ಬೆಂಗಳೂರು: ಯುವಕನನ್ನು ಅಪಹರಿಸಿ ಸುಲಿಗೆ ಮಾಡಿ ಲೈಂಗಿಕ ಕಿರುಕುಳ ನೀಡಿದ್ದ ಇಬ್ಬರು ಆರೋಪಿಗಳನ್ನು ಕಾಲಿಗೆ ಗುಂಡು ಹಾರಿಸಿ ಕೊತ್ತನೂರು ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾಪುವಿನ ಮಹಮ್ಮದ್ ಆಶೀಕ್ (22) ಹಾಗೂ ಕುಂದಾಪುರದ ಬೈಂದೂರು ಮೂಲದ ಇಸಾಕ್ (21) ಬಂಧಿತ ಆರೋಪಿಗಳು. ಇವರಿಬ್ಬರು ‘ಗರುಡ 900’ ಗ್ಯಾಂಗ್‌ನ ರೂವಾರಿಗಳು. ಗುಂಡೇಟಿನಿಂದ ಗಾಯಗೊಂಡಿರುವ ಇವರಿಬ್ಬರನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
21 ವರ್ಷದ ಯುವಕ ಕೊತ್ತನೂರು ಠಾಣೆ ವ್ಯಾಪ್ತಿಯಲ್ಲಿ ಮಾರ್ಚ್ 26ರಂದು ಕಾರಿನಲ್ಲಿ ಹೊರಟಿದ್ದರು. ಅವರನ್ನು ಅಡ್ಡಗಟ್ಟಿದ್ದ ಆರೋಪಿಗಳು, ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿ ಕಾರು ಸಮೇತ ಅಪಹರಿಸಿದ್ದರು. ಚಿನ್ನದ ಉಂಗುರ ಹಾಗೂ ಮೊಬೈಲ್ ಕಸಿದುಕೊಂಡಿದ್ದರು. ಯುವಕನ ಬಳಿಯಿದ್ದ ಎಟಿಎಂ ಕಾರ್ಡ್‌ನಿಂದ ಹಣ ಡ್ರಾ ಮಾಡಿಸಿಕೊಂಡಿದ್ದರು. ನಗರದ ಹಲವೆಡೆ ಸುತ್ತಾಡಿಸಿ, ಲೈಂಗಿಕವಾಗಿಯೂ ಬಳಸಿಕೊಂಡು ಕಿರುಕುಳ ನೀಡಿದ್ದರು. ನಂತರ, ಯುವಕನನ್ನು ಬಿಟ್ಟು ಕಾರು ಸಮೇತ ಪರಾರಿಯಾಗಿದ್ದರು. ಅಪಹರಣ ಹಾಗೂ ಸುಲಿಗೆ ಬಗ್ಗೆ ಯುವಕ ದೂರು ನೀಡಿದ್ದರು. ಆರೋಪಿಗಳ ಮಾಹಿತಿ ಕಲೆಹಾಕಿದ್ದ ಪೊಲೀಸರ ವಿಶೇಷ ತಂಡ, ಮಂಗಳೂರಿಗೆ ಹೋಗಿತ್ತಾದರೂ ಆರೋಪಿಗಳು ಸಿಕ್ಕಿರಲಿಲ್ಲ ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ಹೇಳಿದರು.
