ಉಡುಪಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಅವರ ವಿರುದ್ದ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತೋಷ್ ಪಾಟೀಲ್ ಅವರ ಸಹೋದರ ಪ್ರಶಾಂತ್ ಗೌಡ ಪಾಟೀಲ್ ಅವರು ದೂರು ದಾಖಲು ಮಾಡಿದ್ದು ಅದರಂತೆ ಸಚಿವ ಈಶ್ವರಪ್ಪ ಹಾಗೂ ಅವರ ಆಪ್ತರಾದ ಬಸವರಾಜ್, ರಮೇಶ ಹಾಗೂ ಇತರರ ವಿರುದ್ದ ಕಲಂ 306ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣದ ಸಾರಾಂಶ..
2020-21 ನೇ ಸಾಲಿನಲ್ಲಿ ಹಿಂಡಲಗಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಶ್ರೀ ಲಕ್ಷ್ಮೀ ದೇವಿ ಜಾತ್ರೆಯ ಜರುಗುವ ಹಿನ್ನಲೆಯಲ್ಲಿ ರಸ್ತೆ ಕಾಮಗಾರಿ, ಚರಂಡಿ ಕಾಮಗಾರಿ, ಪೆವರ್ಸ್ ಜೋಡಣೆ ಇತ್ಯಾದಿ ಕಾಮಗಾರಿಗಳನ್ನು ಮಾಡಿಕೊಡಲು ಊರಿನ ಪ್ರಮುಖರು ಮತ್ತು ಸ್ವಾಮೀಗಳು ಸೇರಿಕೊಂಡು ಸಚಿವರನ್ನು ಮನವಿಮಾಡಿದ್ದು ನೀವು ನಮ್ಮ ಕಾರ್ಯಕರ್ತರು ಇದ್ದಿರಿ, ನೀವು ಕೆಲಸ ಶುರು ಮಾಡಿ, ನಾನು ಕಾಮಗಾರಿಗಳಿಗೆ ಎಷ್ಟೇ ಹಣ ಆದರೂ ಪರವಾಗಿಲ್ಲಾ ಕೆಲಸ ಶುರು ಮಾಡಿ ಎಂದು ಈಶ್ವರಪ್ಪನವರು ತಿಳಿಸಿದ್ದರು. ಊರಿಗೆ ಹಿಂದಿರುಗಿದ ಪ್ರಮುಖರು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು, ಹಿಂಡಲಗಾ ಇವರು ಸಂತೋಷ ಕೆ ಪಾಟೀಲ್ ಗೆ ಕೆಲಸ ಪ್ರಾರಂಭಿಸಲು ತಿಳಿಸಿದ್ದರು. ಅದರಂತೆ ಸಂತೋಷ ಕ ಪಾಟೀಲ್ ಮತ್ತು ಉಳಿದ ಗುತ್ತಿಗೆದಾರರು ಸೇರಿಕೊಂಡು ಹಿಂಡಲಗಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 4 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಯನ್ನು ಸ್ವಂತ ಹಣದಿಂದ ಹಾಗೂ ಇತರರ ಸಹಾಯದಿಂದ ಸರ್ಕಾರದ ಹಣವಿಲ್ಲದೇ ಪೂರ್ಣಗೊಳಿಸಿರುತ್ತಾರೆ. ಸದ್ರಿ ಕಾಮಗಾರಿಗಳ ಬಿಲ್ ಗಾಗಿ ಸಚಿವರಾದ ಕೆ.ಎಸ್ ಈಶ್ವರಪ್ಪ ಮತ್ತು ಅವರ ಆಪ್ತರಾದ ಬಸವರಾಜ್ ಮತ್ತು ರಮೇಶ್ ರವರನ್ನು ಹಲವು ಸಾರಿ ಭೇಟಿಯಾಗಿ ಕೆಲಸ ಪೂರ್ಣಗೊಳಿಸಿದ್ದೇವೆ ಬಿಲ್ಲನ್ನು ಮಂಜೂರು ಮಾಡಲು ವಿನಂತಿಸಿಕೊಂಡಿರುತ್ತಾರೆ. ಆದರೆ ಅವರೆಲ್ಲರೂ ಹಾಗೆ ಕೆಲಸ ಆಗುವುದಿಲ್ಲಾ 40 ಪರ್ಸೆಂಟ್ ಕಮೀಷನ್ ನೀಡಿದರೆ ಬಿಲ್ ಪಾಸ್ ಮಾಡಿಸುವುದಾಗಿ ಹೇಳಿದ್ದರು. ಈ ಕಮೀಷನ್ ವಿಷಯ ಕುರಿತು ಬೆಳಗಾವಿ ಗುತ್ತಿಗೆದಾರರ ಸಂಘದವರು ಸರಕಾರಕ್ಕೆ ದೂರು ಸಲ್ಲಿಸಿದ್ದರು.
