ಕರ್ನಾಟಕ

ಪ್ರೀತಿ ನಿರಾಕರಿಸಿದ ಯುವತಿ ಮೇಲೆ ಆಸಿಡ್ ಎರಚಿದ ಪಾಗಲ್ ಪ್ರೇಮಿ ಬಂಧನಕ್ಕೆ‌ ಬಲೆ ಬೀಸಿದ ಬೆಂಗಳೂರು ಪೊಲೀಸರು..!

Pinterest LinkedIn Tumblr

ಬೆಂಗಳೂರು: ಪ್ರೀತಿಸಲು ನಿರಾಕರಿಸಿದ ಕಾರಣಕ್ಕೆ ಯುವತಿಯ ಮೇಲೆ ಪಾಗಲ್ ಪ್ರೇಮಿಯೊಬ್ಬ ಆಸಿಡ್ ದಾಳಿ ಮಾಡಿರುವ ಭಯಾನಕ ಘಟನೆ ಬೆಂಗಳೂರಿನ ಸುಂಕದಕಟ್ಟೆಯ ಬಳಿ ನಡೆದಿದ್ದು ಆರೋಪಿ‌ ಬಂಧನಕ್ಕೆ ಬಲೆ ಬೀಸಲಾಗಿದೆ.

ಗಂಭೀರ ಗಾಯಗೊಂಡಿರುವ 23 ವರ್ಷದ ಯುವತಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯುವತಿಯ ಬೆನ್ನು, ಕುತ್ತಿಗೆ, ತಲೆಯ ಭಾಗಕ್ಕೆ ಆಸಿಡ್ ಬಿದ್ದು ಗಂಭಿರ ಸ್ವರೂಪದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಸುಂಕದಕಟ್ಟೆಯ ಮುತ್ತೂಟ್ ಫಿನ್ ಕಾರ್ಪ್ ಬಳಿ ಈ ದುಷ್ಕೃತ್ಯ ನಡೆದಿದ್ದು, ಯುವತಿ ಮೇಲೆ ಸೈಕೋ ಪ್ರೇಮಿ ನಾಗೇಶ್ ಎಂಬಾತ ಆ್ಯಸಿಡ್ ದಾಳಿ ಮಾಡಿದ್ದಾನೆ. ಬೆಳಗ್ಗೆ ಎಂಟೂವರೆಯ ಸುಮಾರಿಗೆ ಯುವತಿ ತನ್ನ ತಂದೆಯ ಬೈಕ್‌ನಲ್ಲಿ ಕೆಲಸ ಮಾಡುವ ಕಚೇರಿಗೆ ಬಂದಿದ್ದಾಳೆ. ಮಗಳನ್ನು ಕಚೇರಿಗೆ ಡ್ರಾಪ್ ಮಾಡಿ ತಂದೆ ಅಲ್ಲಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಯುವತಿ ಇದ್ದ ಜಾಗಕ್ಕೆ ಬಂದ ಕಿರಾತಕ ನಾಗೇಶ್ ಆಕೆಯ ಮೇಲೆ ಆಸಿಡ್ ದಾಳಿ ಮಾಡಿದ್ದಾನೆ.

ಕಳೆದ ಕೆಲ ಸಮಯಗಳಿಂದ ಯುವತಿಯ ಬೆನ್ನುಬಿದ್ದಿದ್ದ ವಿಕೃತ ಪ್ರೇಮಿ ನಾಗೇಶ್, ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಆದರೆ ಆಕೆ ತಿರಸ್ಕರಿಸಿದ್ದಳು. ನೀನು ನನ್ನ ಅಣ್ಣನಂತೆ, ನಿನ್ನನ್ನು ಪ್ರೀತಿ ಮಾಡಲು ಸಾಧ್ಯವಿಲ್ಲ ಎಂದು ಅನೇಕ ಸಲ ಹೇಳಿದ್ದಳು. ಅದಾಗ್ಯೂ ಆತ ಈಕೆಯ ಬೆನ್ನು ಬಿದ್ದಿದ್ದು, ಪ್ರೀತಿಸಲೇಬೇಕೆಂದು ಬೆದರಿಕೆ ಹಾಕಿದ್ದ. ಆದರೆ ಆಕೆ ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಕ್ಕೆ ಇಂದು ಬೆಳಗ್ಗೆ ಕಚೇರಿ ಬಳಿ ತೆರಳಿ ಆಸಿಡ್‌ ದಾಳಿ ಮಾಡಿದ್ದಾನೆ.

ಕಳೆದ ವರ್ಷವಷ್ಟೇ ಎಂಕಾ ಮುಗಿಸಿ ಉದ್ಯೋಗದಲ್ಲಿದ್ದ ಯುವತಿ ಏಳೆಂಟು ತಿಂಗಳ ಹಿಂದಷ್ಟೇ ಮುತ್ತೂಟ್‌ ಫಿನ್ ಕಾರ್ಪ್‌ಗೆ ಉದ್ಯೋಗಕ್ಕೆ ಸೇರಿದ್ದಳು. ಮನೆಯವರ ಮುದ್ದಿನ ಮಗಳಾಗಿ ಪ್ರೀತಿ ಗಳಿಸಿದ್ದ ಯುವತಿಯನ್ನು ತಂದೆ ತಾಯಿ ಕೂಲಿ ಕೆಲಸ ಮಾಡಿ ಓದಿಸಿದ್ದರು. ಮುಂದಿನ ತಿಂಗಳು ಆಕೆಯ ಅಕ್ಕನ ಮದುವೆಗೆ ದಿನ ನಿಗದಿಯಾಗಿತ್ತು.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರುಆರೋಪಿ ನಾಗೇಶ್‌ನ ಬಂಧನಕ್ಕೆ ಬಲೆ ಬೀಸಿದ್ದಾರೆ.

Comments are closed.