ಕರಾವಳಿ

ಬಿಜೆಪಿ‌ ಟಿಕೆಟ್ ಕೊಡಲ್ಲ, ರಾಜಕೀಯದಾಸೆ‌ ನನಗಿಲ್ಲ; ನನ್ನ ಹೋರಾಟ ಹಿಂದುತ್ವ, ಹಿಂದು ರಾಷ್ಟ್ರಕ್ಕಾಗಿ: ಪ್ರಮೋದ್ ಮುತಾಲಿಕ್ (Video)

Pinterest LinkedIn Tumblr

ಕುಂದಾಪುರ: ಬಿಜೆಪಿಯವರು ನನಗೆ ಟಿಕೆಟ್ ಕೊಡಲ್ಲ. ನಾನು ರಾಜಕೀಯಕ್ಕಾಗಿ ಯಾವುದೇ ಹೋರಾಟ ಮಾಡುತ್ತಿಲ್ಲ. ನನಗೆ 67 ವರ್ಷವಾಗಿದೆ. ಮನೆ ಬಿಟ್ಟು 45 ವರ್ಷದಿಂದ ಹಿಂದುತ್ವಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ದೇಶದ, ಹಿಂದುತ್ವದ ಉಳಿವಿಗಾಗಿ ಕೆಲಸ ಮಾಡಿದ್ದು ಹೊರತು ಬಿಜೆಪಿ ಟಿಕೆಟ್ ಪಡೆಯುವ ದೃಷ್ಟಿಯಲ್ಲಿ ಕೆಲಸ ಮಾಡಿಲ್ಲ. ಟಿಕೆಟ್ ಪಡೆದು ಅಧಿಕಾರ ಪಡೆದರೂ ನಾನು ಹಿಂದುತ್ವಕ್ಕಾಗಿ ಕೆಲಸ ಮಾಡುತ್ತೇನೆ. ನನ್ನಂತ‌ ಪ್ರಾಮಾಣಿಕನಿಗೆ, ಹಿಂದುತ್ವವಾದಿ, ಹೋರಾಟಗಾರನಿಗೆ ನೂರಕ್ಕೆ ನೂರು ಬಿಜೆಪಿ ಟಿಕೆಟ್ ನೀಡುವುದಿಲ್ಲ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಕುಂದಾಪುರದಲ್ಲಿ ಸೋಮವಾರ ಸಂಜೆ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ನಾನು ರಾಜಕೀಯ ಬಾಗಿಲು‌ ಮುಚ್ಚಿದ್ದೇನೆ…
ನಾನು ಪಕ್ಷದ ಟಿಕೆಟಿಗಾಗಿ ನಾನು ಹೋರಾಡುತ್ತೇನೆಂದರೂ ಅದರಲ್ಲಿ ತಪ್ಪೇನು? ಯಾಕೆ ಮಾಡಬಾರದು. ಬಿಜೆಪಿ ಯಾರ ಸ್ವತ್ತಲ್ಲ. ಪಕ್ಷ ಬೆಳೆಯಲು ನಾವು ಶ್ರಮವಹಿಸಿದ್ದೇವೆ, ರಕ್ತ ಸುರಿಸಿ ಪಕ್ಷ ಕಟ್ಟಿದ್ದು ನಮಗೆ ಕೇಳಲು ಹಕ್ಕಿದೆ. ಆದರೆ ನಾನು ರಾಜಕೀಯ ಬಾಗಿಲು‌ ಮುಚ್ಚಿದ್ದೇನೆ. ಸ್ಪರ್ಧೆಯಿಲ್ಲ, ರಾಜಕೀಯ‌ ದೃಷ್ಟಿಕೋನ ಇಲ್ಲ. ಹಿಂದುತ್ವ, ಹಿಂದು ರಾಷ್ಟ್ರದ ನಿರ್ಮಾಣದ ಗುರಿ ಮುಂದಿಟ್ಟುಕೊಂಡು ಸಾಗುತ್ತಿರುವೆ ಎಂದರು.

ಜನರಿಗೆ ಅರಿವು ಬಂದಿದೆ…
ಹಿಂದೂ ಸಂಘಟನೆಗೆ ಸೀಮಿತವಾಗಿದ್ದ ವಿಚಾರ ಇದೀಗಾ ದೇಶವ್ಯಾಪಿಯಾಗಿದೆ. ಹಿಂದೂ ಸಂಘಟನೆಗಳು ಕಳೆದ ಹದಿನೈದು ವರ್ಷಗಳಿಂದ ಮಾಡುತ್ತಿದ್ದೇವೆ. ಯಾವುದು ದೇಶಕ್ಕೆ ಹಿತ ಯಾವುದು ಮಾರಕ ಎಂಬ ವಿಚಾರಗಳು ಮನೆಮನೆಗೆ ತಲುಪಿದೆ. ಸಮಾಜ ಇದೀಗಾ ಜಾಗೃತವಾಗಿದ್ದು‌ ಮುಂದೆಯೂ ಈ ಹೋರಾಟದ ಹಿಂದಿನ ಉದ್ದೇಶ ಯಶಸ್ವಿಯಾಗಲಿದೆ. ಸಂವಿಧಾನ ಹಾಗೂ ನ್ಯಾಯಾಂಗಕ್ಕೆ ಬೆಲೆ ಕೊಡದವರ ಮಾನಸಿಕತೆ ಪರಿವರ್ತನೆಯಾಗುವ ತನಕ ಹೋರಾಟ ನಡೆಯಲಿದೆ ಎಂದು ಕಟುವಾಗಿ ನುಡಿದರು.

