ಕರ್ನಾಟಕ

ಕೊಲೆಯಾದ ಚಂದ್ರು ಕುಟುಂಬಕ್ಕೆ ಬಿಜೆಪಿಯಿಂದ 5 ಲಕ್ಷ ಪರಿಹಾರ; ಸಮಗ್ರ ತನಿಖೆಗೆ ಸಿ.ಟಿ.ರವಿ ಆಗ್ರಹ

Pinterest LinkedIn Tumblr

ಬೆಂಗಳೂರು: ಜೆ.ಜೆ.ನಗರದಲ್ಲಿ ಕೊಲೆಗೀಡಾದ ಚಂದ್ರು ಮನೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನೇತೃತ್ವದ ನಿಯೋಗ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದು ಐದು ಲಕ್ಷ ಪರಿಹಾರ ನೀಡಿದರು.

ಈ ಸಂದರ್ಭದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಿ.ಟಿ.ರವಿ, ಚಂದ್ರು ಹತ್ಯೆ ವಿಚಾರದಲ್ಲಿ ಸಮಗ್ರ ತನಿಖೆ ಆಗಬೇಕು. ಹತ್ಯೆಗೀಡಾದ ಚಂದ್ರು ಅವರ ಸಹೋದರ ನವೀನ್‌ ನಮ್ಮ ಪಕ್ಷದ ಬೂತ್‌ ಸಮಿತಿ ಕಾರ್ಯದರ್ಶಿ. ಏಕಾಏಕಿ ಹತ್ಯೆ ನಡೆದಿದೆ. ಯಾರೂ ನೆರವಿಗೆ ಬರಲಿಲ್ಲ. ಇಲ್ಲಿ ಪೂರ್ವದ್ವೇಷ ಇರಲಿಲ್ಲ. ಬೈಕ್ ತಾಗಿದ್ದನ್ನೇ ನೆಪ ಮಾಡಿ, ಕನ್ನಡ ಮತ್ತು ತಮಿಳು ಮಾತ್ರ ಬರುವುದಾಗಿ ಹೇಳಿದ ಚಂದ್ರುವನ್ನು ಕೊಲೆ ಮಾಡಿದ್ದಾರೆ ಎಂದು ಅವರ ಮನೆಯವರೇ ಹೇಳಿದ್ದಾರೆ ಎಂದರು.

ಪೊಲೀಸ್‌ ಇಲಾಖೆಯವರು ಬಹಳಷ್ಟು ಬಾರಿ ವಾಸ್ತವಿಕ ಸಂಗತಿಗಳ ಕಡೆ ಹೋಗುವುದಕ್ಕಿಂತ ಈ ವಿಚಾರವನ್ನು ಇಲ್ಲಿಗೆ ತಣ್ಣಗೆ ಮಾಡಬೇಕು ಎಂದು ಯೋಚಿಸುತ್ತಾರೆ. ಅದು ತಪ್ಪೇನೂ ಅಲ್ಲ. ಇಂತಹ ಘಟನೆ ಮರುಕಳಿಸಬಾರದು. ಕನ್ನಡನಾಡಿನಲ್ಲಿ ಕನ್ನಡ ಮಾತನಾಡಲಿಲ್ಲ ಎಂದರೆ ಯೋಚಿಸಬೇಕಾದ ವಿಷಯ. ಸಣ್ಣ ಕಾರಣಕ್ಕೆ ಕೊಲೆ ಮಾಡಿದ್ದು ಖಂಡನೀಯ ಎಂದು ಸಿ.ಟಿ ರವಿ ಹೇಳಿದರು.

 

Comments are closed.