ಅದೇ ರೀತಿ ಗುತ್ತಿಗೆದಾರರಾದ ಸಂತೋಷ ಕೆ. ಪಾಟೀಲ್ ರವರು ಮಾದ್ಯಮಗಳ ಮೂಲಕ ಮಾರ್ಚ್ ತಿಂಗಳಿನಲ್ಲಿ ಸಚಿವರಾದ ಕೆ.ಎಸ್ ಈಶ್ವರಪ್ಪ ಇವರು 40 ಪರ್ಸೆಂಟ್ ಕಮೀಷನ್ ಗೆ ಬೇಡಿಕೆ ಇಟ್ಟಿದ್ದಾರೆಂದು ಮಾಧ್ಯಮಗಳಲ್ಲಿ ಆರೋಪಿಸಿದ್ದರು. ಇದಕ್ಕೆ ಮುಂಚಿತವಾಗಿ ಸಂತೋಷನು ತನ್ನ ಹೆಂಡತಿ ಜಯಾ ಹಾಗೂ ಸಹೋದರರನ ಬಳಿ ಈ ವಿಷಯ ತಿಳಿಸಿರುತ್ತಾರೆ. ಸಂತೋಷರವರಿಗೆ ಪದೇ ಪದೇ ಏಕೆ ಬೆಂಗಳೂರಿಗೆ ಹೋಗುವುದು ಎಂದು ಪ್ರಶ್ನಿಸಿದಾಗ ಅವರು ಈ ಕಾಮಗಾರಿಗಳ ಬಿಲ್ಲಿನ ವಿಷಯವಾಗಿ ಕೆ.ಎಸ್ ಈಶ್ವರಪ್ಪ ಸಚಿವರು ಇವರನ್ನು ಭೇಟಿಯಾಗಿ ಬಿಲ್ ಪಾಸ್ ಮಾಡಿಸಲು ಹೋಗುತ್ತಿದ್ದೇನೆಂದು ತಿಳಿಸುತ್ತಿದ್ದರು. ಇದೇ ಬಿಲ್ ಪಾಸ್ ಆಗದ ಕಾರಣ ಆರ್.ಡಿ.ಪಿ.ಆರ್ ಸಚಿವರಾದ ಕೆ.ಎಸ್ ಈಶ್ವರಪ್ಪ ಮತ್ತು ಅವರ ಆಪ್ತರಾದ ರಮೇಶ್ ಮತ್ತು ಬಸವರಾಜ್ ರವರ ವಿರುದ್ಧ ವಿಡಿಯೋ ಫೂಟೇಜ್ ಮುಖೇನ 4 ಕೋಟಿ ಕಾಮಗಾರಿ ಹಣದ ಬಿಲ್ ನ್ನು ಪಾಸ್ ಮಾಡದ ಕಾರಣ ಮುಂದೆ ಆಗುವ ಅನಾಹುತಕ್ಕೆ ನೀವೇ ಕಾರಣರಾಗಿರುತ್ತೀರಿ ಎಂದು ಮಾಧ್ಯಮಗಳ ಮೂಲಕ ವಿಷಯ ಪ್ರಸ್ತಾಪಿಸಿರುತ್ತಾರೆ.
