ಮಂಗಳೂರು: ಬೆಳ್ತಂಗಡಿಯಲ್ಲಿ ತಂದೆಯನ್ನು ಕೊಲೆ ಮಾಡಿದ ಪ್ರಕರಣದ ವಿಚಾರಣೆ ಮಂಗಳೂರಿನ 4ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದಿದ್ದು, ಪುತ್ರನ ಮೇಲಿನ ಆರೋಪ ಸಾಬೀತಾಗಿದೆ.
2021ರ ಜ. 18ರಂದು ಬೆಳ್ತಂಗಡಿ ತಾಲೂಕು ಗರ್ಡಾಡಿ ಗ್ರಾಮದ ನಡು ಮುಡ್ಯೊಟ್ಟು ನಿವಾಸಿ ಶ್ರೀಧರ ಪೂಜಾರಿ (56) ಅವರನ್ನು ಪುತ್ರ ಹರೀಶ್ ಪೂಜಾರಿ (28) ಕೊಲೆ ಮಾಡಿದ್ದು, ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ಹರೀಶ್ ಪೂಜಾರಿ ಅನ್ಯ ಜಾತಿಯ ಹುಡುಗಿಯನ್ನು ಪ್ರೀತಿಸಿದ್ದು, ಅವರ ಮದುವೆಗೆ ಮನೆಯವರಿಂದ ವಿರೋಧವಿತ್ತು. ಪುತ್ರಿಯ ಮದುವೆ ಆಗದೆ ನಿನ್ನ ಮದುವೆ ಮಾಡುವುದಿಲ್ಲ ಎಂದು ತಂದೆ ಶ್ರೀಧರ ಪೂಜಾರಿ ತಿಳಿಸಿದ್ದರು. ಇದರಿಂದ ಮನೆಮಂದಿಯ ಜತೆ ಮನಸ್ತಾಪ ಹೊಂದಿದ್ದ ಹರೀಶ್ 2021ರ ಜನವರಿಯಲ್ಲಿ ತನ್ನ ಪ್ರೇಯಸಿ ಜತೆಗೆ ಮನೆ ಬಿಟ್ಟು ಹೋಗಿದ್ದ. ಆದರೆ 3 ವಾರಗಳ ಬಳಿಕ ವಾಪಸ್ ಬಂದಾಗ ಪುತ್ರನಿಗೆ ಆತನ ಪ್ರೇಯಸಿಯ ಜತೆ ಮನೆಗೆ ಸೇರಿಸಲು ತಂದೆ ಆಕ್ಷೇಪಿಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಬ್ಬರ ಮಧ್ಯೆ ಗಲಾಟೆ ನಡೆದಿದ್ದುಆತ ಕೊಲೆಮಾಡಿದ್ದ.
ಕೊಲೆ ಪ್ರಕರಣದ ವಿಚಾರಣೆಯನ್ನು ಮಂಗಳೂರಿನ 4ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಆರ್. ಪಲ್ಲವಿ ಅವರು ಪೂರ್ಣಗೊಳಿಸಿದ್ದು, ಆರೋಪಿ ಹರೀಶ್ ಪೂಜಾರಿ ದೋಷಿ ಎಂದು ತೀರ್ಪು ನೀಡಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ಇನ್ನಷ್ಟೇ ಪ್ರಕಟಿಸಬೇಕಾಗಿದೆ.
ಸರಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಹರಿಶ್ಚಂದ್ರ ಉದ್ಯಾವರ ಅವರು ವಾದಿಸಿದ್ದರು. ಪ್ರಕರಣದಲ್ಲಿ ಒಟ್ಟು 11 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು. 29 ದಾಖಲೆಗಳನ್ನು ಪರಿಶೀಲಿಸಲಾಗಿತ್ತು.
Comments are closed.