ಕರಾವಳಿ

ಫೋನ್‌ನಲ್ಲಿ ಡಿಕೆಶಿಗೆ ನಿಂದನೆ ಪ್ರಕರಣ: ಸುಳ್ಯದ ವ್ಯಕ್ತಿಗೆ 2 ವರ್ಷ ಜೈಲು ಶಿಕ್ಷೆ

Pinterest LinkedIn Tumblr

ಮಂಗಳೂರು: ಡಿ.ಕೆ. ಶಿವಕುಮಾರ್‌ ಅವರನ್ನು ನಿಂದಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ನ್ಯಾಯಾಲಯವು ಆರೋಪಿಗೆ ಜೈಲು ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ.

(ಡಿ.ಕೆ. ಶಿವಕುಮಾರ್- ಸಂಗ್ರಹ ಚಿತ್ರ)

ಡಿ.ಕೆ. ಶಿವಕುಮಾರ್ ಅವರು 2016ರಲ್ಲಿ ಇಂಧನ ಸಚಿವರಾಗಿದ್ದ ವೇಳೆ ನಿಂದಿಸಿದ್ದ ಸುಳ್ಯ ತಾಲೂಕಿನ ಬೆಳ್ಳಾರೆಯ ಗಿರಿಧರ್ ರೈ ಎಂಬವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿ ಸುಳ್ಯ ನ್ಯಾಯಾಲಯದ ನ್ಯಾಯಾಧೀಶ​ ಸೋಮಶೇಖರ್ ಅವರು ತೀರ್ಪು ನೀಡಿದ್ದಾರೆ.

ಗಿರಿಧರ್ ರೈ ಅವರು 2016ರ ಫೆಬ್ರವರಿ 28ರಂದು ಅಂದಿನ ಇಂಧನ ಸಚಿವ ಡಿಕೆಶಿ ಅವರಿಗೆ ವಿದ್ಯುತ್ ಸಮಸ್ಯೆ ಹೇಳಿಕೊಳ್ಳಲು ಕರೆ ಮಾಡಿದ್ದು, ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಅಂದಿನ ಮೆಸ್ಕಾಂ ಎಂಡಿ ಮೂಲಕ ಗಿರಿಧರ್ ರೈ ವಿರುದ್ಧ ಡಿ.ಕೆ. ಶಿವಕುಮಾರ್ ಪೊಲೀಸ್ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಡಿದ್ದ ಪೊಲೀಸರು ಗಿರಿಧರ್ ರೈ ಅವರನ್ನು ಬಂಧಿಸಿದ್ದರು.

ಈ ಕುರಿತಾಗಿ ಸಾಕ್ಷಿ ಹೇಳಲು ಸುಳ್ಯ ಕೋರ್ಟ್‌ ಡಿ.ಕೆ. ಶಿವಕುಮಾರ್‌ ಅವರಿಗೆ ಮೂರು ಬಾರಿ ಸಮಸ್ಸ್, ಒಂದು ಬಾರಿ ವಾರೆಂಟ್ ಜಾರಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ಡಿಕೆಶಿ ಅವರು 2021ರ ಸೆ.29ರಂದು ಸುಳ್ಯ ಕೋರ್ಟ್‌ಗೆ ಹಾಜರಾಗಿ, ವಿಚಾರಣೆ ಎದುರಿಸಿದ್ದರು.ಇದೀಗ ಸೋಮವಾರ ಮತ್ತೆ ವಿಚಾರಣೆ ನಡೆಸಿದ ಕೋರ್ಟ್ ಗಿರಿಧರ್ ರೈ ಅವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ.

 

Comments are closed.