ರಂಗರಾಯರಿಂದ ಉದಾರವಾಗಿ ನೀಡಲ್ಪಟ್ಟ ಪ್ರದೇಶದಲ್ಲಿ ಪ್ರಾರಂಭಿಸಲ್ಪಟ್ಟ ಈ ಶಾಲೆ ಮುಂದೆ ಹುಡುಗಿಯರನ್ನೂ ಒಳಗೊಂಡು ಬುನಾದಿ ಶಾಲೆಯಾಗಿ, ಬಳಿಕ ಮುನ್ಸಿಪಲ್ ಶಾಲೆಯಾಗಿ ಈಗ ಸರಕಾರಿ ಶಾಲೆಯಾಗಿ ಸಹಸ್ರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ವಿದ್ಯಾ ದೇಗುಲವಾಗಿದೆ.

1934 ರಲ್ಲಿ ಮಹಾತ್ಮಾಗಾಂಧೀಜಿಯವರು ಈ ಶಾಲೆಗೆ ಭೇಟಿ ಕೊಟ್ಟಿದ್ದರೆಂಬುದು ಈ ಶಾಲೆಯ ಗರಿಮೆಯಾಗಿದೆ.

ಇದೀಗ ಈ ಶಾಲೆಗೆ100ರ ಸಂಭ್ರಮ ಶಾಲಾ ಶಿಕ್ಷಕರು ಪೋಷಕರೊಡನೆ, ಊರದಾನಿಗಳೊಡನೆ ಉತ್ತಮ ಸಂಬಂಧ ಬೆಳೆಸುತ್ತಾ, ಸಮಯ ಪಾಲನೆ, ವೃತ್ತಿ ಪರತೆ, ಕ್ರಿಯಾಶೀಲತೆಗೆ ಒತ್ತುಕೊಡುತ್ತಾ ಬಂದುದರಿಂದ ಇಂಗ್ಲೀಷ್ ಶಾಲೆಗಳ ಆಕ್ರಮಣದ ನಡುವೆಯೂ ಈ ಶಾಲೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಸಮಾಜದ ಅನೇಕ ಸಂಘ ಸಂಸ್ಥೆಗಳು, ಊರ ಹಿರಿಯರು, ಶಾಲಾಭಿವೃದ್ಧಿ ಕಾರ್ಯಕ್ರಮಗಳಲ್ಲಿ ಆಸಕ್ತಿ ವಹಿಸಿದ್ದರಿಂದ ಶಾಲೆ ತನ್ನ ಮೂಲ ಸೌಕರ್ಯಗಳನ್ನು ಹೆಚ್ಚಿಸಿಕೊಂಡು ಜಿಲ್ಲೆಯ ಉತ್ತಮ ಶಾಲೆಗಳಲ್ಲಿ ಒಂದೆನಿಸಿದೆ.

ಆದರೆ ಇದೀಗ ಮಕ್ಕಳ ಸಂಖ್ಯೆ ಇಳಿಯುತ್ತಾ ಬರುತ್ತಿರುವುದು ಆತಂಕ ಸೃಷ್ಟಿಸಿದೆ. ಶಿಕ್ಷಕರಿಲ್ಲದ 18 ಕಂಪ್ಯೂಟರುಗಳಿಗೆ ಸರಿಯಾದ ಶಿಕ್ಷಕಿಯನ್ನು ನೇಮಿಸುವುದು ಸದ್ಯದ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಶಾಶ್ವತ ನಿಧಿಯೊಂದನ್ನು ಸ್ಥಾಪಿಸಬೇಕಾಗಿದೆ. ಈ ಆಶಯದೊಂದಿಗೆ ಶಾಲೆಯ ಹಳೆ ವಿದ್ಯಾರ್ಥಿಗಳೆಲ್ಲ ಒಟ್ಟು ಸೇರಿ ಶತಮಾನೋತ್ಸವ ಸಮಿತಿಯೊಂದನ್ನು ರಚಿಸಿದ್ದಾರೆ.

ನಾಳೆ ಶತಮಾನೋತ್ಸವ ಸಮಾರಂಭ:

ನಾಳೆ ಅಂದರೆ ಫೆಬ್ರವರಿ 28, ಸೋಮವಾರ ಶತಮಾನೋತ್ಸವವನ್ನು ಶಾಲೆಯ ಬಯಲು ರಂಗಮಂಟಪದಲ್ಲಿ ಅದ್ದೂರಿಯಾಗಿ ನಡೆಸಲಾಗುವುದು.

