ಕರ್ನಾಟಕ

ಬಿಜೆಪಿಯ ಕೋಮುವಾದದ ರಾಜಕಾರಣ ಉತ್ತರಪ್ರದೇಶದಲ್ಲಿ ಯಶಸ್ವಿಯಾಗಿದೆ: ಸಿದ್ದರಾಮಯ್ಯ

Pinterest LinkedIn Tumblr

ಬೆಂಗಳೂರು: ಚುನಾವಣೆಗಳ ಫಲಿತಾಂಶ ಎನ್ನುವುದು ಜನತೆಯ ಅಭಿಪ್ರಾಯವನ್ನು ಅರಿತುಕೊಳ್ಳಲು ಇರುವ ಅವಕಾಶ. ಅದನ್ನು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟವರೆಲ್ಲರೂ ಗೌರವಿಸಬೇಕು. ನಾನು ಗೆದ್ದ ಅಭ್ಯರ್ಥಿಗಳನ್ನು ಅಭಿನಂದಿಸುತ್ತೇನೆ.
ನಮ್ಮ ಪಕ್ಷಕ್ಕೆ ಹಿನ್ನಡೆಯಾಗಿದೆ, ಈ ಹಿನ್ನಡೆಯ ಬಗ್ಗೆ ನಮ್ಮ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬಿಜೆಪಿಯ ಕೋಮುವಾದದ ರಾಜಕಾರಣ ಉತ್ತರಪ್ರದೇಶದಲ್ಲಿ ಯಶಸ್ವಿಯಾಗಿದೆ ಎನ್ನುವುದು ಈ ಫಲಿತಾಂಶದಲ್ಲಿ ಸ್ಪಷ್ಟವಾಗುತ್ತಿದೆ. ಇದು ಬಹಳ ಕಳವಳಕಾರಿ ಬೆಳವಣಿಗೆ. ಪ್ರಜಾಪ್ರಭುತ್ವದಲ್ಲಿ ಕೆಲಸ ಮಾಡಿದವರಿಗೆ ಕೂಲಿ ಕೊಡಬೇಕು. ಆದರೆ ಉತ್ತರ ಪ್ರದೇಶದಲ್ಲಿ ಕೆಲಸ ಮಾಡದವರಿಗೆ ಕೂಲಿ ಕೊಟ್ಟಿದ್ದಾರೆ.

ಉತ್ತರಪ್ರದೇಶ ಇಡೀ ದೇಶದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ರಾಜ್ಯ. ಕೊರೊನಾ ಕಾಲದಲ್ಲಿ ಗಂಗಾನದಿಯಲ್ಲಿ ಶವಗಳು ತೇಲಿಹೋಗಿರುವುದನ್ನು ಇಡೀ ದೇಶ ನೋಡಿದೆ.

ಉತ್ತರಪ್ರದೇಶದಿಂದ ಉದ್ಯೋಗ ಅರಸಿಕೊಂಡು ದೊಡ್ಡ ಸಂಖ್ಯೆಯಲ್ಲಿ ನಿರುದ್ಯೋಗಿಗಳು ಬೇರೆ ರಾಜ್ಯಗಳಿಗೆ ಹೋಗುತ್ತಿರುತ್ತಾರೆ. ಕೊರೊನಾ ಕಾಲದಲ್ಲಿ ಇವರೆಲ್ಲ ಉದ್ಯೋಗ ಕಳೆದುಕೊಂಡು ಮರಳಿ ಆ ರಾಜ್ಯಕ್ಕೆ ಹೋದರು. ಇಡೀ ದೇಶದಲ್ಲಿ ಅತ್ಯಂತ ದೊಡ್ಡ ಪ್ರಮಾಣದ ನಿರುದ್ಯೋಗ ರಾಜ್ಯದಲ್ಲಿದೆ.

ಹೀಗಿದ್ದರೂ ಅಲ್ಲಿನ ಜನ ಬಿಜೆಪಿ ಗೆಲ್ಲಿಸಲು ಮುಖ್ಯ ಕಾರಣ ಅಲ್ಲಿ ಬಿಜೆಪಿ ಮಾಡುತ್ತಾ ಬಂದ ಕೋಮು ಆಧಾರದ ಧ್ರುವೀಕರಣ.

ಯೋಗಿ ಆದಿತ್ಯನಾಥ್ ತನ್ನ ಪ್ರಚಾರದಲ್ಲಿ ಈ ಚುನಾವಣೆ ಎನ್ನುವುದು 80 ವರ್ಸಸ್ 20 ರ ನಡುವಿನ ಚುನಾವಣೆ ಎಂದು ಹೇಳುವ ಮೂಲಕ ಇದು ಹಿಂದು- ಮುಸ್ಲಿಮರ ನಡುವಿನ ಚುನಾವಣೆ ಎಂಬ ಅಭಿಪ್ರಾಯವನ್ನು ಮೂಡಿಸಿದ್ದರು.

ಜನರ ತಲೆಗೆ ಒಮ್ಮೆ ಕೋಮು ವಿಷ ತುಂಬಿದರೆ ಅವರಿಗೆ ನಿರುದ್ಯೋಗ, ಹಸಿವು, ಅನಾರೋಗ್ಯ, ಅಭಿವೃದ್ದಿಯ ಕೊರತೆಗಳು, ಈಡೇರದ ಭರವಸೆಗಳು ಎಲ್ಲವೂ ಮರೆತು ಹೋಗುತ್ತದೆ. ಉತ್ತರಪ್ರದೇಶದಲ್ಲಿ ಈ ಬೆಳವಣಿಗೆ ಅತ್ಯಂತ ಕಳವಳಕಾರಿಯಾದುದು ಮಾತ್ರವಲ್ಲ ಪ್ರಜಾಪ್ರಭುತ್ವಕ್ಕೆ ಬಹಳ ಅಪಾಯಕಾರಿಯಾದುದು.

ನಮ್ಮ ಸರ್ಕಾರದ ಅನ್ನಭಾಗ್ಯ ಯೋಜನೆಯನ್ನು ಕನ್ನಭಾಗ್ಯ ಎಂದು ಗೇಲಿಮಾಡಿದವರು, ಇದರಿಂದ ರಾಜ್ಯದ ಬೊಕ್ಕಸ ಬರಿದಾಗುತ್ತಿದೆ ಎಂದು ಟೀಕಿಸಿದ ಬಿಜೆಪಿ ನಾಯಕರು‌ ಉತ್ತರಪ್ರದೇಶದ ಮುಖ್ಯಮಂತ್ರಿಗಳು ಕಳೆದ ಒಂದು ವರ್ಷದಿಂದ ನೀಡುತ್ತಿರುವ ಉಚಿತ ಪಡಿತರವನ್ನು ಹಾಡಿ ಹೊಗಳುತ್ತಿದ್ದಾರೆ. ಇದು ಬಿಜೆಪಿಯ ಹಿಪಾಕ್ರಸಿ.

ಕಾಂಗ್ರೆಸ್ ಸಂವಿಧಾನದ ಆಶಯಗಳನ್ನು ಸಿದ್ಧಾಂತವಾಗಿ ನಂಬಿರುವ ಪಕ್ಷ. ಈ ಸಿದ್ಧಾಂತದ ಆಧಾರದಲ್ಲಿಯೇ ಪಕ್ಷವನ್ನು‌ ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Comments are closed.