ಗಂಗೊಳ್ಳಿ ಕಾರ್ಯಕ್ರಮಕ್ಕೆ ಬ್ಯಾನ್ ಮಾಡಿದ ಬಗ್ಗೆ…
ಬಿಜೆಪಿ ಸರಕಾರವು ಹಿಂದೂ ಹಾಗೂ ಹಿಂದುತ್ವದ ವಿಚಾರ ಮುಂದಿಟ್ಟುಕೊಂಡು ಕೇಂದ್ರ ಹಾಗೂ ರಾಜ್ಯದಲ್ಲಿ ಗೆದ್ದುಬಂದಿದೆ. ಸಂಘಟನೆ ಮೂಲಕವಾಗಿ ಆಡಳಿತಕ್ಕೆ ಬಂದು ಈಗ ಹಿಂದುತ್ವ ಆಚರಣೆ ಮರೆತು ಹಣ ಹಾಗೂ ಜಾತಿಯಿಂದ ಗೆಲ್ಲುತ್ತೇವೆ ಎಂಬ ಬಿಜೆಪಿಗರ ಅಹಂಕಾರ ಮುಳುವಾಗಲಿದೆ. ಈಗಲೇ ಎಚ್ಚೆತ್ತುಕೊಳ್ಳಬೇಕು. ನಿಷೇಧ ಹೇರುತ್ತಿರುವುದು, ಗೂಂಡಾ ಕಾಯ್ದೆ ಹಾಕುವ ಪ್ರವೃತ್ತಿ ಖಂಡನೀಯ. ಸರಕಾರ ಮುತಾಲಿಕ್ ಅವರನ್ನು ಬ್ಯಾನ್ ಮಾಡುತ್ತಿಲ್ಲ. ಬದಲಾಗಿ ಸ್ವಾತಂತ್ರ, ಹೋರಾಟ, ಹಿಂದುತ್ವವನ್ನು ಬ್ಯಾನ್ ಮಾಡುವ ವ್ಯವಸ್ಥೆಯಾಗುತ್ತಿದೆ. ಗಂಗೊಳ್ಳಿ‌ ನಿರ್ಬಂಧ ದಲ್ಲೂ ಕೂಡ ರಾಜಕೀಯವಾಗಿ ಆಗಿದೆಯೇ ಇನ್ನ್ಯಾರ ಕೈವಾಡ ಆಗಿದೆಯೋ ತಿಳಿತಿಲ್ಲ.‌ಗಂಗೊಳ್ಳಿಯಲ್ಲಿ ಗಲಭೆ ಮಾಡಿದವರನ್ನು‌ ಮಟ್ಟ ಹಾಕಲು ಆಗದ ಸರಕಾರ ನನ್ನನ್ನು ತಡೆದಿದೆ. ನಾನು‌ ಪ್ರಚೋದನಕಾರಿಯಾಗಿ ಮಾತನಾಡಿದ್ದರೆ ಕೇಸ್ ದಾಖಲಿಸಬಹುದಿತ್ತು. ಆದರೆ ನನ್ನ ಬ್ಯಾನ್ ಮಾಡಿ ಅಕ್ಷಮ್ಯ ಅಪರಾಧ ಮಾಡಿದ್ದು ಗಂಗೊಳ್ಳಿ ಸಹಿತ ತಾಲೂಕಿನಲ್ಲಿ ಸರಕಾರ ಮತ್ತು ಇಲಾಖೆ‌ ಮೇಲೆ ಆಕ್ರೋಷ ವ್ಯಕ್ತವಾಗಿದೆ ಎಂದರು.

