ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ 2021ರಲ್ಲಿ ತಂದೆಯನ್ನು ಹತ್ಯೆಗೈದ ಪ್ರಕರಣದ ವಿಚಾರಣೆ ಮಂಗಳೂರಿನ 4ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದಿದ್ದು, ಪುತ್ರನ ಮೇಲಿನ ಆರೋಪ ಸಾಬೀತಾಗಿತ್ತು. ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ಕೋರ್ಟ್ ಆದೇಶಿಸಿದೆ.
2021ರ ಜ. 18ರಂದು ಬೆಳ್ತಂಗಡಿ ತಾಲೂಕು ಗರ್ಡಾಡಿ ಗ್ರಾಮದ ನಡು ಮುಡ್ಯೊಟ್ಟು ನಿವಾಸಿ ಶ್ರೀಧರ ಪೂಜಾರಿ (56) ಅವರನ್ನು ಪುತ್ರ ಹರೀಶ್ ಪೂಜಾರಿ (28) ಕೊಲೆ ಮಾಡಿದ್ದು, ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿವರ…
ಆರೋಪಿ ಹರೀಶ್ ಪೂಜಾರಿ ಅನ್ಯ ಜಾತಿಯ ಹುಡುಗಿಯನ್ನು ಪ್ರೀತಿಸಿದ್ದು, ಆದರೆ ಈ ಮದುವೆಗೆ ಮನೆಯವರ ವಿರೋಧವಿತ್ತು. ಅಲ್ಲದೆ “ಪುತ್ರಿಯ (ಹರೀಶನ ಸಹೋದರಿ) ಮದುವೆ ಆಗದೆ ನಿನ್ನ ಮದುವೆ ಮಾಡುವುದಿಲ್ಲ” ಎಂದು ತಂದೆ ಶ್ರೀಧರ ಪೂಜಾರಿ ಮಗನಿಗೆ ಎಚ್ಚರಿಕೆ ನೀಡಿದ್ದರು. ಇದರಿಂದ ಮನೆಮಂದಿಯ ಜತೆ ಮನಸ್ತಾಪ ಹೊಂದಿದ್ದ ಹರೀಶ್ 2021ರ ಜನವರಿಯಲ್ಲಿ ತನ್ನ ಪ್ರೇಯಸಿ ಜತೆಗೆ ಮನೆ ಬಿಟ್ಟು ಹೋಗಿದ್ದ. ಬಳಿಕ 3 ವಾರಗಳ ನಂತರ ಹಿಂತಿರುಗಿ ಬಂದಾಗ ಪುತ್ರನಿಗೆ ಆತನ ಪ್ರೇಯಸಿಯ ಜತೆ ಮನೆಗೆ ಸೇರಿಸಲು ತಂದೆ ಆಕ್ಷೇಪಿಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಬ್ಬರ ಮಧ್ಯೆ ಗಲಾಟೆ ನಡೆದಿತ್ತು.ಈ ಸಂದರ್ಭ ಹರೀಶ್ ತನ್ನ ತಂದೆ ಶ್ರೀಧರ ಪೂಜಾರಿ ಅವರಿಗೆ ಕೊಲೆ ಬೆದರಿಕೆ ಹಾಕಿ ಹೋಗಿದ್ದ. ಬಳಿಕ ಅದೇ ದಿನ ಸಂಜೆ 6.30ಕ್ಕೆ ತಂದೆ ಸಮೀಪದ ಪೇಟೆಗೆ ಹೋಗಿ ಮನೆಗೆ ಬಂದಾಗ ಪುತ್ರ ಹರೀಶ್ ಮರದ ಪಕ್ಕಾಸಿನಿಂದ ತಂದೆಯ ತಲೆ ಮತ್ತು ಮುಖಕ್ಕೆ ಗಂಭೀರವಾಗಿ ಹೊಡೆದಿದ್ದ. ಇದರಿಂದ ತೀವ್ರ ಗಾಯಗೊಂಡಿದ್ದ ಶ್ರೀಧರ್ ಪೂಜಾರಿ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಸಾವನ್ನಪ್ಪಿದ್ದರು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇನ್‌ಸ್ಪೆಕ್ಟರ್ ಸಂದೇಶ್ ತನಿಖೆ ನಡೆಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದಲ್ಲಿ ಒಟ್ಟು 11 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. 29 ದಾಖಲೆಗಳನ್ನು ಪರಿಶೀಲಿಸಲಾಗಿತ್ತು.
ಕೊಲೆ ಪ್ರಕರಣದ ವಿಚಾರಣೆಯನ್ನು ಮಂಗಳೂರಿನ 4ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಆರ್. ಪಲ್ಲವಿ ಅವರು ಪೂರ್ಣಗೊಳಿಸಿದ್ದು, ಆರೋಪಿ ಹರೀಶ್ ಪೂಜಾರಿ ದೋಷಿ ಎಂದು ತೀರ್ಪು ನೀಡಿ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 10,000 ರೂ ದಂಡ ವಿಧಿಸಿದೆ.
ಸರಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಹರಿಶ್ಚಂದ್ರ ಉದ್ಯಾವರ ಅವರು ವಾದಿಸಿದ್ದರು.
Comments are closed.