ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಹಗರಣಕ್ಕೆ ಸಂಬಂಧಿಸಿದಂತೆ ಲೇಡಿ ಕಿಂಗ್ ಪಿನ್ ಆರೋಪಿ ದಿವ್ಯಾ ಹಾಗರಗಿ ಸೇರಿದಂತೆ ಐವರು ಆರೋಪಿಗಳ ಬಂಧನವಾಗಿದೆ.
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮದ ಆರೋಪ ಕೇಳಿಬಂದು ಕಳೆದ 18 ದಿನಗಳಿಂದ ದಿವ್ಯಾ ಹಾಗರಗಿ ಮತ್ತು ತಂಡ ನಾಪತ್ತೆಯಾಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿತ್ತು. ಮೂರು ತಂಡಗಳಾಗಿ ರಚನೆ ಮಾಡಿದ್ದ ಸಿಐಡಿ ತಂಡ ಕೊನೆಗೂ ಕಳೆದ ರಾತ್ರಿ ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಿದೆ.
ಕಲಬುರಗಿಯ ದಿವ್ಯಾ ಹಾಗರಗಿ ಮತ್ತು ಆಕೆಯ ಪತಿಯ ಒಡೆತನದ ಜ್ಞಾನಜ್ಯೋತಿ ಶಾಲೆಯಲ್ಲಿ ಪಿಎಸ್ಐ ನೇಮಕಾತಿ ಪರೀಕ್ಷೆ ಕೇಂದ್ರವಿತ್ತು. ಈ ವೇಳೆ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಮೂಲಗಳಿಂದ ತಿಳಿದುಬಂದಿತ್ತು.
ಇಂದು ಮಧ್ಯಾಹ್ನ ಹೊತ್ತಿಗೆ ಸಿಐಡಿ ಅಧಿಕಾರಿಗಳ ತಂಡ ದಿವ್ಯಾ ಹಾಗರಗಿ ಮತ್ತು ಇತರ ಬಂಧಿತರನ್ನು ಕಲಬುರಗಿಗೆ ಕರೆತರಲಿದ್ದು, ಅಲ್ಲಿ ಆಕೆಯ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ. ಬಂಧಿತ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಜಿಲ್ಲೆಯ ಪ್ರಭಾವಿ ಬಿಜೆಪಿ ನಾಯಕಿಯಾಗಿ ಗುರುತಿಸಿಕೊಂಡಿದ್ದರು.
Comments are closed.