ಕರಾವಳಿ

ವಿದ್ಯುತ್‌ ತಗುಲಿ ಮೃತಪಟ್ಟ ಯುವಕನ ಕುಟುಂಬಕ್ಕೆ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ 1 ಲಕ್ಷ ಆರ್ಥಿಕ ಸಹಾಯ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಕಳೆದ ವಾರ ಕುಂದಾಪುರ ತಾಲೂಕಿನ ಸೌಕೂರು ಎಂಬಲ್ಲಿ ರಥೋತ್ಸವಕ್ಕಾಗಿ ಬ್ಯಾನರ್‌ ಅಳವಡಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಫ್ಲೆಕ್ಸ್‌ ವಿದ್ಯುತ್‌ ತಂತಿಗೆ ತಗುಲಿ ಸೌಕೂರು ನಿವಾಸಿ ಪ್ರಶಾಂತ್ ದೇವಾಡಿಗ ಮೃತಪಟ್ಟಿದ್ದು ಯುವಕನ ಕುಟುಂಬಕ್ಕೆ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ವೈಯಕ್ತಿಕವಾಗಿ 1 ಲಕ್ಷ ರೂ. ಆರ್ಥಿಕ ಸಹಾಯ ನೀಡಿದರು.

ಗುರುವಾರ ಬೆಳಿಗ್ಗೆ ಮೃತ ಯುವಕನ ಮನೆಗೆ ತೆರಳಿದ ಬಿ.ಎಂ ಸುಕುಮಾರ ಶೆಟ್ಟಿ ಪೋಷಕರಿಗೆ ಸಾಂತ್ವಾನ ಹೇಳಿದರು. ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ವಿದ್ಯುತ್ ಶಾಕ್ ನಿಂದ ಮೃತಪಟ್ಟ ಯುವಕ ಬಡತನದ ಕುಟುಂಬದಿಂದ ಬಂದಿದ್ದು ಮನೆಯ ಜವಬ್ದಾರಿ ಹೊತ್ತಿದ್ದರು. ಆತನನ್ನು ಕಳೆದುಕೊಂಡ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ. ಮೃತ ಪ್ರಶಾಂತ್ ದೇವಾಡಿಗ ಬಿ.ಬಿ. ಹೆಗ್ಡೆ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು ಉತ್ತಮ ಗುಣನಡತೆ ಹೊಂದಿದ್ದ. ವೈಯಕ್ತಿಕವಾಗಿ ಆತನ ಕುಟುಂಬಕ್ಕೆ 1 ಲಕ್ಷ ನೆರವು ನೀಡಿದ್ದು ಕಾಲೇಜಿನಿಂದಲೂ ನೆರವು ನೀಡುವ ಬಗ್ಗೆ ಪ್ರಾಂಶುಪಾಲರು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು. ಇದೇ ವೇಳೆ ಗಾಯಾಳು ಕುಟುಂಬಸ್ಥರನ್ನು ಭೇಟಿಯಾಗಿ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸಬ್ಲಾಡಿ‌ ಮಂಜಯ್ಯ ಶೆಟ್ಟಿಯವರು ವೈಯಕ್ತಿಕವಾಗಿ 15 ಸಾವಿರ ಹಣವನ್ನು ಮೃತರ ಕುಟುಂಬಕ್ಕೆ ನೀಡಿದರು.

ವ್ಯವಸ್ಥಾಪನ ಸಮಿತಿ ಸದಸ್ಯರಾದ ಶೇಖರ ಪೂಜಾರಿ ಗುಲ್ವಾಡಿ, ಸುಬ್ಬಣ್ಣ ಶೆಟ್ಟಿ ಕೆಂಚನೂರು, ಕುಪ್ಪ ಸೌಕೂರು, ಜಯರಾಮ ಶೆಟ್ಟಿ ಹಡಾಳಿ, ಆಶಾ ಸಂತೋಷ್ ಪೂಜಾರಿ, ರೀತಾ ದೇವಾಡಿಗ ಸೌಕೂರು, ರಂಜಿತ್ ಪೂಜಾರಿ ಕರ್ಕಿ, ಬಿಜೆಪಿ ಗುಲ್ವಾಡಿ ಶಕ್ತಿ ಕೇಂದ್ರದ ಅಧ್ಯಕ್ಷ ಸುರೇಂದ್ರ ಶೆಟ್ಟಿ ಗುಲ್ವಾಡಿ, ದೇವಾಡಿಗರ ಸಮಾಜ ಸೇವಾ ಸಂಘ ಕುಂದಾಪುರದ ಅಧ್ಯಕ್ಷ ನಾಗರಾಜ ರಾಯಪ್ಪನಮಠ, ಕಾರ್ಯದರ್ಶಿ ಉದಯ ದೇವಾಡಿಗ, ಸ್ಥಳೀಯರಾದ ಗೋಪಾಲ ದೇವಾಡಿಗ, ಪ್ರಮುಖರಾದ ಸಂಜೀವ ದೇವಾಡಿಗ ತಲ್ಲೂರು, ರಾಜೀವ ಶೆಟ್ಟಿ ಹಟ್ಟಿಯಂಗಡಿ, ನಾರಾಯಣ ನಾಯ್ಕ ನೇರಳಕಟ್ಟೆ ಮೊದಲಾದವರಿದ್ದರು.

ಘಟನೆ ಹಿನ್ನೆಲೆ:
ಕಳೆದ ಶನಿವಾರ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆ ಹಿನ್ನೆಲೆ ಬ್ಯಾ‌ನರ್ ಅಳವಡಿಸಲು ಹೋದಾಗ ಟ್ರಾನ್ಸ್‌ಫಾರ್ಮರ್‌ ತಂತಿ ಹಾದು ಹೋಗಿದ್ದು ಇದರ ಅರವಿಗೆ ಬಾರದೇ ಫ್ಲೆಕ್ಸ್‌ ಮೇಲಕ್ಕೆತ್ತಿ ಕಟ್ಟುತ್ತಿದ್ದ ಸಂದರ್ಭದಲ್ಲಿ ವಿದ್ಯುತ್‌ ತಂತಿ ತಗುಲಿ ಸೌಕೂರು ನಿವಾಸಿ ಮೋಹನ ದೇವಾಡಿಗ ಅವರ ಪುತ್ರ ಪ್ರಶಾಂತ ದೇವಾಡಿಗ (24) ಮೃತಪಟ್ಟಿದ್ದರು. ಘಟನೆಯಲ್ಲಿ ಶ್ರೀಧರ ದೇವಾಡಿಗ(45) ಗಂಭೀರ ಗಾಯಗೊಂಡು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

 

Comments are closed.