ಸಿದ್ದರಾಮಯ್ಯ ಹೇಳಿಕೆ‌ ಅರ್ಥಹೀನ..
ಹಿಂದೂ ಸಂಘಟನೆ ಕಾರ್ಯಕರ್ತರು ಕಾನೂನುಬಾಹಿರ, ದೇಶದ್ರೋಹ ಕೆಲಸ ಈವರೆಗೆ ಮಾಡಿಲ್ಲ. ದೇಶಭಕ್ತರಾಗಿ ದೇಶದ ಹಿತದೃಷ್ಟಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಘಟನೆ ಮೇಲೆ ಬುಲ್ಡೋಜರ್ ಕ್ರಮ ಮಾಡಿ ಎಂಬ ಸಿದ್ದರಾಮಯ್ಯ ಹೇಳಿಕೆ ಅರ್ಥ ಹೀನ. ಎಸ್.ಡಿ.ಪಿ.ಐ ಸ ಮೊದಲಾದ ದೇಶದ್ರೋಹಿ ಸಂಘಟನೆಯನ್ನು ನಿಷೇಧ ಮಾಡಿ ಎಂದು ಕಾಂಗ್ರೆಸ್ ಹಾಗೂ ಕಮ್ಯೂನಿಷ್ಟ್, ಬಿಜೆಪಿ ವಿರೋಧ ಮಾಡುತ್ತಿದ್ದು ಅಂತವರಿಗೆ ಸಂಬಂಧಪಟ್ಟ ಅಕ್ರಮದ ಮೇಲೆ ಬುಲ್ಡೋಜರ್ ಹತ್ತಿಸಿ ಎನ್ನುವ ಕೂಗು ಕೇಳಿಬರುತ್ತಿದೆ. ಅದನ್ನು ಸಿದ್ಧರಾಮಯ್ಯ‌ ಎಲ್ಲಿಂದಲೋ ಎಲ್ಲಿಗೋ ಜೋಡಿಸುತ್ತಿದ್ದಾರೆ. ಇದು ಅವರ ಯೋಗ್ಯತೆಗೆ, ಸ್ಥಾನಕ್ಕೆ ಈ ವಿಚಾರವಲ್ಲ‌ ಎಂದು ಕುಟುಕಿದರು.

ಸರಕಾರಕ್ಕೆ ಗಟ್ಸ್ ಇಲ್ಲ…
ರಾಜ್ಯಾದ್ಯಂತ ಸಾಕಷ್ಟು ಮಸೀದಿಗಳು ಅಕ್ರಮವಾಗಿದೆ. ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡರೆ 50% ಶೇಖಡಾ ಮಸೀದಿಗಳನ್ನು ಕೆಡವಬೇಕಾಗುತ್ತದೆ.‌ ಆದರೆ ಯಾವುದೇ ಸರಕಾರ ಹಾಗೂ ರಾಜಕೀಯ ಪಕ್ಷಗಳು ಕೂಡ ಯೋಗಿಯವರಂತಹ ನಿರ್ಧಾರ ತೆಗೆದುಕೊಳ್ಳುವ ಧೈರ್ಯ ಕರ್ನಾಟಕದಲ್ಲಿ ಕಾಣಿಸುತ್ತಿಲ್ಲ. ಇಂದಲ್ಲ ನಾಳೆ ಈ ಕ್ರಮಕೈಗೊಂಡರೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು‌ ಸಾಧ್ಯ‌.‌ ಆಳುವರಿಗೆ ಧೈರ್ಯ, ತಾಕತ್ತು, ಗಟ್ಸ್ ಇದ್ದರೆ ರಾಜ್ಯಾದ್ಯಂತ ಇರುವ ಅಕ್ರಮ ಮಸೀದಿ ತೆರವು ಮಾಡಬೇಕು. ರಸ್ತೆ ಅಗಲೀಕರಣ ಸಮಯ ಮಸೀದಿ, ದರ್ಗಾ ತೆಗಯಲ್ಲ, ಆದರೆ ದೇವಸ್ಥಾನ ತೆರವು ಮಾಡುತ್ತೀರಿ. ಹುಬ್ಬಳ್ಳಿ ಪ್ರಕರಣದಲ್ಲಿ ಗಲಾಟೆ ಮಾಡಿದ್ದಾರೆ. ಅಲ್ಲಿನ ಅಕ್ರಮದ ಮೇಲೆ ಬುಲ್ಡೋಜರ್ ಹತ್ತಿಸಲು ಗಟ್ಸ್ ಇಲ್ಲವೆ ಎಂದು ಪ್ರಶ್ನಿಸಿದ ಮುತಾಲಿಕ್, ಸುಮ್ಮನೆ ಬಡಾಯಿ ಮಾತು ನಿಲ್ಲಿಸಿ ಕಾನೂನಿನ ಹಿನ್ನೆಲೆ ಕೆಲಸ ಮಾಡಿ ತೋರಿಸಿ ಎಂದು ಸರಕಾರಕ್ಕೆ ಚಾಟಿ ಬೀಸಿದರು.

ಈ ವೇಳೆ‌ ಶ್ರೀರಾಮಸೇನೆಯ ಮಂಗಳೂರು ವಿಭಾಗೀಯ ಪ್ರಮುಖ್ ಮೋಹನ್ ಭಟ್ ಹಾಗೂ ಉಡುಪಿ ಜಯರಾಮ್ ಇದ್ದರು.

 

 

 

Comments are closed.