ಮಂಗಳೂರು: ಪಿಲಾರು ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಚಿಕ್ಕಮ್ಮನ ಮನೆಗೆ ಬಂದಿದ್ದ ಯುವಕನೋರ್ವ ಮನೆಯ ಕೋಣೆಯೊಳಗೆ ನೇಣು ಬಿಗಿದು ಆತ್ಮ ಹತ್ಯೆಗೈದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಪ್ರಕಾಶ್ ನಗರ ಎಂಬಲ್ಲಿ ನಡೆದಿದೆ.
ಮಂಗಳೂರು ಪಡೀಲು ನಿವಾಸಿ ಸೌರವ್ (21) ಆತ್ಮ ಹತ್ಯೆಗೈದ ಯುವಕ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮೇಶ್ವರ ಗ್ರಾಮದ ಪಿಲಾರಿನಲ್ಲಿ ಪಂಜಂದಾಯ ದೈವದ ದೊಂಪದ ಬಲಿ ಉತ್ಸವ ನಡೆಯುತ್ತಿದ್ದು ಪಿಲಾರು ಪ್ರಕಾಶ್ ನಗರದ ಸುಜಾತಾ ಎಂಬವರ ಮನೆಗೆ ಪಡೀಲಿನಲ್ಲಿರುವ ಅವರ ಅಕ್ಕ, ಹಾಗೂ ಅವರ ಪುತ್ರ ಸೌರವ್ ಕುಟುಂಬ ಸಮೇತರಾಗಿ ಬಂದಿದ್ದರು.
ಜಾತ್ರೆಗೆ ತೆರಳಿ ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿದ್ದ ಸೌರವ್ ನಿದ್ದೆ ಬರುತ್ತದೆ ಎಂದು ಹೇಳಿ ಕೋಣೆಗೆ ತೆರಳಿದ್ದಾನೆನ್ನಲಾಗಿದೆ. ಸಂಜೆಯ ವೇಳೆ ತಾಯಿ ಮಗನನ್ನ ಎಬ್ಬಿಸಲು ಹೋದಾಗ ಸೌರವ್ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ವಿಚಾರ ಬೆಳಕಿಗೆ ಬಂದಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಮೃತರು ತಂದೆ ತಾಯಿ ಸಹೋದರ ಸಹೋದರಿಯರನ್ನು ಅಗಲಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.