ಪೂರ್ವಾಹ್ನ ೯9.30 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರು ಹಾಗೂ ಪ್ರವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ, ಸ್ಮರಣ ಸಂಚಿಕೆ ಬಿಡುಗಡೆ, ಬಹುಮಾನ ವಿತರಣೆ, ದಾನಿಗಳಿಗೆ ಗೌರವ ಸಮರ್ಪಣೆ ಮೊದಲಾದ ಕಾರ್ಯಕ್ರಮಗಳಿವೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಸನ್ಮಾನ್ಯ ಶ್ರೀ ಡಿ ವೇದವ್ಯಾಸ ಕಾಮತ್ ಈ ಸಮಾರಂಭದ ಅಧ್ಯಕ್ಷತೆ ವಹಿಸುವರು. ದ.ಕ.ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ ಸನ್ಮಾನ್ಯ ಶ್ರೀ ವಿ ಸುನೀಲ್ ಕುಮಾರ್‌ರವರು ಉದ್ಘಾಟನೆ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲೆಯ ಲೋಕ ಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್ ಸದಸ್ಯರುಗಳಾದ ಡಾ| ಮಂಜುನಾಥ ಭಂಡಾರಿ ಹಾಗೂ ಶ್ರೀ ಹರೀಶ್ ಕುಮಾರ್, ಮಂಗಳೂರು ಮಹಾನಗರಪಾಲಿಕೆ ಮೇಯರ್ ಶ್ರೀ ಪ್ರೇಮಾನಂದ ಶೆಟ್ಟಿ, ಮಂಗಳೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಜೆ ಆರ್ ಲೋಬೋ, ಬಿಜೈ ವಾರ್ಡ್‌ನ ಕಾರ್ಪೋರೇಟರ್ ಲ್ಯಾನ್ಸಿಲಾಟ್ ಪಿಂಟೋ, ದೇರೆಬೈಲ್ ವಾರ್ಡಿನ ಕಾರ್ಪೋರೇಟರ್ ಶ್ರೀ ಕೆ ಶಶಿಧರ ಹೆಗ್ಡೆ, ದ.ಕ.ಜಿಲ್ಲಾ ಪಂಚಾಯತ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಕುಮಾರ್ ಭಾ.ಸೇ.ಅ., ದ.ಕ.ಜಿಲ್ಲಾ ಸಾರ್ವಜನಿಕ ಶಿಕ್ಷಣಾಧಿಕಾರಿ ಶ್ರೀ ಸುಧಾಕರ, ಮಂಗಳೂರು ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಸದಾನಂದ ಪೂಂಜ, ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲೆ ಶ್ರೀಮತಿ ರಾಜಲಕ್ಷ್ಮೀ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಶ್ರೀ ಉಸ್ಮಾನ್ ಇವರುಗಳು ಭಾಗವಹಿಸಲಿದ್ದಾರೆ.

ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ :

ಸೋಮವಾರ ಮಧ್ಯಾಹ್ನ ಸೌಹಾರ್ದ ಭೋಜನ ಕೂಟವಿದೆ. ಅಪರಾಹ್ನ 4 ಗಂಟೆಗೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಫ್ರೌಢ ಶಿಕ್ಷಣ ಸಾರ್ವಜನಿಕ ಇಲಾಖೆಯ ನಿವೃತ್ತ ನಿರ್ದೇಶಕರಾದ ಶ್ರೀಮತಿ ಫಿಲೋಮಿನಾ ಲೋಬೊ ಅವರು ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶ್ರೀ ನಾರಾಯಣಗುರು ವಿದ್ಯಾ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಶ್ರೀ ನವೀನ್ ಚಂದ್ರ ಸುವರ್ಣ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ರವಿಶಂಕರ ಮಿಜಾರು, ಉರ್ವಾ ಪೋಲಿಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಶ್ರೀಮತಿ ಭಾರತಿ ಜೆ. ರೊಟೋರಿಯನ್ ಎಸ್.ನಾರಾಯಣರಾವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ರಾಜೇಶ್, ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಶ್ರೀ ಪ್ರೊ. ನರೇಂದ್ರನಾಯಕ್, ಹಾಗೂ ಶ್ರೀಮತಿ ಡಾ| ಆಶಾ ಜ್ಯೋತಿ ರೈ ಮಾಲಾಡಿ ಅವರುಗಳು ಭಾಗವಹಿಸಲಿದ್ದಾರೆ ಶಾಲಾ ಮಕ್ಕಳಿಂದ, ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವಿದೆ.

ಶಾಲಾ ಹಳೆ ವಿದ್ಯಾರ್ಥಿ ಶ್ರೀಯುತ ದೇವದಾಸ್ ಕಾಪಿಕಾಡು ಇವರ ಚಾಪರ್‍ಕ ಕಲಾವಿದರಿಂದ ನಮಸ್ಕಾರ ಮಾಸ್ಟ್ರೇ ತುಳುನಾಟಕ ಪ್ರದರ್ಶನವಾಗಲಿದೆ. ಶಾಲೆಯ ಎಲ್ಲಾ ಹಳೆ ವಿದ್ಯಾರ್ಥಿಗಳೂ ತಮ್ಮನ್ನು ತಿದ್ದಿ ತೀಡಿ ಮಾನವರನ್ನಾಗಿಸಿದ ಈ ಶಾಲೆಯ ಋಣ ತೀರಿಸುವ ಇದೊಂದು ಅವಕಾಶವೆಂದು ತಿಳಿದು ಈ ಶತ ಸಂಭ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಶತಮಾನೋತ್ಸ ಸಮಿತಿಯ ಅಧ್ಯಕ್ಷರಾದ ಶಶಿಲೇಖಾ ಬಿ ಮನವಿ ಮಾಡಿದ್ದಾರೆ.

ವರದಿ / ಚಿತ್ರ : ಸತೀಶ್ ಕಾಪಿಕಾಡ್

Comments are closed.