ಕರಾವಳಿ

ಮಾಜಿ ಶಾಸಕ, ಸಂಸದ ಐ.ಎಂ ಜಯರಾಮ್ ಶೆಟ್ಟಿಯವರ ಹೆಸರಲ್ಲಿ ಕುಂದಾಪುರ ರೈಲು‌ ನಿಲ್ದಾಣದ ಮಾರ್ಗದಲ್ಲಿ‌‌ ಸರ್ಕಲ್ ನಿರ್ಮಾಣ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಮಾಜಿ ಶಾಸಕ, ಮಾಜಿ ಸಂಸದ ಹಾಗೂ ಐ.ಎಂ.ಜೆ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ದಿವಂಗತ ಐ.ಎಂ ಜಯರಾಮ್ ಶೆಟ್ಟಿ ಅವರ ಸ್ಮರಣಾರ್ಥವಾಗಿ ಮೂಡ್ಲಕಟ್ಟೆಯಲ್ಲಿರುವ ಕುಂದಾಪುರ ರೈಲು ನಿಲ್ದಾಣಕ್ಕೆ ತೆರಳುವ ಮಾರ್ಗದಲ್ಲಿ ಸುಸಜ್ಜಿತ ಸರ್ಕಲ್ ನಿರ್ಮಿಸಲಾಗಿದೆ.

ಕುಂದಾಪುರ ಭಾಗದಲ್ಲಿ ಹೊಸತನದ ಹಾಗೂ ವಿಶಿಷ್ಟ ಶೈಲಿಯಲ್ಲಿ ನಿರ್ಮಾಣಗೊಂಡ ವೃತ್ತ ಇದಾಗಿದ್ದು‌ ‘ಐ.ಎಂ ಜಯರಾಮ್ ಶೆಟ್ಟಿ ಸರ್ಕಲ್’ ಎಂದು ನಾಮಕರಣ ಮಾಡಲಾಗಿದೆ. ವಿಧಾನ ಪರಿಷತ್ ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿಯವರು ಏ.10 ಭಾನುವಾರ ಸರ್ಕಲ್ ಲೋಕಾರ್ಪಣೆಗೊಳಿದರು.

ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ ಈ ವೇಳೆ ಶುಭ ಕೋರಿ ಮಾತನಾಡಿ, ವಿವಿಧ ಭಾಗಗಳಿಂದ ರೈಲು‌ ನಿಲ್ದಾಣಕ್ಕೆ ವಾಹನಗಳ ಮೂಲಕ ರೈಲು ಪ್ರಯಾಣಿಕರು ಆಗಮಿಸುತ್ತಾರೆ. ಈ ವೇಳೆ ಸುಗಮ‌ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಉತ್ತಮ ಸಾಧನೆಗೈದ ಐ.ಎಂ ಜಯರಾಮ್ ಶೆಟ್ಟಿಯವರ ಹೆಸರಿನಲ್ಲಿ ಸಟ್ವಾಡಿ-ಮೂಡ್ಲಕಟ್ಟೆಯಲ್ಲಿ ನಿರ್ಮಾಣಗೊಂಡ ಸರ್ಕಲ್ ಅವರ ಜನ್ಮದಿನದಂದು ಲೋಕಾರ್ಪಣೆಗೊಂಡಿದೆ. ಈ ಕೊಡುಗೆಯನ್ನು ಸಮರ್ಪಕವಾಗಿ ಬಳಸಿ ಅದರ ಪರಿಶುದ್ಧತೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ನಿರ್ವಹಣೆ ಮಾಡಬೇಕು ಎಂದು ಕರೆಕೊಟ್ಟರು.

ಮುಖ್ಯ ಅತಿಥಿಗಳಾಗಿ ನಟ-ನಿರ್ದೇಶಕ ರಿಷಬ್ ಶೆಟ್ಟಿ, ಕಂದಾವರ ಗ್ರಾಮಪಂಚಾಯತ್ ಅಧ್ಯಕ್ಷೆ ಬಾಬಿ, ಗ್ರಾ.ಪಂ ಸದಸ್ಯ ಅಭಿಜಿತ್ ಕೊಠಾರಿ, ಉಡುಪಿ ಮಹಾಲಕ್ಷ್ಮಿ ಕೋ-ಆಪರೇಟಿವ್ ಬ್ಯಾಂಕಿನ‌ ಅಧ್ಯಕ್ಷ ಯಶಪಾಲ್ ಸುವರ್ಣ, ಉದ್ಯಮಿ ಡಾ. ಗೋವಿಂದ ಬಾಬು ಪೂಜಾರಿ, ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್, ಐ.ಎಂ ಜಯರಾಮ್ ಶೆಟ್ಟಿ ಕುಟುಂಬಿಕರಾದ ವಿದ್ಯಾ ಜಯರಾಮ್ ಶೆಟ್ಟಿ, ರಥನ್ ಜೆ. ಶೆಟ್ಟಿ, ಸಿದ್ದಾರ್ಥ್ ಜೆ. ಶೆಟ್ಟಿ, ವತ್ಸಲಾ ಸುಧಾಕರ್ ಹೆಗ್ಡೆ, ರಮಾ ಬಾಲಕೃಷ್ಣ ಶೆಟ್ಟಿ, ಐ.ಎಂ ರಾಜರಾಮ್ ಶೆಟ್ಟಿ ಕಾರ್ಯಕ್ರಮದಲ್ಲಿದ್ದರು.

ಎಂ.ಎನ್.ಬಿ.ಎಸ್ ಟ್ರಸ್ಟಿನ ವಿದ್ಯಾ‌ ಜೆ. ಶೆಟ್ಟಿ‌ ಸ್ವಾಗತಿಸಿದರು. ಎಂಐಟಿ ಕಾಲೇಜಿನ ಗ್ರಂಥಪಾಲಕ ಜಗದೀಶ್ ನಿರೂಪಿಸಿದರು. ಟ್ರಸ್ಟಿ ಸಿದ್ದಾರ್ಥ್ ಜೆ. ಶೆಟ್ಟಿ ವಂದಿಸಿದರು.

 

Comments are closed.