ಆರೋಪಿಗಳು ಮಂಗಳವಾರ ಜಕ್ಕೂರು ಬಳಿ ಕಾರಿನಲ್ಲಿ ಹೊರಟಿದ್ದ ಮಾಹಿತಿ ಲಭ್ಯವಾಗಿತ್ತು. ಇನ್‌ಸ್ಪೆಕ್ಟರ್ ಚನ್ನೇಶ್ ನೇತೃತ್ವದ ತಂಡ ಸ್ಥಳಕ್ಕೆ ಹೋಗಿ, ಕಾರು ಬೆನ್ನಟ್ಟಿತ್ತು. ಪೊಲೀಸರು ಕಾರು ಅಡ್ಡಗಟ್ಟುತ್ತಿದ್ದಂತೆ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಹಿಡಿಯಲು ಹೋದ ಪಿಎಸ್‌ಐ ಉಮೇಶ್ ಮೇಲೆ ಡ್ರ್ಯಾಗರ್‌ನಿಂದ ಹಲ್ಲೆ ಮಾಡಿದ್ದರು. ಅವಾಗಲೇ ಇನ್‌ಸ್ಪೆಕ್ಟರ್ ಚನ್ನೇಶ್, ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದರು. ಗಾಯಗೊಂಡು ಕುಸಿದು ಬಿದ್ದಿದ್ದ ಆರೋಪಿಗಳನ್ನು ಪೊಲೀಸರೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪಿಎಸ್ಐ ಅವರೂ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಎಸ್ಪಿ ತಿಳಿಸಿದರು.
‘ಗರುಡ 900’ ತಂಡದವರು…
ಚಿಕ್ಕ ವಯಸ್ಸಿನಿಂದಲೇ ಅಪರಾಧ ಕೃತ್ಯ ಎಸಗುತ್ತಿರುವ ಈ ನಟೋರಿಯಸ್ ಆರೋಪಿಗಳು ಬಳಿಕ ವೃತ್ತಿ ಮಾಡಿಕೊಂಡಿದ್ದಾರೆ. ‘ಗರುಡ 900’ ಕಟ್ಟಿಕೊಂಡಿರುವ ಆರೋಪಿಗಳು ಈ ಹೆಸರಿನಲ್ಲಿ ಅಪರಾಧ ಕೃತ್ಯ ಎಸಗುತ್ತಿದ್ದ ಮಾಹಿತಿಯಿದೆ. ಸುಲಿಗೆ ಮಾಡುವ ವೇಳೆಯಲ್ಲೂ ತಂಡದ ಹೆಸರು ಹೇಳಿ ಜನರನ್ನು ಬೆದರಿಸುತ್ತಿದ್ದರು ಎನ್ನಲಾಗಿದೆ.
ಸುಲಿಗೆ, ದರೋಡೆ, ಮನೆಗಳಲ್ಲಿ ಕಳ್ಳತನ, ಜಾನುವಾರು ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿದ್ದರು. ಉಡುಪಿ, ಕುಂದಾಪುರ ಹಾಗೂ ಮಂಗಳೂರು ಭಾಗಗಳಲ್ಲಿ ಕೂಡ ಈ ಖತರ್ನಾಕ್ ಆರೋಪಿಗಳು ಅಪರಾಧ ಎಸಗಿದ ಬಗ್ಗೆ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ಬೆಂಗಳೂರಿಗೆ ಬಂದು ಯುವಕನನ್ನು ಅಪಹರಣ ಮಾಡಿದ್ದರು. ಇದಾದ ಬಳಿಕ ದಾವಣಗೆರೆಯಲ್ಲೂ ಆರೋಪಿಗಳು ಸುಲಿಗೆ ಮಾಡಿರುವ ಮಾಹಿತಿ ಇದೆ ಎಂದು ತನಿಖೆ ವೇಳೆ ತಿಳಿದುಬಂದಿದೆ ಎನ್ನಲಾಗಿದೆ.
ಈ ಹಿಂದಿನ ಕೆಲ ಪ್ರಕರಣಗಳಲ್ಲಿ ಜಾಮೀನು ಪಡೆದಿರುವ ಆರೋಪಿಗಳು, ನ್ಯಾಯಾಲಯದ ವಿಚಾರಣೆಗೆ ಗೈರಾಗುತ್ತಿದ್ದು ಅವರ ವಿರುದ್ಧ 10 ವಾರೆಂಟ್‌ಗಳು ಬಾಕಿಯಿದೆ ಎನ್ನಲಾಗಿದೆ. ಸದ್ಯ ಆರೋಪಿಗಳಿಂದ 10 ಮೊಬೈಲ್, ಕಾರು ಜಪ್ತಿ ಮಾಡಲಾಗಿದೆ.
Comments are closed.