ಬೆಂಗಳೂರು: ರಸ್ತೆಯಲ್ಲಿ ತಮ್ಮ ಬೈಕ್‌ಗೆ ಬೈಕ್ ಟಚ್ ಮಾಡಿದ ಎಂಬ ಕಾರಣಕ್ಕೆ ಕೋಪಗೊಂಡು ಯುವಕನೊಬ್ಬನನ್ನು ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಭಕ್ಷಿಗಾರ್ಡನ್ ಸಮೀಪದ ಜೈ ಮಾರುತಿ ನಗರದ ನಿವಾಸಿ ಚಂದ್ರು (22) ಕೊಲೆಯಾದ ದುರ್ದೈವಿ.
(ಕೊಲೆಯಾದ ಚಂದ್ರು)
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಡ್ಡದಹಳ್ಳಿಯ ಶಾಹೀದ್ ಪಾಷ, ಹೊಸಕೋಟೆಯ ಶಾಹೀದ್ ಅಲಿಯಾಸ್ ಗೂಳಿ ಹಾಗೂ 17 ವರ್ಷದ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಹಳೇ ಗುಡ್ಡದಹಳ್ಳಿ ಸಮೀಪ ಸೋಮವಾರ ತಡರಾತ್ರಿ ಚಿಕನ್ ರೋಲ್ ತಿನ್ನಲು ಸ್ನೇಹಿತ ಸೈಮನ್ ರಾಜ್ ಜೊತೆ ಚಂದ್ರು ಹೋಗಿದ್ದಾಗ ಈ ಕೃತ್ಯ ನಡೆದಿದೆ. ಘಟನೆ ಬಳಿಕ ತಪ್ಪಿಸಿಕೊಂಡಿದ್ದ ಆರೋಪಿಗಳನ್ನು ಸಿಸಿಟಿವಿ ಕ್ಯಾಮೆರಾ ಮಾಹಿತಿ ಆಧರಿಸಿ ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ.
ರೈಲ್ವೆ ಗೂಡ್ಸ್ ಶೆಡ್‌ನಲ್ಲಿ ಹೊರಗುತ್ತಿಗೆ ಆಧಾರದಡಿ ಕೆಲಸ ಮಾಡುತ್ತಿದ್ದ ಮೃತ ಚಂದ್ರು, ತನ್ನ ಕುಟುಂಬದ ಜತೆ ಮಾರುತಿ ನಗರದಲ್ಲಿ ನೆಲೆಸಿದ್ದ. ಮಂಗಳವಾರ ಆತನ ಆಪ್ತ ಸ್ನೇಹಿತ ಸೈಮನ್ ರಾಜ್ ಹುಟ್ಟುಹಬ್ಬವಿತ್ತು. ಈ ಹಿನ್ನೆಲೆಯಲ್ಲಿ ಗೆಳೆಯನಿಗೆ ಇಷ್ಟದ ತಿಂಡಿ ಚಿಕನ್ ರೋಲ್ ಕೊಡಿಸುವ ಸಲುವಾಗಿ ತಡ ರಾತ್ರಿ 2ರ ಸುಮಾರಿಗೆ ಹಳೇಗುಡ್ಡದಹಳ್ಳಿಗೆ ಸೈಮನ್‌ನನ್ನು ಕರೆದುಕೊಂಡು ಚಂದ್ರು ಬಂದಿದ್ದಾನೆ. ಆ ವೇಳೆ ಮತ್ತೊಂದು ಬೈಕ್‌ನಲ್ಲಿ ಶಾಹೀದ್ ಬಂದಿದ್ದು, ಕಿರಿದಾದ ರಸ್ತೆಯಾದ ಕಾರಣ ಪರಸ್ಪರ ಬೈಕ್‌ಗಳು ಸ್ಪರ್ಶವಾಗಿದೆ. ಆಗ ಶಾಹೀದ್‌ಗೆ ಚಂದ್ರು ಬೈದಿದ್ದಾನೆ. ಕೊನೆಗೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಆಗ ತನ್ನ ಸ್ನೇಹಿತರಿಗೆ ಕರೆ ಮಾಡಿ ಕರೆಸಿಕೊಂಡ ಶಾಹೀದ್, ಬಳಿಕ ಚಂದ್ರು ಮತ್ತು ಸೈಮನ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಹಂತದಲ್ಲಿ ಚಂದ್ರು ಹೊಟ್ಟೆಗೆ ಆರೋಪಿಗಳು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಘಟನೆಯಲ್ಲಿ ತೀವ್ರ ಗಾಯಗೊಂಡು ಆತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಈ ಬಗ್ಗೆ ಕೂಡಲೇ ತನಿಖೆ ಕೈಗೆತ್ತಿಕೊಂಡ ಜೆ.ಜೆ.ನಗರ ಪೊಲೀಸರು, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.
Comments are closed.