ಕರಾವಳಿ

ರಸ್ತೆಗಳ ಬ್ಲಾಕ್‌ಸ್ಪಾಟ್‌ನಲ್ಲಿ ಅಪಘಾತವಾಗಿ ಜೀವಹಾನಿಯಾದರೆ ಅಧಿಕಾರಿಗಳ ವಿರುದ್ಧ ಪ್ರಕರಣ: ಉಡುಪಿ ಡಿಸಿ

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ರಸ್ತೆ ಬ್ಲಾಕ್‌ಸ್ಪಾಟ್‌ಗಳನ್ನು ಸಂಬಂಧಪಟ್ಟ ಹೆದ್ದಾರಿ ಇಲಾಖೆಗಳ ಅಧಿಕಾರಿಗಳು 15 ದಿನಗಳಲ್ಲಿ ತೆರವುಗೊಳಿಸಬೇಕು. 15 ದಿನದ ನಂತರ ಆ ಪ್ರದೇಶದಲ್ಲಿ ಅಪಘಾತ ಸಂಭವಿಸಿ ಜೀವಹಾನಿಯಾದಲ್ಲಿ ರಸ್ತೆಯನ್ನು ನಿರ್ಮಿಸಿ, ನಿರ್ವಹಿಸುತ್ತಿರುವ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಎಚ್ಚರಿಕೆ ನೀಡಿದರು.

ಅವರು ಉಡುಪಿ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್‌ನಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66 ಮತ್ತು 169 ಎ ರಲ್ಲಿ ಒಟ್ಟು 33 ಅಪಘಾತ ಸಂಭವಿಸುವ ಬ್ಲಾಕ್‌ಸ್ಪಾಟ್‌ಗಳನ್ನು ಗುರುತಿಸಿದ್ದು, ಈ ಪ್ರದೇಶದಲ್ಲಿ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಾಗಲೇ ಸೂಚಿಸಿದ್ದು, ಇದುವರೆಗೆ ಅಗತ್ಯ ಕ್ರಮ ಕೈಗೊಳ್ಳದ ರಾಷ್ಟ್ರೀಯ ಹೆದ್ದಾರಿ ಇಲಾಖೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಇನ್ನು 15 ದಿನದಲ್ಲಿ ಈ ಎಲ್ಲಾ ಪ್ರದೇಶಗಳಲ್ಲಿ ಅಗತ್ಯ ದುರಸ್ಥಿ ಕಾರ್ಯ ಕೈಗೊಂಡು ವರದಿ ನೀಡಬೇಕು. ದುರಸ್ಥಿ ಮಾಡದೇ ಈ ಪ್ರದೇಶದಲ್ಲಿ ಅಪಘಾತ ಸಂಭವಿಸಿ, ಜೀವ ಹಾನಿಯಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ, ಸಾವಿಗೆ ಕಾರಣವಾದ ಕುರಿತು ಪ್ರಕರಣ ದಾಖಲಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.

ಬ್ಲಾಕ್‌ಸ್ಪಾಟ್‌ಗಳ ದುರಸ್ಥಿ ಮಾಡುವ ಕುರಿತಂತೆ ರಾಷ್ಟ್ರೀಯ ಹೆದ್ದಾರಿಯ ಯೋಜನಾ ನಿರ್ದೇಶಕರಿಗೆ ಮತ್ತು ಪ್ರಾದೇಶಿಕ ನಿರ್ದೇಶಕರುಗಳಿಗೂ ಸಹ ಪತ್ರ ಬರೆಯುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯೊಳಗಿನ ಇತರೆ ರಸ್ತೆಗಳಲ್ಲಿಯೂ ಇರುವ ಬ್ಲಾಕ್‌ಸ್ಪಾಟ್‌ಗಳಲ್ಲಿ ದುರಸ್ಥಿ ಕಾರ್ಯ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಧಿಕಾರಿಗಳ ನಿರ್ಲಕ್ಷದಿಂದ ಅಪಘಾತಗಳು ಸಂಭವಿಸಿ ಜೀವ ಹಾನಿಯಾದರೆ, ಮರಳಿ ವ್ಯಕ್ತಿಯ ಜೀವ ತರಲು ಸಾಧ್ಯವೇ ಎಂದು ಪ್ರಶ್ನಿಸಿದ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಇತ್ತೀಚೆಗೆ ಸಂತೆಕಟ್ಟೆ ಬಳಿ ಸಂಭವಿಸಿದ ಅಪಘಾತದಲ್ಲಿ ಬಲಿಯಾದ ಪೊಲೀಸ್ ಅಧಿಕಾರಿ ಮತ್ತು ಮಗಳ ಸಾವಿನ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದರು.

