ಉಡುಪಿ: ಸಮಾಜದಲ್ಲಿನ ಅಹಿತಕರ ವಾತಾವರಣ ದೂರ ಮಾಡಿ, ಶಾಂತಿ, ಸೌಹಾರ್ದತೆ ಬೆಳೆಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಸೌಹಾರ್ದ ಸಮಿತಿ ನೇತೃತ್ವದಲ್ಲಿ ವಿವಿಧ ಧರ್ಮದ ಮುಖಂಡರು ಬುಧವಾರ ಪೇಜಾವರ ಸ್ವಾಮೀಜಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಮಠದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಉಡುಪಿ ಜಿಲ್ಲೆ ಶಾಂತಿ ಮತ್ತು ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ಇತ್ತೀಚೆಗೆ ಈ ಮೌಲ್ಯಗಳಿಗೆ ವಿರುದ್ಧವಾದ ಘಟನೆಗಳು ನಡೆಯುತ್ತಿವೆ. ಅನೋನ್ಯತೆಯಿಂದ ಇದ್ದ ವ್ಯಾಪಾರಿ ಸಮುದಾಯದವರ ನಡುವೆ ಗೊಂದಲ ಏರ್ಪಡಿಸುವ ಕಾರ್ಯ ನಡೆಯುತ್ತಿದೆ. ಇಲ್ಲಿನ ಸರ್ವ ಸಮುದಾಯದ ಬಾಂಧವರು ಇದಕ್ಕೆ ಶಾಂತಿಯುತ ಪರಿಹಾರ ಬಯಸುತ್ತಿದ್ದಾರೆ ಎಂದು ಮನವಿ ಯಲ್ಲಿ ತಿಳಿಸಲಾಗಿದೆ.ಈ ಸಂಬಂಧ ತಮ್ಮ ನೇತೃತ್ವದಲ್ಲಿ ಶಾಂತಿ ಸಮಿತಿಯನ್ನು ರಚಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಮಾಜಕ್ಕೆ ಸೌಹಾರ್ದ ಸಂದೇಶ ನೀಡಬೇಕು. ಅದಕ್ಕೆ ಎಲ್ಲ ಧರ್ಮಿಯರು ಸ್ಪಂದಿಸುವಂತಾಗಬೇಕು ಎಂದು ನಿಯೋಗದವರು ಸ್ವಾಮೀಜಿ ಅವರಲ್ಲಿ ಮನವಿ ಮಾಡಿದರು.
ಈ ಬಗ್ಗೆ ಮಾತನಾಡಿದ ಸ್ವಾಮೀಜಿ, ಸಮಾಜದಲ್ಲಿ ಶಾಂತಿ ಸೌಹಾರ್ದ ನೆಮ್ಮದಿ ಬೇಕೆ ಬೇಕು. ಅದು ಕೇವಲ ಒಬ್ಬರ ಪ್ರಯತ್ನದಿಂದ ಮಾತ್ರ ಆಗುವುದಿಲ್ಲ. ಅದಕ್ಕೆ ಎಲ್ಲರ ಪ್ರಯತ್ನ ಹಾಗೂ ಸಹಕಾರ ಅತೀ ಅಗತ್ಯವಾಗಿದೆ. ಸಮಾಜ ಇಂದು ತುಂಬಾ ನೋವು ಸಂಕಷ್ಟ ಅನುಭವಿಸಿದೆ. ಅದು ಸ್ಪೋಟವಾಗಿ ಇಂದು ಈ ರೀತಿಯಲ್ಲಿ ಆಗುತ್ತಿದೆ ಎಂದರು.ನಾವು ಕೇವಲ ಧಾರ್ಮಿಕ ಮುಖಂಡರು ಸೇರಿ ಮಾತುಕತೆ ನಡೆಸಿದರೂ ಕೂಡ ತಳಮಟ್ಟದಲ್ಲಿ ಕಾರ್ಯಗರ್ತ ಆಗಲು ಸಾಧ್ಯವಿಲ್ಲ. ಆದುದರಿಂದ ಅವರ ನೋವನ್ನು ನಾವು ಚರ್ಚಿಸಿ ತೀರ್ಮಾನ ಮಾಡಲು ಆಗುವುದಿಲ್ಲ. ಆದುದರಿಂದ ಆ ನೋವು ಅರ್ಥ ಮಾಡಿಕೊಂಡು ಪರಿಹಾರ ಮಾಡಬೇಕಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಉಡುಪಿ ಶೋಕಾ ಮಾತಾ ಇಗರ್ಜಿಯ ಧರ್ಮಗುರು ಫಾ.ಚಾರ್ಲ್ಸ್, ಸಾಮಾಜಿಕ ಕಾರ್ಯಕರ್ತ ಹಾಜಿ ಅಬ್ದುಲ್ಲಾ ನಾವುಂದ, ಬಳಕೆದಾರರ ವೇದಿಕೆಯ ಗೌರವಾಧ್ಯಕ್ಷ ಹಾಜಿ ಅಬೂಬಕ್ಕರ್, ಗಂಗಾಧರ್ ರಾವ್, ಮುಹಮ್ಮದ್ ವೌಲಾ, ಅಬೂಬಕ್ಕರ್ ನೇಜಾರು, ಬೀದಿಬದಿ ವ್ಯಾಪಾರ ಮತ್ತು ಜಾತ್ರೆ ವ್ಯಾಪರಸ್ಥರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರೀಫ್, ನಿಸಾರ್ ಅಹಮದ್ ಮೊದಲಾದವರು.
Comments are closed.