ಕರಾವಳಿ

ರಾಜ್ಯದ ಬಿಜೆಪಿ ಸರಕಾರ ಕಮಿಷನ್ ಸರಕಾರ; ಈ ಬಗ್ಗೆ ಪ್ರಧಾನಿ ಮೌನ ಏಕೆ?: ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ

Pinterest LinkedIn Tumblr

ಕುಂದಾಪುರ: ರಾಜ್ಯ ಬಿಜೆಪಿ ಸರಕಾರ 40% ಕಮಿಷನ್ ಪಡೆಯುವ ಬಗ್ಗೆ ಕೆಂಪಣ್ಣ ಎನ್ನುವರು‌ ಪ್ರಧಾನಿಯವರಿಗೆ ಪತ್ರ ಬರೆದು ವರ್ಷ ಕಳೆದಿದೆ. ಕೂಡ ಪ್ರಧಾನಮಂತ್ರಿ ಕಾರ್ಯಾಲಯದಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇರುವುದು ಮೌನಂ ಸಮ್ಮತಿ ಲಕ್ಷಣಂ ವರ್ತನೆಯಿದು ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಹಿಂದಿನ ಪ್ರಧಾನಿಯವರಿಗೆ ಮೌನ ಮುರಿಯಲ್ಲ ಎಂದು ಜನರು ಹೇಳುತ್ತಿದ್ದರು. ಆದರೆ ಪ್ರತಿಯೊಂದಕ್ಕೂ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದ ಈಗಿನ ಪ್ರಧಾನಿಯವರ ಮೌನದಿಂದ ಇರುವುದು ಅವರು ಪರೋಕ್ಷವಾಗಿ ಭ್ರಷ್ಟಾಚಾರಕ್ಕೆ ಒಪ್ಪಿದಂತಾಗುತ್ತದೆ ಎಂದು ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಆಕ್ರೋಷ ವ್ಯಕ್ತಪಡಿಸಿದರು.

ಕುಂದಾಪುರ ತಾಲೂಕಿನ ಹೆಮ್ಮಾಡಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯವನ್ನು ಆಳುತ್ತಿರುವ ಬಿಜೆಪಿ ಸರಕಾರದ ಒಂದೊಂದೇ ಹಗರಣಗಳು ನೊಂದವರಿಂದ ಕೇಳಿಬರುತ್ತಿದೆ. ಪ್ರಧಾನಿಯವರು ಕರ್ನಾಟಕಕ್ಕೆ ಬಂದಾಗ ಅಂದಿನ ಸಿಎಂ‌ ಸಿದ್ದರಾಮಯ್ಯ ಅವರದ್ದು 10 ಪರ್ಸೆಂಟ್ ಸರಕಾರ ಎಂದು ರಾಜಕೀಯವಾಗಿ ಲೇವಡಿ ಮಾತನಾಡಿದ್ದರು. ಆದರೆ ಈಗ ಜನರು, ಗುತ್ತಿಗೆದಾರರು ಸರಕಾರದ ಬಗ್ಗೆ ಪರ್ಸೆಂಟ್ ವಿಚಾರದ ಲೇವಡಿ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ 40 ಶೇಖಡಾ ಕಮಿಷನ್ ಆರೋಪಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಜೊತೆಗೆ ಆತನ ಕುಟುಂಬ ಬೀದಿಗೆ ಬೀಳಲು ಸರಕಾರದ ಸಚಿವರು, ಅಧಿಕಾರಿಗಳ ಮೇಲೆ ಕಮಿಷನ್ ಆರೋಪ ಬಂದಿದೆ. ಆತನೇನು ಕಾಂಗ್ರೆಸ್ ಪಕ್ಷದವನಲ್ಲ ಬದಲಾಗಿ ಬಿಜೆಪಿಯ ಕಾರ್ಯಕರ್ತನೆ ಆಗಿದ್ದಾನೆ. ಮಠಗಳಿಗೆ ಹಣ ನೀಡುವ ಬಗ್ಗೆ ನಮ್ಮ ತಕರಾರಿಲ್ಲ. ಆದರೆ ಅದಕ್ಕೂ ಲಂಚ ನೀಡಬೇಕಾದ ಬಗ್ಗೆ ಮಠಾಧೀಶರೊಬ್ಬರು ಕೂಡ ಮೂವತ್ತು ಶೇಖಡಾ ಕಮಿಷನ್ ವಿಚಾರ ಪ್ರಸ್ತಾಪ ಮಾಡಿದ್ದು ಈ‌ ಸರಕಾರದಿಂದ ಏನು ನಿರೀಕ್ಷೆ ಮಾಡಲು ಸಾಧ್ಯವಿದೆ ಎಂದು ಮಂಜುನಾಥ್ ಭಂಡಾರಿ ಕಿಡಿಕಾರಿದರು.

ಬಿಜೆಪಿ ಸರಕಾರ ಕಮಿಷನ್ ಸರಕಾರವಾಗಿದೆ. ಇಂತ ಕೆಲಸಕ್ಕೆ ಇಂತಿಷ್ಟು ಎಂಬ ದರಪಟ್ಟಿ ನಿಗದಿಪಡಿಸಿ ಕೆಲಸ ಮಾಡುತ್ತಿದ್ದಾರೆ. ಈ ಸರಕಾರದಿಂದ ಒಳಿತನ್ನು ಬಯಸಲು ಆಗಲ್ಲ ಎಂದವರು ಗಂಭೀರ ಆರೋಪ ಮಾಡಿದ್ದಾರೆ.

70 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಸರಕಾರ 50 ಲಕ್ಷ ಕೋಟಿ ಸಾಲ ಮಾಡಿ ದೇಶದ ಅಭಿವೃದ್ಧಿ ಮಾಡಿತ್ತು. ಆದರೆ 7 ವರ್ಷದಲ್ಲಿ ಕೇಂದ್ರ ಬಿಜೆಪಿ ಸರಕಾರ 150 ಲಕ್ಷ ಕೋಟಿ ಸಾಲ ಮಾಡಿ ಯಾವುದೇ ಅಭಿವೃದ್ಧಿ ಮಾಡಲು ಆಗಿಲ್ಲ. ಚುನಾವಣೆ ಸಂದರ್ಭದಲ್ಲಿ ಕೆಲವು ಭಾವನಾತ್ಮಕ ಪರಿವರ್ತನೆ ಮಾಡಲಾಗುತ್ತಿದೆ. ಜಾತಿಗಳ ಮಧ್ಯೆ, ಕೋಮುಗಳ ಮಧ್ಯೆ ಕಂದಕ ನಿರ್ಮಾಣ ಮಾಡಿ ಅದರಿಂದ ಉಪಯೋಗ ಪಡೆಯಲಾಗುತ್ತಿದೆ. ಬಿಜೆಪಿಯವರು ಮಾತ್ರ ದೇಶ ಭಕ್ತರಲ್ಲ. ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರು ದೇಶ ಭಕ್ತರು. ಅವರು ವಿಭಜನೆ ಮಾಡಿದ್ದು ನಾವೇನು ಎದೆ ಬಗೆದು ರಾಷ್ಟ್ರ ಭಕ್ತಿ ಬಗ್ಗೆ ತೋರಿಸಲು ಆಗುವುದಿಲ್ಲ. ಕೋಮು ಭಾವನೆಗೆ ಜನರು ಬೆಲೆ ನೀಡಬಾರದು ಎಂದು ಮಂಜುನಾಥ್ ಭಂಡಾರಿ ಹೇಳಿದರು.

Comments are closed.