ಮಣಿಪಾಲದ ಟೈಗರ್ ಸರ್ಕಲ್ ಬಳಿ ಅಳವಡಿಸಿರುವ ಸಿಗ್ನಲ್‌ನಿಂದ ರಸ್ತೆಯ ಬಲ ಮತ್ತು ಎಡ ಬದಿಯ ಕ್ರಾಸ್‌ಗಳಿಂದ ಬರುವ ವಾಹನ ಸವಾರರಿಗೆ ಸಿಗ್ನಲ್ ಇಲ್ಲದೇ ಇರುವುದರಿಂದ ತೀವ್ರ ತೊಂದರೆಯಾಗುತ್ತಿದ್ದು, ಈ ಬಗ್ಗೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ನಗರಸಭೆಯ ಪೌರಾಯುಕ್ತರಿಗೆ ಸೂಚಿಸಿದರು.

ಮಣಿಪಾಲದ ಈಶ್ವರ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಮೀಸಲಿಟ್ಟ ಪ್ರದೇಶದಲ್ಲಿರುವ ರಿಕ್ಷಾ ನಿಲ್ದಾಣ ತೆರವುಗೊಳಿಸುವ ಬಗ್ಗೆ ಬಂದಿರುವ ದೂರಿನ ಕುರಿತಂತೆ ನಗರಸಭೆ, ಆರ್.ಟಿ.ಓ, ಪೋಲೀಸ್ ಮತ್ತು ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ಜಂಟಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ತಿಳಿಸಿದರು.

ಲಕ್ಷ್ಮೀಂದ್ರ ನಗರದ ಬಳಿ ಯೂಟರ್ನ್ ನಿರ್ಮಾಣದ ಅಗತ್ಯತೆ ಬಗ್ಗೆ ಎಸ್ಪಿ ವಿಷ್ಣುವರ್ಧನ್ ತಿಳಿಸಿದರು. ಕೂಡಲೇ ಇಲ್ಲಿ ಯೂಟರ್ನ್ ನಿರ್ಮಿಸುವಂತೆ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು.

ರಾಷ್ಟ್ರೀಯ ಹೆದ್ದಾರಿಯ ಹೆಜಮಾಡಿಯಿಂದ ಶಿರೂರುವರೆಗೆ ಅಗತ್ಯವಿರುವೆಡೆಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸುವಂತೆ ಎಸ್ಪಿ ತಿಳಿಸಿದರು.

ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿ ವತಿಯಿಂದ 2021-22 ನೇ ಸಾಲಿನಲ್ಲಿ 18754 ವಾಹನ ತಪಾಸಣೆ ಮಾಡಿ, 2731 ಪ್ರಕರಣ ದಾಖಲಿಸಿ, 192 ವಾಹನ ಮುಟ್ಟುಗೂಲು ಹಾಕಿ, ತೆರಿಗೆ 79,81,250 ರೂ. ಹಾಗೂ ದಂಡ, 105,77,020 ರೂ. ಸೇರಿದಂತೆ ಒಟ್ಟು 1,85,58.270 ರೂ. ಅನ್ನು ವಸೂಲು ಮಾಡಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರ್ ಮಾಹಿತಿ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವೀಣಾ, ರಾಷ್ಟ್ರೀಯ ಹೆದ್ದಾರಿ ಹಾಗೂ ಲೋಕೋಪಯೋಗಿ ಇಲಾಖೆ ಹಾಗೂ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.