(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಹಕ್ಲಾಡಿ ಗ್ರಾಮ ಬ್ರಹ್ಮೇರಿ ಮೂಲನಿವಾಸಿ ಮನೆಗಳ ಪ್ರವೇಶಕ್ಕೆ ಕೆಲ ದಿನಗಳಷ್ಟೇ ಬಾಕಿಯಿದೆ. ಕಳೆದ ಐದು ವರ್ಷದಿಂದ ಅರ್ಧಕ್ಕೆ ಮನೆ ಕಟ್ಟಡ ನಿಂತು ಹರಕುಮುರಕು ಮನೆಯಲ್ಲಿ ಮೂಲನಿವಾಸಿಗಳು ಭಯದಲ್ಲಿ ವಾಸ ಮಾಡುತ್ತಿದ್ದರು.
ಕಾಲನಿಯಲ್ಲಿ ಮನೆ ನಿರ್ಮಾಣಕ್ಕೆ ತಳಪಾಯ ಹಾಕಿ ಸ್ವಲ್ಪ ಎತ್ತರದ ತನಕ ಗೋಡೆ ಕಟ್ಟಿ ನಂತರ ಮನೆ ನಿರ್ಮಾಣ ಕೆಲಸ ನಿಲ್ಲಿಸಲಾಗುತ್ತು. ಮನೆ ಕೆಲಸ ಇಂದು ಶುರುವಾಗುತ್ತೆ ನಾಳೆ ಶುರುವಾಗುತ್ತದೆ ಎಂದು ಕಾದು ಕುಳಿತ ಕೊರಗ ಸಮುದಾಯದ ಮಂದಿಗೆ ಸಿಕಿದ್ದು ನಿರಾಸೆ.
ಮಹಾತ್ಮ ಜ್ಯೋತಿ ಬಾಪುಲೆ ಯುವ ಕಲಾ ವೇದಿಕೆ ಗೌರವಾಧ್ಯಕ್ಷ ಲಕ್ಷ್ಮಣ್ ಹಾಗೂ ದಲಿತ ಮುಖಂಡರು ಮನೆ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಮಾಧ್ಯಮಗಳ ಗಮನಕ್ಕೆ ತಂದಿದ್ದರು. ಮಾಧ್ಯಮಗಳಲ್ಲಿ ವರದಿ ಬಿತ್ತರವಾದ ಬೆನ್ನಲ್ಲೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಐಟಿಡಿಪಿ ಅಧಿಕಾರಿಗಳಾದ ದೂದ್ ಪಿರ್, ವಿಶ್ವನಾಥ್ ಶೆಟ್ಟಿ ಮೊದಲಾದವರ ಮುತುವರ್ಜಿಯಲ್ಲಿ ಈ ಕಾರ್ಯ ನಡೆದಿದೆ.
(ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮನೆ ನಿರ್ಮಾಣ ಕಾರ್ಯ- ಕಡತ ಚಿತ್ರ)
ಒಂದು ಹಾಲ್, ಕಿಚನ್ ಹಾಗೂ ಬೆಡ್ ರೂಮ್ ಇದ್ದು, 3.40 ಲಕ್ಷ ಐಟಿಡಿಪಿ ಅನುದಾನದಲ್ಲಿ ಮನೆ ನಿರ್ಮಾಣವಾಗಿದೆ. ನೆಲಕ್ಕೆ ವಿಟ್ಟರ್ಪ್ಯಾಡ್ ಹಾಕಿದ್ದು, ಮಾಡಿಗೆ ರೀಪು ಪಕಾಸಿ ಬದಲು ಕಬ್ಬಿಣದ ಯ್ಯಾಂಗ್ಲರ್ ಪಟ್ಟಿಹಾಕಿ ಹೆಂಚು ಹೊದೆಸಿದ್ದು, ಕಡುಮಾಡಿಗೆ ಸೀಟ್ ಅಳವಡಿಸಲಾಗಿದೆ. ಮನೆಗೆ ರೋಟರಿ ಹಾಗೂ ಹಕ್ಲಾಡಿ ಲಯನ್ಸ್ ಕ್ಲಬ್ ಕಡುಮಾಡು ನಿರ್ಮಿಸಿ ಕೊಡುವ ಭರವಸೆ ನೀಡಿದ್ದು, ಕಡುಮಾಡಿಗೆ ತಳಪಾಯ ಕೂಡಾ ಸಿದ್ದವಾಗಿದೆ.
ಬ್ರಹ್ಮೇರಿ ಕೊರಗ ಕಾಲನಿಯಲ್ಲಿ ಇರೋದು ಎರಡು ಮನೆ. ಕಳೆದ 70 ವರ್ಷದಿಂದ ವಾಸಮಾಡಿಕೊಂಡು ಬಂದಿದ್ದಾರೆ. ಮಕ್ಕಳು ಮರಿಗಳು ಸೇರಿ 20 ಜನ ವಾಸವಿದ್ದು, ಅಷ್ಟೂ ಜನ ಒಂದೇ ಮನೆಯಲ್ಲಿ ಇದ್ದರು. ಕಳೆದ ಎರಡು ವರ್ಷದ ಹಿಂದೆ ಮತ್ತೊಂದು ಮನೆಯೆದ್ದಿದ್ದು, ಐಟಿಡಿಪಿ ಅವರಿಗೂ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದೆ.
ಬ್ರಹ್ಮೇರಿ ಕೊರಗ ಕಾಲನಿ ಮನೆಗೆ ಸುಣ್ಣಬಣ್ಣವಾಗಿದ್ದು, ನೆಲ ಹಾಸಿನ ಕೆಲಸ ಕೂಡಾ ಸಂಪೂರ್ಣವಾಗಿದೆ. ಕಾಲನಿಯ ಮತ್ತೊಂದು ಮನೆಗೆ ಬೇಡಿಕೆಯಿದ್ದು, ಅದಷ್ಟು ಬೇಗೆ ಸ್ಪಂದಿಸುವ ಜೊತೆ ಹಕ್ಕುಪತ್ರದ ಬಗ್ಗೆ ಕೂಡಾ ಕಂದಾಯ ಇಲಾಖೆ ಗಮನಕ್ಕೆ ತರಲಾಗುತ್ತದೆ.
– ವಿಶ್ವನಾಥ ಶೆಟ್ಟಿ, ತನಿಖೆ ಸಹಾಯಕ, ಐಟಿಡಿಪಿ ಉಡುಪಿ.
Comments are closed.