ಬೆಂಗಳೂರು: ಗುತ್ತಿಗೆದಾರ ಸಂತೋಷ್ ಕೆ ಪಾಟೀಲ್ ಆತ್ಮಹತ್ಯೆ ಪ್ರಕರಣ ಹಿನ್ನೆಲೆ ಸಚಿವ ಕೆ.ಎಸ್. ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿದೆ.
ಹೈಕಮಾಂಡ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಅಲ್ಲದೆ ಹೈಕಮಾಂಡ್ ಸೂಚನೆ ಬೆನ್ನಲ್ಲೇ ಸಚಿವರು ಮೈಸೂರು ಪ್ರವಾಸ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಇಂದು ಮಧ್ಯಾಹ್ನ ಸಿಎಂ ಭೇಟಿಯಾಗಿ ರಾಜೀನಾಮೆ ಸಲ್ಲಿಕೆ ಮಾಡುವ ಸಾಧ್ಯತೆಗಳಿವೆ. ಇತ್ತ ಮಂಗಳೂರು ಪ್ರವಾಸದಲ್ಲಿರುವ ಸಿಎಂ ಮಧ್ಯಾಹ್ನ ರಾಜಧಾನಿಗೆ ವಾಪಸ್ಸಾಗಲಿದ್ದಾರೆ.
ನಿನ್ನೆಯ ಬೆಳವಣಿಗೆ..
ಸಚಿವ ಕೆಎಸ್ ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಸಂತೋಷ್ ಆತ್ಮಹತ್ಯೆ ಪ್ರಕರಣದ ಬೆಳವಣಿಗೆ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜತೆ ಸಿಎಂ ಬಸವರಾಜ ಬೊಮ್ಮಾಯಿ ಚರ್ಚೆ ಮಾಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ದೂರವಾಣಿ ಮೂಲಕ ಚರ್ಚೆ ನಡೆಸಿದ್ದಾರೆ. ಮಂಗಳೂರಿನಲ್ಲಿ ಇರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿಯಲ್ಲಿ ಇರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಜತೆ ಮಾತನಾಡಿದ್ದಾರೆ. ಈ ಮಧ್ಯೆ, ಸಂತೋಷ್ ಆತ್ಮಹತ್ಯೆ ಬಗ್ಗೆ ಬಿಜೆಪಿ ಹೈಕಮಾಂಡ್ ಮಾಹಿತಿ ಪಡೆದುಕೊಂಡಿರುವುದು ತಿಳಿದುಬಂದಿದೆ.
ರಾಜ್ಯಸರ್ಕಾರ, ರಾಜ್ಯ ಬಿಜೆಪಿಯಿಂದ ವರಿಷ್ಠರು ಮಾಹಿತಿ ಪಡೆದಿದ್ದಾರೆ. ಸಿಎಂ, ಸುರಾನಾರಿಂದ ಹೈಕಮಾಂಡ್ ಮಾಹಿತಿ ಪಡೆದುಕೊಂಡಿದೆ. ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿರುವ ನಿರ್ಮಲ್ ಕುಮಾರ್ ಸುರಾನಾ, ಸಿಎಂ ಬಸವರಾಜ ಬೊಮ್ಮಾಯಿ ದೂರವಾಣಿ ಮೂಲಕ ವರಿಷ್ಠರಿಗೆ ಮಾಹಿತಿ ನೀಡಿದ್ದಾರೆ.
ಏಪ್ರಿಲ್ 12ರ ಮಧ್ಯಾಹ್ನದ ವೇಳೆ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಕೆ ಪಾಟೀಲ್ ಉಡುಪಿಯ ಖಾಸಗಿ ಲಾಡ್ಜ್ ಒಂದರಲ್ಲಿ ಮೃತಪಟ್ಟಿರುವುದು ತಿಳಿದುಬಂತು. ಜೊತೆಗೆ, ತನ್ನ ಸಾವಿಗೆ ಸಚಿವ ಕೆಎಸ್ ಈಶ್ವರಪ್ಪ ಅವರೇ ಕಾರಣ, ಎಲ್ಲಾ ಆಸೆಗಳನ್ನು ಬದಿಗೊತ್ತಿ ತಾನು ಇಂತಹ ನಿರ್ಧಾರ ಕೈಗೊಂಡಿರುವ ಬಗ್ಗೆ ನೀಡಿರುವ ವಾಟ್ಸಾಪ್ ಸಂದೇಶ ಕೂಡ ಪತ್ತೆಯಾಗಿತ್ತು.
ಘಟನೆಯ ಹಿನ್ನೆಲೆ, ಈಶ್ವರಪ್ಪ ರಾಜೀನಾಮೆಗೆ ವಿಪಕ್ಷಗಳು ಒತ್ತಾಯ ಮಾಡಿದ್ದವು. ಕಾಂಗ್ರೆಸ್ ನಾಯಕರು ಬಿಜೆಪಿ ನಾಯಕರು ಇರುವಲ್ಲಿ ತೆರಳಿ ಮುತ್ತಿಗೆ ಹಾಕುವ, ಪ್ರತಿಭಟನೆ ನಡೆಸುವ ಕಾರ್ಯವನ್ನು ಕೂಡ ಮಾಡಿದ್ದರು. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದ್ದ ಮಂಗಳೂರಿನ ಹೊಟೇಲ್ಗೆ ಕೂಡ ಕೈ ನಾಯಕರು, ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆಗೆ ಮುಂದಾಗಿದ್ದರು. ಇಂದು (ಏಪ್ರಿಲ್ 13) ರಾಜ್ಯಪಾಲರನ್ನು ಭೇಟಿಯಾಗಿ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸುವುದಾಗಿ ಕಾಂಗ್ರೆಸ್ ಹೇಳಿತ್ತು.
Comments are closed.