ಈತನು ಅನೇಕ ರೀತಿಯ ರಸ್ತೆ ಕಾಮಗಾರಿಗಳಿಗೆ ಹಣ ಹಾಕಿದ್ದರಿಂದ ಅಡಚಣೆಯಾಗಿ 40 ಪರ್ಸೆಂಟ್ ಕಮೀಷನ್ ವಿಷಯದ ಕುರಿತು ರಾಜ್ಯ ಬಿ.ಜೆ.ಪಿ ಉಸ್ತುವಾರಿಯಾದ ಅರುಣ ಸಿಂಗ್ ರವರಿಗೆ ಹಾಗೂ ದೆಹಲಿ ಮಟ್ಟದ ಬಿ.ಜೆ.ಪಿ ವರಿಷ್ಟರಿಗೆ ಪ್ರಧಾನ ಮಂತ್ರಿಗಳ ಕಛೇರಿಗೆ ಭೇಟಿ ನೀಡಿ ಕೆ.ಎಸ್ ಈಶ್ವರಪ್ಪ ರವರ ವಿರುದ್ಧ ಬಿಲ್ ಪಾಸು ಮಾಡದ ಹಾಗೂ 40 ಪರ್ಸೆಂಟ್ ಕಮೀಷನ್ ಕುರಿತು ಮನವಿ ಸಲ್ಲಿಸಿದ್ದು ಇರುತ್ತದೆ. ಆದರೂ ಸಹ ಬಿಲ್ ಪಾಸ್ ಆಗಿರುವುದಿಲ್ಲ. ಅದೇ ವಿಷಯದಲ್ಲಿ ಸಂತೋಷ ಕೆ ಪಾಟೀಲ್ ಈತನು ಆರೋಪಿಗಳಾದ ಕೆ.ಎಸ್ ಈಶ್ವರಪ್ಪ ಹಾಗೂ ಅವರ ಆಪ್ತರಾದ ರಮೇಶ್ ಮತ್ತು ಬಸವರಾಜ್ ಹಾಗೂ ಇತರರ ಬಿಲ್ಲನ್ನು ಮಂಜೂರು ಮಾಡದ ಕಾರಣ ಮನನೊಂದು ತನ್ನ ಮೊಬೈಲಿನಿಂದ ವಾಟ್ಸ್ ಅಫ್ ಮುಖೇನ ಡೆತ್ ನೋಟ್ ಸಂದೇಶ್ ಮಾಧ್ಯಮಗಳಿಗೆ ಮತ್ತು ಆಪ್ತರಿಗೆ ಕಳುಹಿಸಿದ್ದು, ಏಪ್ರಿಲ್ 11 ರ ರಾತ್ರಿ 11ಗಂಟೆಯಿಂದ 12 ರ ಬೆಳಿಗ್ಗೆ 10ಗಂಟೆಯ ಮಧ್ಯಾವಧಿಯಲ್ಲಿ ಉಡುಪಿಯ ಶಾಂಭವಿ ಲಾಡ್ಜ್ ನ ರೂ ನಂಬ್ರ 207 ರಲ್ಲಿ ಅನುಮಾನಾಸ್ಪದ ಸಾವು ಆಗಿದ್ದು ಈ ಸಾವಿಗೆ ಕಾರಣರಾದ ಕೆ.ಎಸ್ ಈಶ್ವರಪ್ಪ, ಬಸವರಾಜ್, ರಮೇಶ್ ಹಾಗೂ ಇತರರು ಕಾರಣರಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರಶಾಂತ್ ಗೌಡ ಪಾಟೀಲ್ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Comments are closed.